ಬೆಂಗಳೂರು
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಯಾವ ಅಪಾಯವೂ ಇಲ್ಲ.ಆದರೆ ಶಾಸಕರಿಗೆ ಕೆಲ ಕುಂದು ಕೊರತೆಗಳಿವೆ.ಜುಲೈ 9 ಹಾಗೂ 10 ರಂದು ಜಿಲ್ಲಾವಾರು ಶಾಸಕರ ಸಭೆ ನಡೆಸಿ ಸಿಎಂ ಇದನ್ನು ಪರಿಹರಿಸಲಿದ್ದಾರೆ ಎನ್ನುವ ಮೂಲಕ ಗವರ್ಮೆಂಟ್ ಫಿನಿಷ್ ಎಂಬ ಮಾತಿಗೆ ಸಚಿವ ಡಿ.ಕೆ.ಶಿವಕುಮಾರ್ ಪೂರ್ಣವಿರಾಮ ಹಾಕಲು ಯತ್ನಿಸಿದ್ದಾರೆ.
ಅದೇ ಕಾಲಕ್ಕೆ ಇಂದು ಕೂಡಾ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂಬ ಸುದ್ದಿ ಕೇಳಿ ವಿಧಾನಸೌಧದ ತಮ್ಮ ಕಛೇರಿಗೆ ಬಂದು ಬಹುಕಾಲ ಕುಳಿತಿದ್ದ ಸಭಾಧ್ಯಕ್ಷ ರಮೇಶ್ ಕುಮಾರ್ ಕೂಡಾ ಕೊನೆಗೆ:ನನ್ನ ಕಛೇರಿಗೆ,ರಾಜ್ಯಪಾಲರಿಗೆ ರಾಜೀನಾಮೆ ನೀಡಿರುವ ಶಾಸಕ ಆನಂದ್‍ಸಿಂಗ್ ಅವರು ಪುರುಸೊತ್ತಿದ್ದರೆ ರಾಷ್ಟ್ರಪತಿಗಳಿಗೂ ರಾಜೀನಾಮೆ ಪತ್ರ ಸಲ್ಲಿಸಲಿ ಎಂದು ಟಾಂಗ್ ನೀಡಿದ್ದಾರೆ.
ಹೀಗೆ ಇಂದಿನ ವಿದ್ಯಮಾನಗಳು ಸಮ್ಮಿಶ್ರ ಸರ್ಕಾರದ ಪಾಲಿಗೆ ಗೊಂದಲವಿದೆ ಎಂಬುದಕ್ಕೆ ಸಣ್ಣ ಕುರುಹೂ ಇಲ್ಲದಂತೆ ನಡೆದರೆ,ಮತ್ತೊಂದು ಕಡೆ ಬಿಜೆಪಿಯ ಕೆಲ ನಾಯಕರು:ಅನಿರೀಕ್ಷಿತ ಆಘಾತಕ್ಕೆ ಕಾದು ನೋಡುತ್ತಿರಿ ಎಂದು ಸಸ್ಪೆನ್ಸ್ ಕಾಯ್ದಿರಿಸುವ ಯತ್ನ ಮಾಡಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು,ತಮಗೆ ಗೊತ್ತಿದ್ದಂತೆ ಸಮ್ಮಿಶ್ರ ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ.ಆದರೆ ಕೆಲ ಶಾಸಕರಿಗೆ ಕುಂದು ಕೊರತೆಗಳಿವೆ ಎಂದರು.
ಮುಖ್ಯಮಂತ್ರಿಗಳು ಅಮೇರಿಕಾ ಪ್ರವಾಸದಿಂದ ಹಿಂತಿರುಗಿದ ಬಳಿಕ ಜುಲೈ 9 ಹಾಗೂ 10 ರಂದು ಜಿಲ್ಲಾವಾರು ಶಾಸಕರ ಸಭೆ ನಡೆಸಿ ಯಾವ್ಯಾವ ಶಾಸಕರ ಕುಂದು ಕೊರತೆ ಏನೇನು ಎಂಬುದನ್ನು ತಿಳಿದುಕೊಳ್ಳಲಿದ್ದಾರೆ.
ಹೀಗೆ ಶಾಸಕರ ಕುಂದು ಕೊರತೆಗಳನ್ನು ಕೇಳಿದ ನಂತರ ಅದಕ್ಕೆ ಅವರೇ ಪರಿಹಾರ ಸೂಚಿಸಲಿದ್ದಾರೆ.ಆದ್ದರಿಂದ ಸರ್ಕಾರಕ್ಕೆ ಏನೋ ಆಗುತ್ತದೆ ಎಂಬ ಕಪೋಲ ಕಲ್ಪಿತ ಮಾತುಗಳನ್ನಾಡುವುದು ಬೇಡ ಎಂದರು.ಈ ಮಧ್ಯೆ ಇಂದು ಬೆಳಿಗ್ಗೆ ಶಾಸಕರಾದ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ವಿಧಾನಸೌಧದ ಮೊದಲ ಅಂತಸ್ತಿನಲ್ಲಿರುವ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡುತ್ತಾರೆ ಎಂಬ ವದಂತಿ ದಟ್ಟವಾಗಿ ಹರಡಿತ್ತು.
ಈ ವದಂತಿಗಳು ಮುಂದುವರೆಯುತ್ತಿದ್ದಂತೆಯೇ ಹನ್ನೆರಡು ಗಂಟೆಯ ಹೊತ್ತಿಗೆ ವಿಧಾನಸೌಧದ ಮೊದಲ ಅಂತಸ್ತಿನಲ್ಲಿರುವ ತಮ್ಮ ಕಛೇರಿಗೆ ಬಂದ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ರಾಜೀನಾಮೆ ಕುರಿತು ಸುದ್ದಿಗಾರರು ಪ್ರಶ್ನಿಸಿದ ಕೂಡಲೇ ಗರಂ ಆದರು.ನಾನು ಸಭಾಧ್ಯಕ್ಷ.ಗೌರವಯುತ ಜಾಗದಲ್ಲಿದ್ದೇನೆ.ನನ್ನ ಬಳಿ ಶಾಸಕರು ರಾಜೀನಾಮೆ ನೀಡಿದ್ದಾರಾ?ಎಂಬಂತಹ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ ಎಂದು ಸುದ್ದಿಗಾರರ ಮೇಲೆ ಹರಿಹಾಯ್ದರು.
ಶಾಸಕ ಆನಂದ್‍ಸಿಂಗ್ ಅವರು ನನ್ನ ಕಛೇರಿಗೆ ರಾಜೀನಾಮೆ ತಲುಪಿಸಿದ್ದಾರೆ.ಹಾಗೆಯೇ ರಾಜ್ಯಪಾಲರನ್ನೂ ಭೇಟಿ ಮಾಡಿ ರಾಜೀನಾಮೆ ಪತ್ರ ಕೊಟ್ಟಿದ್ದಾರೆ.ಪುರುಸೊತ್ತು ಇದ್ದರೆ ರಾಷ್ಟ್ರಪತಿಗಳನ್ನೂ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿ ಎಂದು ವ್ಯಂಗ್ಯವಾಡಿದರು.
ಮತ್ತೋರ್ವ ಶಾಸಕ ರಮೇಶ್ ಜಾರಕಿಹೊಳಿ ಅವರು ಫ್ಯಾಕ್ಸ್ ಮೂಲಕ ರಾಜೀನಾಮೆ ಕಳಿಸಿದ್ದಾರೆ ಎಂದು ಸುದ್ದಿಗಾರರು ಕೇಳುತ್ತಿದ್ದಂತೆ ಮತ್ತೆ ಗರಂ ಆದ ರಮೇಶ್ ಕುಮಾರ್:ಶಾಸಕರಾದವರಿಗೆ ಜವಾಬ್ದಾರಿ ಇರಬೇಕು.ಯಾವ ಕೆಲಸ ಮಾಡುವಾಗ ಹೇಗೆ ನಡೆದುಕೊಳ್ಳಬೇಕು?ಎಂಬುದರ ಅರಿವು ಹೊಂದಿರಬೇಕು ಎಂದರು.ಆನಂದ್ ಸಿಂಗ್ ಅವರು ನನ್ನ ಕಛೇರಿಗೆ ತಲುಪಿಸಿರುವ ರಾಜೀನಾಮೆ ಪತ್ರವನ್ನು ಇಟ್ಟುಕೊಂಡು ಜನರನ್ನು ಕರೆಸಿ ಅವರ ಸಮ್ಮುಖದಲ್ಲೇ ಅದರ ವಿಚಾರಣೆ ನಡೆಸುತ್ತೇನೆ ಎಂದು ಅವರು ಪ್ರಶ್ನೆ ಒಂದಕ್ಕೆ ಪ್ರತಿಕ್ರಿಯೆ ನೀಡಿದರು.
ಈ ಮಧ್ಯೆ ಇಂದು ಶಾಸಕರಾದ ಬಿ.ಸಿ.ಪಾಟೀಲ್,ಕುಮಟಳ್ಳಿ ಸೇರಿದಂತೆ ಮೂವರು ಶಾಸಕರು ಕೂಡಾ ರಾಜೀನಾಮೆ ನೀಡಲಿದ್ದಾರೆ ಎಂಬ ಗಾಸಿಪ್ ನೆನ್ನೆಯಿಂದ ಹರಡಿತ್ತಾದರೂ ಮೂವರು ಶಾಸಕರೂ ವಿಧಾನಸೌಧದ ಕಡೆ ತಲೆ ಹಾಕಲಿಲ್ಲ .ಹೀಗಾಗಿ ಈ ಶಾಸಕರಿಗಾಗಿ ಬೆಳಿಗ್ಗೆಯಿಂದಲೇ ಕಾದು ಕುಳಿತಿದ್ದ ಸುದ್ದಿಗಾರರಿಗೆ ನಿರಾಶೆಯಾಗಿದ್ದಲ್ಲದೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಬಳಿ ಹೋಗಿ ಪಾಠ ಮಾಡಿಸಿಕೊಂಡು ಗೊಣಗುತ್ತಾ ಹೊರನಡೆಯಬೇಕಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
