ನರೆ ಪೀಡಿತರಿಗೆ ತ್ವರಿತವಾಗಿ ಪರಿಹಾರ ವಿತರಿಸಿ

ದಾವಣಗೆರೆ:

    ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾನಿಗೊಂಡಿರುವ ಶಾಲೆ, ಆಸ್ಪತ್ರೆ, ರಸ್ತೆ, ಕೆರೆಗಳನ್ನು ತಕ್ಷಣವೇ ದುರಸ್ತಿಗೊಳಿಸುವುದರ ಜೊತೆಗೆ ನೆರೆ ಪೀಡಿತರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ನೆರೆಪೀಡಿತ ಪ್ರವಾಹದ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲು ನೆರೆಯಿಂದ ಹಾನಿಗೊಳಗಾದವಗಳನ್ನು ತಮ್ಮ ತಮ್ಮ ಇಲಾಖೆಯ ಅನುದಾನ, ಎನ್‍ಡಿಆರ್‍ಎಫ್ ನಿಧಿ ಮೂಲಕ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕೆರೆ, ಕಟ್ಟೆ, ರಸ್ತೆ, ಶಾಲೆಗಳ ದುರಸ್ತಿಗೆ ಅನುದಾನ ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.

     ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಕೆಲಸ ಮಾಡುವಾಗ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ನಿಮ್ಮಲ್ಲಿ ಹಣ ಇರದಿದ್ದರೆ, ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿ, ಅನುದಾನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡುತ್ತದೆ ಎಂದ ಅವರು, ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕೆಂದು ಹೇಳಿದರು.

    ಜಿಲ್ಲೆಯಲ್ಲಿ ಸಂಪೂರ್ಣ ಮನೆ ಬಿದ್ದುಹೋಗಿರುವ ಮತ್ತು ಭಾಗಶಃ ಬಿದ್ದುಹೋಗಿರುವ ಎ ಮತ್ತು ಬಿ ವರ್ಗಗಳನ್ನು ಸರ್ಕಾರ ಸೇರ್ಪಡೆಗೊಳಿಸಿ ಇಬ್ಬರಿಗೂ ಮನೆ ಕಟ್ಟಿಸಿಕೊಳ್ಳಲು ರೂ.5 ಲಕ್ಷ ಪರಿಹಾರ ನೀಡುತ್ತದೆ. ಒಂದು ವೇಳೆ ಅವರೇ ಮನೆ ಕಟ್ಟಿಕೊಳ್ಳುವುದಾದರೆ ತಕ್ಷಣ ಒಂದು ಲಕ್ಷ ರೂ. ಬಿಡುಗಡೆ ಮಾಡಿ, ಇನ್ನುಳಿದ 4 ಲಕ್ಷ ರೂ.ಗಳನ್ನು ಇನ್ನೂ ಹತ್ತು ತಿಂಗಳೊಳಗೆ ನೀಡಬೇಕು. ಅಕಸ್ಮಾತ್ ಮನೆ ಕಟ್ಟಿಸಿಕೊಳ್ಳದಿದ್ದರೆ, ಸರ್ಕಾರದಿಂದ ರಾಜೀವ್ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

     ಮಳೆಯಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರು ಸಂಕೋಚ ಮಾಡಿಕೊಂಡು ಸಂಬಂಧಿಕರ ಮನೆಯಲ್ಲಿ ಇರುವುದು ಬೇಡ. ಬದಲಾಗಿ ಬಾಡಿಗೆ ಮನೆಯಲ್ಲಿರಲು ತಿಂಗಳಿಗೆ 5 ಸಾವಿರ ರೂ. ನೀಡಬೇಕು. ಮಳೆನೀರು ಮನೆಗಳಿಗೆ ನುಗ್ಗಿ ಸಣ್ಣಪುಟ್ಟ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣಕ್ಕೆ ಅವರ ಖಾತೆಗೆ ರೂ. 10 ಸಾವಿರ ರೂ. ಜಮೆ ಮಾಡಬೇಕೆಂದು ಹೇಳಿದರು.

     ರಾಜ್ಯದ ಇತಿಹಾಸದಲ್ಲಿಯೇ ಇಂಥ ಮಳೆ ಕಂಡಿರಲಿಲ್ಲ. ಅದೇಕೋ ಏನೋ ದೇವರು ಕೆಂಗಣ್ಣು ಬಿಟ್ಟಿದ್ದಾನೆ. ಹಾಗೇ ದೇವರು ಕೆಂಗಣ್ಣು ಬಿಟ್ಟಿದ್ದರೆ ನಾವುಗಳು ಸುಮ್ಮನೆ ಕೂರಬೇಕಾಗಿಲ್ಲ. ಜನರ ಸಂಕಷ್ಟಗಳಿಗೆ ನೆರವಾಗಬೇಕು. ಹಾಗೇ ನೋಡಿದರೆ ಜಿಲ್ಲೆಯಲ್ಲಿ ನೆರೆಹಾವಳಿ ಅಷ್ಟು ದೊಡ್ಡಮಟ್ಟದಲ್ಲಿ ಆಗಿಲ್ಲ. ಹೊನ್ನಾಳಿ, ಚನ್ನಗಿರಿಯಲ್ಲಿ ಸ್ವಲ್ಪ ಆಗಿದೆ. ಸರ್ಕಾರ ಜನರಿಗಾಗಿಯೇ ಕಾರ್ಯನಿರ್ವಹಿಸುತ್ತಿದೆ. ಅವರು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಹೋಗಾಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಎಂದರು.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಅ.18 ರಿಂದ 22 ರವರೆಗೆ ಜಿಲ್ಲೆಯಲ್ಲಿ ಹಲವೆಡೆ ಭಾರೀ ಮಳೆಯಾಗಿದೆ. ಅ.22 ರಂದು ದಾವಣಗೆರೆ ತಾಲ್ಲೂಕಿನ ಪುಟಗನಾಳ್ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಪೀರಿ ಬಾಯಿ ಎಂಬುವವರು ಮೃತಪಟ್ಟಿದ್ದು, ಇವರ ಕುಟುಂಬದವರಿಗೆ ಈಗಾಗಲೇ ಆರ್‍ಟಿಜಿಎಸ್ ಮುಖಾಂತರ 5 ಲಕ್ಷ ರೂ. ಪರಿಹಾರದ ಮೊತ್ತ ಜಮೆ ಮಾಡಲಾಗಿದೆ.

   ನಗರದ ಶಂಕರವಿಹಾರ ಬಡಾವಣೆಯ 100ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಲೋಕಿಕೆರೆ ಗ್ರಾಮದ 22 ಮನೆಗಳಿಗೆ ನೀರು ನುಗ್ಗಿದ್ದು, ಅವರ ಮನೆಗಳಿಗೆ ಅಗತ್ಯವಾದ ತಿಂಡಿ-ಊಟದ ವ್ಯವಸ್ಥೆ ಮಾಡಲಾಗಿತ್ತು. ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಎ.ಕೆ.ಬಸವರಾಜಪ್ಪ ಎಂಬುವವರು ರಾತ್ರಿ ಸಮಯದಲ್ಲಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದ್ದು, ಅವರ ಶೋಧ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.

    ಆರ್‍ಡಿಪಿಆರ್ ಕಾರ್ಯಪಾಲಕ ಅಭಿಯಂತರ ಪರಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು 160 ಕಿಮೀ ರಸ್ತೆ ಹಾಳಾಗಿದೆ. 13 ಸೇತುವೆಗಳು ಹಾಗೂ 15 ಕೆರೆಗಳು ಹಾನಿಗೊಳಗಾಗಿದೆ. ರಸ್ತೆ ದುರಸ್ತಿಗೆ ಅಂದಾಜು 361.50 ಲಕ್ಷ, ಸೇತುವೆಗಳಿಗೆ 67.50 ಲಕ್ಷ ಮತ್ತು ಕೆರೆಗಳಿಗೆ 42 ಲಕ್ಷದ ಅವಶ್ಯಕತೆ ಇದೆ ಎಂದರು.

    ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಹರಿಹರದಲ್ಲಿ 10, ದಾವಣಗೆರೆ 1 ಮತ್ತು ಜಗಳೂರಿನಲ್ಲಿ 1 ಸೇರಿದಂತೆ ಒಟ್ಟು 12 ಪಿಹೆಚ್‍ಸಿ ಗಳಲ್ಲಿ ಹಾನಿ ಸಂಭವಿಸಿದ್ದು, ಇವುಗಖ ಅಂದಾಜು 24 ಲಕ್ಷ ಅಗತ್ಯವಿದೆ ಎಂದು ಮಾಹಿತಿ ನೀಡಿದರು.ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ರವಿ ಮಾತನಾಡಿ, ಒಟ್ಟು 155 ಶಾಲೆಗಳಿಂದ 345 ಕೊಠಡಿಗಳು ಹಾಳಾಗಿದ್ದು, ರಿಪೇರಿಗೆ ಅಂದಾಜು ರೂ.688 ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ವಿಜಯಕುಮಾರ್ ಮಾತನಾಡಿ, ಭೈರನಾಯಕನಹಳ್ಳಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಹೀಗೆ ದುರಸ್ತಿ ಇರುವ 7 ಅಂಗನವಾಡಿಗಳನ್ನು ಬೇರೆಡೆ ಸ್ಥಳಾಂತರಿಸಿ, ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

    ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಮಾತನಾಡಿ, ಜಿಲ್ಲೆಯಲ್ಲಿ ನೆರೆಯಿಂದ 4 ಕಿ.ಮೀ ರಾಜ್ಯ ಹೈವೇ, 5 ಸೇತುವೆ, 10.5 ಕಿ.ಮೀ ಎಂಡಿಆರ್ ರಸ್ತೆ, 5 ಎಂಡಿಆರ್ ಸೇತುವೆ ಹಾನಿಗೊಳಗಾಗಿದ್ದು ಒಟ್ಟು 253.50 ಲಕ್ಷದ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ ಎಂದರು.

   ಕೃಷಿ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ 30 ಹಳ್ಳಿಗಳ 557 ರೈತರ ಸುಮಾರು 383 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದ್ದು ರೂ.47 ಲಕ್ಷ ಪರಿಹಾರ ಕೇಳಲಾಗಿದೆ ಎಂದರು.ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್ ಮಾತನಡಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಸುಮಾರು 217 ಹೆಕ್ಟೇರ್ ತೋಟಗಾರಿಕೆ ಬೆಳೆ ಮುಖ್ಯವಾಗಿ ಈರುಳ್ಳಿ ಹಾನಿಗೀಡಾಗಿದ್ದು, 44 ಲಕ್ಷ ಹಾನಿ ಸಂಭವಿಸಿದೆ ಎಂದರು.

     ಸಭೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ನಜ್ಮಾ, ಮಹಾನಗರಪಾಲಿಕೆ ಆಯುಕ್ತರಾದ ಮಂಜುನಾಥ ಆರ್.ಬಳ್ಳಾರಿ, ಆರ್‍ಡಿಪಿಆರ್ ಕಾರ್ಯಪಾಲಕ ಅಭಿಯಂತರ ಪರಮೇಶ್ವರಪ್ಪ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ರವಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ವಿಜಯಕುಮಾರ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್, ತಹಶೀಲ್ದಾರ್ ತಿಮ್ಮಣ್ಣ ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link