ಕಳೆ ಕಿತ್ತ ಡಿಸಿ, ಎಸ್ಪಿ, ಆಯುಕ್ತರು…!

ದಾವಣಗೆರೆ :

     ನಗರದ ಹೊರವಲಯದ ಕುಂದುವಾಡ ಕೆರೆ ಅಂಚಿನಲ್ಲಿ ಮಂಗಳವಾರ ಬೆಳಗಿನ ಚುಮು ಚುಮು ಚಳಿಯಲ್ಲೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಡೂಡಾ ಆಯುಕ್ತ ಆದಪ್ಪ ಸೇರಿದಂತೆ ಇತರೆ ಅಧಿಕಾರಿಗಳು, ವಾಯುವಿಹಾರಿಗಳು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯ ನಡೆಸಿದರು.

    ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಕುಂದುವಾಡ ಕೆರೆ ಪ್ರದೇಶದಲ್ಲಿ ಮಂಗಳವಾರ ಬೆಳ್ಳಂ ಬೆಳಿಗ್ಗೆ ‘ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ಇಲ್ಲಿ ಭಾಗವಹಿಸುವುದರೊಂದಿಗೆ ಕೈ ಜೋಡಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಏರ್ಪಡಿಸಲಾಗಿದ್ದ ‘ನಮ್ಮ ನಗರ-ನಮ್ಮ ಕೆರೆ’ ಸ್ವಚ್ಛತಾ ಆಂದೋಲನಕ್ಕೆ ಡಿಸಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಾವು ನಮ್ಮ ಸುತ್ತಮುತ್ತ ಸ್ವಚ್ಛವಾಗಿರಬೇಕೆಂಬುದಾಗಿ ಬಯಸುವ ಬದಲು ಮೊದಲು ನಮ್ಮಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು. ಆಗ ಮಾತ್ರ ಧನಾತ್ಮಕ ಬದಲಾವಣೆ ಸಾಧ್ಯ. ನಾಗರೀಕರಾಗಿರುವ ನಾವೆಲ್ಲ ನಮ್ಮ ಮನೆ ಸುತ್ತಮುತ್ತಲಿನ ವಾತಾರವಣ, ಚರಂಡಿ ಇತರೆ ಸ್ವಚ್ಛವಾಗಿಟ್ಟುಕೊಳ್ಳುವ ಸಂಕಲ್ಪ ತೊಡಬೇಕು. ಆಗ ಇಡೀ ನಗರ ಸ್ವಚ್ಚವಾಗಿ ಕಂಗೊಳಿಸುತ್ತದೆ ಎಂದು ಹೇಳಿದರು.

    ನಾವು ಇಂದು ಎಷ್ಟು ಲೋಡ್ ಕಸ ಸಂಗ್ರಹಿಸಿದೆವು ಎನ್ನುವುದಕ್ಕಿಂತ, ಮುಖ್ಯವಾಗಿ ಎಷ್ಟು ಹಸುರೀಕರಣ ಮಾಡಿದೆವು ಎನ್ನುವುದು ಮುಖ್ಯ ಎಂದ ಅವರು, ಜಿಲ್ಲಾಡಳಿತ, ಪಾಲಿಕೆ, ದೂಡಾದವರೇ ಸ್ವಚ್ಚತೆ ಮಾಡಬೇಕೆಂದು ವ್ಯವಸ್ಥೆಯನ್ನು ದೂರುವ ಬದಲಾಗಿ ಎಲ್ಲರೂ ಕೂಡಿ ಕೆಲಸ ಮಾಡೋಣ ಎಂಬ ಮನಸ್ಥಿತಿ ಹೊಂದಬೇಕಾದ ಅವಶ್ಯಕತೆ ಇದೆ. ಆಗ ಮಾತ್ರ ಬದಲಾವಣೆ ಸಾಧ್ಯ ಎಂದರು.

     ಪ್ರತಿಯೊಬ್ಬ ನಾಗರೀಕರು ತಾಲ ಒಂದೊಂದು ಕಳೆಯ ಗಿಡವನ್ನು ಕಿತ್ತರೂ ಸಾಕು, ನಗರ ಸ್ವಚ್ಚವಾಗುತ್ತದೆ. ಅಲ್ಲದೆ, ನಾಗರೀಕರು ಮನಸ್ಸು ಮಾಡಿದರೆ ಇಂತಹ 10 ಕೆರೆಯನ್ನು ಸ್ವಚ್ಚಗೊಳಿಸಬಹುದು. ಪ್ರಜ್ಞಾವಂತ ನಾಗರೀಕರಾದ ನಾವು ಇತರರನ್ನು ದೂರುವ ಮುನ್ನ ನಮ್ಮನ್ನು ನಾವು ಬದಲಾಯಿಸಿಕೊಂಡು ನಮ್ಮ ಸುತ್ತಮುತ್ತ ಹಾಗೂ ನಮ್ಮ ನಗರ, ನೆಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳೋಣ ಎಂದು ಸಲಹೆ ನೀಡಿದರು.

     ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಇಂದು ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ವಾಯು ವಿಹಾರ ಬಳಗದವರು ಸಂತೋಷದಿಂದ ಸ್ವಚ್ಚತಾ ಕಾರ್ಯ ನಡೆಸಿದ್ದು, ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರ ಬಾರದು. ಇದು ನಿರಂತರವಾಗಿ ನಡೆಯಬೇಕು. ಆಸಕ್ತರೆಲ್ಲರೂ ದಿನವೂ ತಮ್ಮ ಶ್ರಮದಾನ ಮಾಡಬಹುದು. ಕುಂದುವಾಡ ಕೆರೆ ಸುತ್ತಮುತ್ತ ಉತ್ತಮ ಗಿಡ, ಮರಗಳಿದ್ದು ಮೈಕ್ರೋ ಪರಿಸರ ಏರ್ಪಟ್ಟಿದೆ. ಇದು ಮನಸ್ಸಿಗೆ ಮತ್ತು ಆರೋಗ್ಯಕ್ಕೆ ಚೇತೋಹಾರಿ ಯಾಗಿದ್ದು, ಎಲ್ಲರೂ ಶ್ರಮದಾನದ ಮೂಲಕ ನಮ್ಮ ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.

   ಸ್ವಚ್ಛತಾ ಆಂದೋಲನದ ವೇಳೆ ಜಿಲ್ಲಾಧಿಕಾರಿಗಳು ಕುಂದುವಾಡ ಕೆರೆ ಸುತ್ತಮುತ್ತ ವೀಕ್ಷಿಸಿ, ವಾಕ್‍ಪಾತ್ ಅಕ್ಕಪಕ್ಕ ಬೆಳೆದ ಕಳೆ ಗಿಡಗಂಟಿ, ಕಸ ನಿರ್ವಹಣೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಸ್ವಚ್ಛತಾ ಆಂದೋಲನದಲ್ಲಿ ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್ ಬಳ್ಳಾರಿ, ದೂಡಾ ಆಯುಕ್ತ ಆದಪ್ಪ, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಗಂಗಲ್, ಡಿಎಆರ್ ಡಿವೈಎಸ್‍ಪಿ ಪ್ರಕಾಶ್.ಬಿ.ವಿ. ಇನ್ಸ್‍ಪೆಕ್ಟರ್ ಕಿರಣ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಪಾಲಿಕೆ, ದೂಡಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ವಾಯುವಿಹಾರ ಬಳಗದವರು, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link