ಜಿಲ್ಲೆಯಲ್ಲಿ ಆರ್ಥಿಕ ಗಣತಿಗೆ ಚಾಲನೆ

ಚಿತ್ರದುರ್ಗ :

    ಜಿಲ್ಲೆಯಲ್ಲಿ 7 ನೇ ಆರ್ಥಿಕ ಗಣತಿ ಕಾರ್ಯ ಪ್ರಾರಂಭವಾಗಿದ್ದು, ಆರ್ಥಿಕ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು. ಗಣತಿದಾರರು ಯಾವುದೇ ಮನೆಯ ಗಣತಿ ಬಿಟ್ಟುಹೋಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

     ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ 7ನೇ ಆರ್ಥಿಕ ಗಣತಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಪ್ರತಿ ಐದು ವರ್ಷಕ್ಕೊಮ್ಮೆ ಆರ್ಥಿಕ ಗಣತಿ ಕಾರ್ಯ ನಡೆಸಲಾಗುತ್ತದೆ. ಇದುವರೆಗೆ 6 ಆರ್ಥಿಕ ಗಣತಿ ಕಾರ್ಯಗಳು ನಡೆದಿದ್ದು, ಪ್ರಸ್ತುತ 2019 ನೇ ಸಾಲಿನ 7ನೇ ಆರ್ಥಿಕ ಗಣತಿಯು ಜೂ.15 ರಿಂದ ಆರಂಭಗೊಂಡು ಸೆ.15 ರ ವರೆಗೆ ಮೂರು ತಿಂಗಳ ಕಾಲ ನಡೆಯಲಿದೆ. ಆರ್ಥಿಕ ಗಣತಿಯು ಯಶಸ್ಸಿಯಾಗಬೇಕಾದರೆ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಮನೆಗಳ ಸಂಖ್ಯೆ ಹಾಗು ಅಗತ್ಯ ಮಾಹಿತಿಯನ್ನು ಗಣತಿ ಸಿಬ್ಬಂದಿಗೆ ಒದಗಿಸಿದಲ್ಲಿ, ಹಳ್ಳಿಗಳಲ್ಲಿ ಎಲ್ಲಾ ಮನೆಗಳ ಗಣತಿಯನ್ನು ಸಂಪೂರ್ಣವಾಗಿ ಮಾಡಬಹುದು ಎಂದು ತಾ.ಪಂ. ಇಓ ಗಳಿಗೆ ತಿಳಿಸಿದರು.

      ಆರ್ಥಿಕ ಗಣತಿ ಮಾಡಲು ಬರುವ ಗಣತಿದಾರರಿಗೆ ಸರಿಯಾದ ಮಾಹಿತಿ, ನಿಖರವಾದ ಅಂಕಿ-ಅಂಶಗಳನ್ನು ಗ್ರಾಮ ಪಂಚಾಯಿತಿ ಹಾಗು ಸಾರ್ವಜನಿಕರು ನೀಡಬೇಕಾಗುತ್ತದೆ, ಆರ್ಥಿಕ ಗಣತಿ ಮಾಡುವುದರ ಬಗ್ಗೆ ಸಾರ್ವಜನಿಕರಿಗೆ ಸ್ಥಳೀಯ ಮಟ್ಟದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಿಡಿಓ ಗಳು ಟಾಂ ಟಾಂ ಹೊಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

      ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಹೆಚ್. ದಾಸರೆಡ್ಡಿ ಸಭೆಗೆ ಮಾಹಿತಿ ನೀಡಿ, ಸಾರ್ವಜನಿಕರು ಸ್ವಂತ ಉದ್ದಿಮೆ ಸ್ಥಾಪಿಸಲು 7ನೇ ಆರ್ಥಿಕ ಗಣತಿ ಸಹಕಾರಿಯಾಗಲಿದೆ ಹಾಗೂ ಯೋಜನೆಗಳನ್ನು ರೂಪಿಸಲು ಗಣತಿ ಅಂಕಿ ಅಂಶಗಳ ಮಾಹಿತಿಗಳು ಉಪಯುಕ್ತವಾಗಲಿವೆ. ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಸ್ವಂತ ಉಪಯೋಗಕ್ಕಲ್ಲದೆ ಕೃಷಿ ಮತ್ತು ಕೃಷಿಯೇತರ ಸರಕು, ಸಾಮಾಗ್ರಿಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆಗಳು ಮತ್ತಿತರ ಘಟಕಗಳ ಸಂಪೂರ್ಣ ಆರ್ಥಿಕ ಚಟುವಟಿಕೆಗಳ ಮಾಹಿತಿ ಸಂಗ್ರಹಣೆ ಮಾಡುವುದು ಆರ್ಥಿಕ ಗಣತಿಯ ಉದ್ದೇಶವಾಗಿದೆ ಎಂದು ಹೇಳಿದರು.

     ಹಿಂದಿನ 6 ಆರ್ಥಿಕ ಗಣತಿ ಕಾರ್ಯಗಳನ್ನು ರಾಜ್ಯ ಸರ್ಕಾರದ ಸಿಬ್ಬಂದಿಯಿಂದ ನಡೆಸಲಾಗಿತ್ತು, ಪ್ರಸ್ತುತ 7 ನೇ ಗಣತಿ ಕಾರ್ಯವನ್ನು ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನದ ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿವೃದ್ಧಿ ಪಡಿಸಿರುವ ಮೊಬೈಲ್ ಆಪ್ಲೀಕೆಶನ್ ತಂತ್ರಾಂಶ ಬಳಸಿ ಗಣತಿ ನಡೆಸಲು ಖಾಸಗಿ ಇ-ಆಡಳಿತ ವ್ಯಾಪ್ತಿಯ ಸಾಮಾನ್ಯ ಸೇವಾ ಕೇಂದ್ರಗಳಿಗೆ ವಹಿಸಲಾಗಿದೆ.

     ಸಾಮಾನ್ಯ ಸೇವಾ ಕೇಂದ್ರಗಳಿಂದ ಹಂಚಿಕೆ ಮಾಡಲಾದ ಸಿಬ್ಬಂದಿಯು ಗಣತಿ ಕಾರ್ಯ ಮಾಡಲಿದ್ದು, ಉದ್ದಿಮೆ ಮಾಲೀಕರ ವಿವರ, ಕೆಲಸಗಾರರ ವಿವರ, ನೋಂದಣಿ ಸಂಖ್ಯೆ ಪ್ಯಾನ್ ಸಂಖ್ಯೆ ಹಾಗೂ ಇತರೆ ವಿವರಗಳನ್ನು ಸಂಗ್ರಹಿಸಲಿದ್ದಾರೆ. ಗಣತಿಯಿಂದ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದ್ದು, ಉತ್ಪಾದನಾ ಘಟಕಗಳ ಮಾಹಿತಿ, ತೊಡಗಿರುವ ಸಿಬ್ಬಂದಿ, ಬಂಡವಾಳ ಹೂಡಿಕೆ, ಹೂಡಿಕೆಯ ವಿಧಾನ ಇನ್ನಿತರೆ ಮಾಹಿತಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಎರಡು ಹಂತದಲ್ಲಿ ಗಣತಿ ಕಾರ್ಯ :

    ಮೊದಲ ಹಂತದ ಮೇಲ್ವಿಚಾರಣೆ ಕಾರ್ಯ ಶೇ. 100 ರಷ್ಟು ಸಾಮಾನ್ಯ ಕೇಂದ್ರಗಳ ಸಿಬ್ಬಂದಿ ಮಾಡಲಿದ್ದಾರೆ. 2 ನೇ ಹಂತದ ಮೇಲ್ವಿಚಾರಣೆ ಕಾರ್ಯ ಭಾರತ ಸರ್ಕಾರದ ಸಾಂಖ್ಯಿಕ ಇಲಾಖೆ ಅಧಿಕಾರಿಗಳು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಮತ್ತು ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಹೆಚ್. ದಾಸರೆಡ್ಡಿ ಹೇಳಿದರು.
ಸಭೆಯಲ್ಲಿ ಉಪವಿಭಾಧಿಕಾರಿ ವಿಜಯಕುಮಾರ್, ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರ ಅಧಿಕಾರಿ ಕಿರಣ್ ಕುಮಾರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶಶಿಧರ್, ರಾಷ್ಟ್ರೀಯ ಸೇವಾ ಸಂಸ್ಥೆಯ ಅಧಿಕಾರಿ ಕೊಟ್ರೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link