ಸಡಗರದ ಲಕ್ಷ್ಮೀ ಪೂಜೆ, ದೀಪಾವಳಿಗೆ ಸಿದ್ಧತೆ

ದಾವಣಗೆರೆ:

      ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ ನಡೆಸಿರುವ ದೇವನಗರಿಯ ಜನತೆ, ಅಮಾವಾಸ್ಯೆಯ ದಿನವಾಗಿರುವ ಬುಧವಾರ ಲಕ್ಷ್ಮೀ ಪೂಜೆ ಆಚರಿಸಿದರು.

       ಹೇಳಿಕೇಳಿ ದಾವಣಗೆರೆ ಮೊದಲೇ ವಾಣಿಜ್ಯ ಕೇಂದ್ರ. ವರ್ತಕರ್ತರು ಹಾಗೂ ವ್ಯಾಪಾರಿಗಳು ಸಂಪತ್ತು ವೃದ್ಧಿಗಾಗಿ ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಆಚರಿಸುವುದು ವಿಶೇಷವಾಗಿದೆ. ಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿ, ಚಿನ್ನಾ-ಭರಣದ ಅಂಗಡಿ, ಹೋಟೆಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ವಿಶೇಷವಾಗಿ ಅಲಂಕಾರಗೊಂಡಿದ್ದವು. ಬಾಳೆಕಂದು, ತೋರಣ, ಹೂವುಗಳಿಂದ ಸಿಂಗಾರಗೊಂಡಿದ್ದವು .

        ಬುಧವಾರ ಬೆಳಗ್ಗೆಯಿಂದ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡು ಸಂಜೆಯ ನಂತರ ವಹಿವಾಟು ಸ್ಥಗಿತಗೊಳಿಸಿ ಅಲಂಕರಿಸಿದ ಮಂಟಪದಲ್ಲಿ ಲಕ್ಷ್ಮೀ ಪ್ರತಿಷ್ಠಾಪಿಸಿ ಪೂಜೆ ಮಾಡಿದರು. ಅಷ್ಟೇ ಅಲ್ಲದೇ ಮಹಿಳೆಯರು ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ, ಮುತ್ತೈದೆಯರನ್ನು ಪೂಜೆಗೆ ಆಹ್ವಾನಿಸಿ ಭಕ್ತಿಯಿಂದ ಪೂಜೆ ನೆರವೇರಿಸಿದರು.

        ದೀಪಾವಳಿ ಆಚರಣೆಗೆ ಬೇಕಾಗಿದ್ದ ವಸ್ತುಗಳನ್ನು ಜನತೆ ಬುಧವಾರವೂ ಭರದಿಂದ ಖರೀದಿಸುತ್ತಿದ್ದ ದೃಶ್ಯ ಅಲಲ್ಲಿ ಕಂಡು ಬಂತು. ನಗರದ ಪ್ರೌಢಶಾಲಾ ಮೈದಾನ, ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ಬೆಳ್ಳೂಡಿ ಗಲ್ಲಿ, ಚಾಮರಾಜ ಪೇಟೆ ಸರ್ಕಲ್, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆಗಳಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರು.

        ದೀಪಾವಳಿಯ ಹಿನ್ನೆಲೆಯಲ್ಲಿ ಹೂವಿನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿತ್ತು. ಎರಡು-ಮೂರು ದಿನದ ಹಿಂದೆ ಮಾರೊಂದಕ್ಕೆ 10 ರೂ.ಗಳಿಗೆ ಬಿಕರಿಯಾಗುತ್ತಿದ್ದ ಸೇವಂತಿಗೆ 30 ರಿಂದ40 ರೂ.ಗೆ ನೆಗೆದಿತ್ತು. ಚಂಡುಹೂ, ಮಲ್ಲಿಗೆಹೂ ಸಹ 40ರ ಗಡಿ ದಾಟಿತ್ತು. ಬಾಳೆದಿಂಡು, ಮಾವಿನ ಸೊಪ್ಪು ಖರೀದಿಯೂ ಭರದಿಂದ ಸಾಗಿತ್ತು. ಅದರಲ್ಲೂ ಹಟ್ಟಿ ಲಕ್ಕಮ್ಮ ಮಾಡಲು ಬೇಕಾದ ಗೋವಿನ ಸಗಣಿ, ತಂಗಟೆ ಹೂವು, ತಾವರಕಿ ಹೂವಿಗೂ ಸಹ ಬಂಗಾರದ ಬೆಲೆ ಬಂದಿತ್ತು. ಅಲ್ಲದೆ, ಸೆಬೆಹಣ್ಣು, ಬಾಳೆಹಣ್ಣು, ದ್ರಾಕ್ಷಿ, ಮೋಸಂಬಿ, ಕಿತ್ತಳೆ, ಸಪೋಟ ಬೆಲೆಗಳಲ್ಲೂ ನೆಗೆತ ಕಂಡಿತ್ತು.

        ಬೆಲೆ ಏರಿಕೆ ಹಾಗೂ ಬರದ ನಡುವೆ ಬೆಳಕಿನ ಹಬ್ಬ ಆಚರಣೆ ಹಿಂದಿನ ವರ್ಷದಿಂದ ಈ ವರ್ಷ ಅಷ್ಟೇನೂ ಸಂಭ್ರಮದಿಂದ ನಡೆಯುತ್ತಿಲ್ಲ. ಹಬ್ಬ ಆಚರಣೆಗೆ ಬೇಕಾದ ಫಲ-ಪುಷ್ಪ, ಆಹಾರ ಪದಾರ್ಥಗಳ ಬೆಲೆ ಗಗನಮುಖಿ ಆಗಿರುವುದರಿಂದ ಹಬ್ಬ ಆಚರಣೆ ಅಷ್ಟೇನೂ ಜೋರಾಗಿ ಮಾಡುತ್ತಿಲ್ಲ. ಆದರೆ, ಸಂಪ್ರದಾಯ ಬಿಡಬಾರದೆಂಬ ಕಾರಣಕ್ಕೆ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ಗೃಹಿಣಿ ಗಿರಿಜಮ್ಮ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link