ಚಿತ್ರದುರ್ಗ
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಮತ್ತೆ ಮುಖಭಂಗ ಅನುಭವಿಸಿದ್ದಾರೆ. ಸೋಮವಾರ ಕರೆದಿದ್ದ ಸಾಮಾನ್ಯ ಸಭೆಗೆ ಕೊರಂ ಕೊರತೆ ಎದುರಾದ ಕಾರಣ ಸಭೆ ಮತ್ತೆ ಮುಂದೂಡಲ್ಪಟ್ಟಿದೆ.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಪದೇ ಪದೇ ಕೊರಂ ಕೊರತೆ ಎದುರಾಗುತ್ತಿದ್ದು, ಇದು ಏಳನೇ ಬಾರಿ ಪುನರಾವರ್ತನೆಯಾಗಿದೆ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ವಿರುದ್ದ ಬಂಡಾಯ ಸಾರಿರುವ ಸದಸ್ಯರು, ಅವರನ್ನು ಪದಚ್ಯುತಗೊಳಿಸಲು ಸಜ್ಜಾಗಿದ್ದು, ಫೆ.7ರಂದು ಅವರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ವಿಶೇಷ ಸಭೆಯನ್ನು ಗೊತ್ತು ಮಾಡಲಾಗಿದೆ.
ಏತನ್ಮದ್ಯೆ ತಮ್ಮ ಅಧಿಕಾರ ಉಳಿಸಿಕೊಳ್ಳಲು ನಾನಾ ನಮೂನೆಯ ಕಸರತ್ತು ನಡೆಸಿರುವ ಸೌಭಾಗ್ಯ ಬಸವರಾಜನ್ ಸೋಮವಾರ ಸಾಮಾನ್ಯ ಸಭೆ ಕರೆದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ ಈ ಸಭೆಗೂ ಸದಸ್ಯರು ಬಾರದಿರುವ ಕಾರಣ ಅವರು ಮತ್ತೊಮ್ಮೆ ಮುಖಭಂಗ ಅನುಭವಿಸಿದಂತಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಕಳೆದ ಹಲವಾರು ವರ್ಷಗಳಿಂದ ಬರಪೀಡಿತ ಪ್ರದೇಶವಾಗಿದ್ದು, ಅಂತರ್ಜಲ ಕುಸಿದಿರೋದ್ರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ನಡುವೆ ಹೈಕಮಾಂಡ್ ಒಡಂಬಡಿಕೆಯಂತೆ ಮೊದಲ 15ತಿಂಗಳ ಅವಧಿಗೆ ಅಧ್ಯಕ್ಷರ ಕುರ್ಚಿ ಹಿಡಿದಿದ್ದ ಸೌಭಾಗ್ಯ ಬಸವರಾಜನ್, ವಿಧಾನಸಭೆ ಚುನಾವಣೆಗೆ ತಮ್ಮ ಪತಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡದೆ ತಾವೇ ಮುಂದುವರೆದಿದ್ದಾರೆ. ಹೀಗಾಗಿ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಸದಸ್ಯರು ಅವಿಶ್ವಾಸ ಮಂಡನೆಗೆ ಸಹಿ ಹಾಕಿದ್ದಾರೆ. ಆದರೂ ಪಟ್ಟು ಬಿಡದ ಸೌಭಾಗ್ಯ ಬಸವರಾಜನ್, ಸಾಮಾನ್ಯ ಸಭೆಗಳನ್ನು ಕರೆಯುತ್ತಿದ್ದಾರೆ, ಆದರೆ ಏಳನೇ ಬಾರಿಗೂ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ.
ಈ ಬಗ್ಗೆ ಅಧ್ಯಕ್ಷರನ್ನು ಮಾತನಾಡಿಸಿದಾಗ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆಯಲ್ವಾ ಅಂತ ಕೇಳಿದ್ರೆ, ಸೌಭಾಗ್ಯ ಬಸವರಾಜನ್ ಮಾತ್ರ ಕಾಂಗ್ರೆಸ್ ಪಕ್ಷ ನನ್ನ ಪತಿಗೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ, ಹೀಗಾಗಿ ಪಂಚಾಯತ್‍ರಾಜ್‍ಇಲಾಖೆ ನಿಯಮದ ಪ್ರಕಾರ ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿದ್ದೇನೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವ ಸಲುವಾಗಿಯೇ ನಾನು ಸಭೆ ಕರೆಯುತ್ತಿದ್ದೇನೆ, ಆದರೆ ಸದಸ್ಯರು ಬರುತ್ತಿಲ್ಲ ನಾನೇನು ಮಾಡಲಿ ಅಂತ ಸಮಜಾಯಿಷಿ ನೀಡಿದ್ದಾರ ಶತಾಯಗತಾಯ ಅಧ್ಯಕ್ಷರನ್ನ ಕೆಳಗಿಳಿಸಲೇ ಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಸದಸ್ಯರು ಸರ್ವ ಪಕ್ಷಗಳ ಸದಸ್ಯರ ಸಹಿಯನ್ನೊಳಗೊಂಡ ಪತ್ರವನ್ನ ಸಲ್ಲಿಸಿದ್ದು, ಕಳೆದ ಒಂದು ವಾರದಿಂದ ಗೋವಾ, ಮಡಿಕೇರಿ ಸೇರಿದಂತೆ ವಿವಿಧೆಡೆಗೆ ಪ್ರವಾಸ ತೆರಳಿದ್ದಾರೆ. ಹೀಗಾಗಿ ಸಾಮಾನ್ಯ ಸಭೆಗೆ ಹಾಜರಾಗಿದ್ದ ಬೆರಳೆಣಿಕೆಯಷ್ಟು ಸದಸ್ಯರು ಕೋರಂ ಕೊರತೆಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಕುರಿತ ಚರ್ಚೆಗೆ ಅವಕಾಶ ಸಿಗದೆ ಹೊರನಡೆದಿದ್ದಾರೆ.
ಈ ರೀತಿಯಾಗಿ ಪದೇ ಪದೇ ಸಭೆಗೆ ಕೋರಂ ಇಲ್ಲದೆ ಮುಂದೂಡಿದರೆ ಬರಪೀಡಿತ ಜಿಲ್ಲೆ ಅಭಿವೃದ್ಧಿ ಕಥೆ ಏನು ಅಂತ ಕೇಳಿದ್ರೆ, ನಮ್ಮ ಸದಸ್ಯರು ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ಅವಕಾಶ ಕೋರಿದ್ದಾರೆ, ಈ ನಡುವೆ ಸಭೆ ಕರೆದಿದ್ದಾರೆ. ಆದರೆ ನಮ್ಮ ಸದಸ್ಯರ ಹಿತದೃಷ್ಟಿಯಿಂದ ಎಲ್ಲರೂ ಸೇರಿ ಪ್ರವಾಸ ಹೊರಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರಲಿಲ್ವಾ? ಹಾಗೆಯೇ ಇದೂ ಕೂಡ, ನಮ್ಮ ಸದಸ್ಯರ ಮೇಲೆ ನಮಗೆ ವಿಶ್ವಾಸ ಇದೆ, ಯಾರೂ ಕೂಡ ವ್ಯಾಪಾರಕ್ಕೆ ಕುದುರುವುದಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ..
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ರೆಸಾರ್ಟ್ ರಾಜಕೀಯ ಇದೀಗ ಚಿತ್ರದುರ್ಗ ಜಿಲ್ಲೆಯಲ್ಲೂ ಶುರುವಾಗಿದೆ, ಒಂದೆಡೆ ಜಿಲ್ಲಾ ಪಂಚಾಯ್ತಿ ಸದಸ್ಯರೆಲ್ಲಾ ಪ್ರವಾಸ ತೆರಳಿದರೆ ಮತ್ತೊಂದೆಡೆ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸೌಭಾಗ್ಯ ಬಸವರಾಜನ್, ಬಿಜೆಪಿ ಶಾಸಕರ ಬಳಿ ತೆರಳಿ ವಿಶ್ವಾಸ ಮತ ಯಾಚನೆ ವೇಳೆ ಬೆಂಬಲ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದೆಲ್ಲದರ ನಡುವೆ ಜಿಲ್ಲೆಯ ಅಭಿವೃದ್ಧಿ ಕುರಿತು ನಡೆಯಬೇಕಿದ್ದ ಸಾಮಾನ್ಯ ಸಭೆಗಳು ಕುರ್ಚಿ ಕಿತ್ತಾಟಕ್ಕೆ ಬಲಿಯಾಗುತ್ತಿರೋದು ವಿಷಾಧನೀಯ.
ರಾಜ್ಯದಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರು ಮತ್ತು ಬಿಜೆಪಿ ಶಾಸಕರ ರೆಸಾರ್ಟ್ ರಾಜಕೀಯದ ರೋಗ ಇದೀಗ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿಗೂ ಅಂಟಿದೆ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಅಧ್ಯಕ್ಷ ಗಾಧಿಯ ಕುರ್ಚಿ ಕಿತ್ತಾಟ ಸದ್ಯ ರೆಸಾರ್ಟ್ ತಲುಪಿದ್ದು, ಬರಪೀಡಿತ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಟುತ್ತಾ ಸಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ