ದಾವಣಗೆರೆ:
ಸಂಪತ್ತಿನ ಸಮಾನ ಹಂಚಿಕೆಯಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಪ್ರತಿಪಾದಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಆಶ್ರಯದಲ್ಲಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ, ಕಟ್ಟಡ ಮತ್ತು ಇತರೆ ನಿರ್ಮಾಣಗಳ, ಮನೆ ಕೆಲಸ ಹಾಗೂ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರಿಗಾಗಿರುವ ಸೌಲಭ್ಯಗಳ ಕುರಿತ ಏರ್ಪಡಿಸಿದ್ದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲಾ ಸಂಪತ್ತಿನ ಸಮಾನ ಹಂಚಿಕೆಯಾದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಎಲ್ಲಿಯವರೆಗೆ ಒಬ್ಬ ವ್ಯಕ್ತಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಆರ್ಥಿಕ ಸಮಸ್ಯೆ ಅಡ್ಡಬರುತ್ತದೋ ಅಲ್ಲಿಯವರೆಗೂ ಸಮಾಜದಲ್ಲಿ ಅಸಮಾನತೆ ಜೀವಂತವಾಗಿರಲಿದೆ. ಈ ಅಸಮಾನತೆ, ದೌರ್ಜನ್ಯ ಹಿಮ್ಮೆಟ್ಟಿಸಲು ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ಸಾಧ್ಯ ಎಂದರು.
ಅನಕ್ಷರತೆ, ಮೌಢ್ಯತೆಗಳೆಂಬ ಸಂಕಷ್ಟಗಳಿಂದ ಹೊರಬರದ ಹೊರತು ಸಮಾನತೆ ಅಸಾಧ್ಯ. ಹೇಗೆ ಅಂಧನೊಬ್ಬ ಬಣ್ಣಗಳ ಬಗ್ಗೆ ಕಲ್ಪನೆ ಹೊಂದಲು ಸಾಧ್ಯವಿಲ್ಲವೋ ಅದೇರೀತಿ, ಸಮಾಜದಲ್ಲಿ ಏನೂ ಗೊತ್ತಿಲ್ಲದ ಅನಕ್ಷರಸ್ಥರು ಆರ್ಥಿಕವಾಗಿ ಮುಂದೆ ಬರಲು ಸಹ ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಬಡತನ, ಅನಕ್ಷರತೆ, ಆರ್ಥಿಕ ಅಸಮಾನತೆ ತೊಡೆದು ಹಾಕಬೇಕೆಂದು ಕರೆ ನೀಡಿದರು.
ಪರಿಸರ ಸಮತೋಲನೆಗೆ ಹೆಣ್ಣು ಗಂಡು ಇಬ್ಬರೂ ಮುಖ್ಯ. ಹೆಣ್ಣೆಂಬ ಕಾರಣಕ್ಕೆ ತಿರಸ್ಕಾರ, ಭ್ರೂಣ ಹತ್ಯೆಯಂಥಹ ಕೃತ್ಯ ನಡೆದರೆ, ಮುಂದೊಂದು ದಿನ ಹೆಣ್ಣಿನ ಸಂಖ್ಯೆ ಇಳಿಮುಖಗೊಂಡು ಅಸಮಾನತೆ ಹೆಚ್ಚಾಗಿ ಸಮಾಜ ಸ್ವಾಸ್ಥ್ಯ ಹದಗೆಡಲಿದೆ. ಹೆಣ್ಣು ಭ್ರೂಣ ಹತ್ಯೆ ಹಾಗೂ ಲಿಂಗಪತ್ತೆ ಎರಡೂ ಅಪರಾಧಗಳಾಗಿದ್ದು, ಇದಕ್ಕೆ ದಂಡ ಹಾಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವ ಪ್ರಾಧಿಕಾರ ಸದಸ್ಯ ಎಲ್.ಎಚ್. ಅರುಣ್‍ಕುಮಾರ್ ಮಾತನಾಡಿ, ಅತೀ ಶ್ರೀಮಂತರ ಮೊದಲ ಐದು ಜನರ ಪಟ್ಟಿಯಲ್ಲಿ ಭಾರತದವರೇ ಇದ್ದಾರೆ. ಆದರೆ, ಆರ್ಥಿಕ ಅಸಮಾನತೆಯಿಂದ ಜನರ ಜೀವನ ಮಟ್ಟ ಮಾತ್ರ ದುಸ್ಥರವಾಗಿದೆ. ಜನರ ಜೀವನ ಮಟ್ಟವನ್ನು ಅವರಿಗೆ ನೀಡಿದ ಸೌಲಭ್ಯಗಳ ಮೇಲೆ ಅಳತೆ ಮಾಡಬೇಕು. ಅಂದಾಗ ಮಾತ್ರ ನೈಜತೆ ಗೋಚರಿಸಲು ಸಾಧ್ಯವೆಂದ ಅವರು, ಸೂಕ್ತ ಸೌಲಭ್ಯಗಳನ್ನು ಸೂಕ್ತ ವ್ಯಕ್ತಿಗೆ ನೀಡುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾದ ಪರಿಣಾಮ ಸವಲತ್ತುಗಳು ನೈಜ ವ್ಯಕ್ತಿಗೆ ದಕ್ಕದೇ ಅನ್ಯರ ಪಾಲಾಗುತ್ತಿವೆ ಎಂದು ಅವರು ವಿಷಾಧಿಸಿದರು.
ಸಾಲದ ಅವಶ್ಯಕತೆ ಇರುವವರಿಗೆ ಎಂದಿಗೂ ಬ್ಯಾಂಕ್‍ಗಳಲ್ಲಿ ಸಾಲ ದೊರೆಯುತ್ತಿಲ್ಲ. ಆದರೆ, ಕೆಲ ಶ್ರೀಮಂತರು ಎಲ್ಲಾ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ವಂಚಿಸಿದ್ದಾರೆ. ಅನಕ್ಷರತೆ, ಮಾಹಿತಿ ಕೊರತೆ, ಕಚೇರಿಗಳಿಗೆ ಅಲೆದಾಟ, ಬಂದ ಅನುದಾನ ಸೂಕ್ತ ಬಳಕೆಯಾಗದಿರುವುದು ಮತ್ತಿತರ ಕಾರಣಗಳಿಂದ ಸಮಾನತೆ ಎಂಬುದು ಕನಸಾಗಿಯೇ ಉಳಿದಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಇಲಾಖೆ ಸಂಬಂಧಿತ ಯೋಜನೆ, ಅನುದಾನದ ಕುರಿತು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಹಿತಿ ನೀಡಬೇಕು. ಸಾಮಾಜಿಕ ಸ್ವಾತಂತ್ರದ ಜೊತೆ ಆರ್ಥಿಕ ಸ್ವಾತಂತ್ರವೂ ದೊರೆಯಬೇಕು ಎಂದು ಅವರು ವಿವರಿಸಿದರು.
ಸ್ಲಂ ಜನಾಂದೋಲನ ಕರ್ನಾಟಕದ ತುಮಕೂರು ಜಿಲ್ಲಾಸಂಚಾಲಕ ಶೆಟ್ಟಳಯ್ಯ ಪ್ರಾಸ್ತಾವಿಕ ಮಾತನಾಡಿದರು. ಸಾವಿತ್ರಿ ಭಾಪುಲೆ ಮಹಿಳಾ ಸಂಘಟನೆ ರಾಜ್ಯ ಸಂಚಾಲಕಿ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಕಾನೂನು ವೇದಿಕೆ ಸದಸ್ಯೆ ಲೇಖಾ ವಿಷಯ ಮಂಡಿಸಿದರು. ಕಾರ್ಮಿಕ ಅಧಿಕಾರಿ ಮಮತಾ ಬೇಗಂ, ಎಸಿಡಿಪಿಯುನ ಎನ್. ಮೈತ್ರಿದೇವಿ, ಕೊಳಗೇರಿ ಹಿತರಕ್ಷಣಾ ಸಮಿತಿಯ ದೀಪಿಕ, ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾಧ್ಯಕ್ಷ ಎಂ. ಶಬ್ಬೀರ್ ಸಾಬ್ ಮತ್ತಿತರರಿದ್ದರು. ರೇಣುಕಾಯಲ್ಲಮ್ಮ ಸ್ವಾಗತಿಸಿದರು. ಮಂಜಣ್ಣ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ