ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಡಿಕೆಶಿ ರಣತಂತ್ರ…!

ಬೆಂಗಳೂರು

      ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ರಾಜ್ಯಸಭೆಗೆ ಕಳುಹಿಸಲು ಒಂದು ಕಾಲದ ಅವರ ಸಾಂಪ್ರದಾಯಿಕ ಎದುರಾಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಂತ್ರ ರೂಪಿಸಿದ್ದಾರೆ.

      ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ನಾಲ್ಕು ಸ್ಥಾನಗಳ ದೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಕಾಂಗ್ರೆಸ್ ನೆರವಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಶಿವಕುಮಾರ್ ಉದ್ದೇಶಿಸಿದ್ದಾರೆ.

     ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಜತೆ ಚರ್ಚೆ ನಡೆಸಿರುವ ಡಿ.ಕೆ. ಶಿವಕುಮಾರ್, ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಹಾದಿ ಸುಗಮವಾಗಲಿದೆ. ಈ ಮೂಲಕ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರದಿಂದ ದೂರವಿಡಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

     ಕಳೆದ ವಾರ ದೇವೇಗೌಡರ ಹುಟ್ಟು ಹಬ್ಬದ ಸಂದರ್ಭದಲ್ಲಿ ಪದ್ಮನಾಭ ನಗರದ ಅವರ ನಿವಾಸಕ್ಕೆ ತೆರಳಿ ಅವರ ಜತೆ ಹೋಳಿಗೆ ಊಟ ಮಾಡಿರುವ ಶಿವಕುಮಾರ್, ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುವಂತೆ ಮನವಿ ಮಾಡಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ರಾಜಕಾರಣ ಮಾಡಬೇಕಿದ್ದು, ಇದಕ್ಕೆ ರಾಜ್ಯ ಸಭೆ ಚುನಾವಣೆ ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.

    ರಾಜ್ಯಸಭೆಯ ಒಂದು ಸ್ಥಾನಕ್ಕೆ ಕಾಂಗ್ರೆಸ್‍ನ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಳುಹಿಸಲು ಕಾಂಗ್ರೆಸ್ ಉದ್ದೇಶಿಸಿದ್ದು, ಮತ್ತೊಂದು ಸ್ಥಾನವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಜತೆಗೂಡಿ ಗೌಡರನ್ನು ಆರಿಸಿ ಕಳುಹಿಸಲು ತಂತ್ರಗಾರಿಕೆ ನಡೆಯುತ್ತಿದೆ ಎನ್ನಲಾಗಿದೆ.

    ಜೂನ್ 25 ರಂದು ತೆರವಾಗಲಿರುವ ಕುಪೇಂದ್ರ ರೆಡ್ಡಿ ಸ್ಥಾನಕ್ಕೆ ಗೌಡರನ್ನು ಆಯ್ಕೆ ಮಾಡುವ ಶಿವಕುಮಾರ್ ರಣವ್ಯೂಹಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಕೈ ಜೋಡಿಸಿದ್ದಾರೆ. ರಾಜಕೀಯ ಬದುಕಿನಲ್ಲಿ ಎಲ್ಲಾ ಹುದ್ದೆಗಳನ್ನು ಅನುಭವಿಸಿರುವ ಗೌಡರು, ಹಿರಿಯರ ಮನೆ ಎನಿಸಿರುವ ರಾಜ್ಯಸಭೆಗೆ ಪ್ರವೇಶಿಸಲು ಸ್ವತಃ ಆಸಕ್ತಿ ತೋರಿದ್ದಾರೆ.

   ಆದರೆ ಶಿವಕುಮಾರ್ ತಂತ್ರಗಾರಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ಒಪ್ಪುವ ಸಾಧ್ಯತೆಗಳು ಕಡಿಮೆ. ಹೀಗಾಗಿಯೇ ಅವರು ಸೋನಿಯಾ ಗಾಂಧಿ ಅವರ ಮೂಲಕ ತಮ್ಮ ತಂತ್ರಗಾರಿಕೆಯನ್ನು ಜಾರಿಗೊಳಿಸಲು ಉದ್ದೇಶಿಸಿದ್ದಾರೆ. ಇದೇ ಉದ್ದೇಶದಿಂದ ಗೌಡರು ಇತ್ತೀಚೆಗೆ ಸೋನಿಯಾ ಗಾಂಧಿ ಅವರು ಕರೆದಿದ್ದ ಪ್ರತಿಪಕ್ಷಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಗೌಡರು ಭಾಗಿಯಾಗಿದ್ದರು.ಸೋನಿಯಾ ಗಾಂಧಿ ಅವರ ಬೆಂಬಲ ಇಲ್ಲದಿದ್ದಲ್ಲಿ ಅಡ್ಡ ಮತದಾನ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸುವ ಭೀತಿ ಸಹ ಇದ್ದು, ಇದಕ್ಕೆ ಆಸ್ಪದ ನೀಡಬಾರದು ಎನ್ನುವ ಉದ್ದೇಶವನ್ನು ಶಿವಕುಮಾರ್ ಹೊಂದಿದ್ದಾರೆ.

     ರಾಜ್ಯಸಭೆಯಿಂದ ನಾಲ್ಕು ಸ್ಥಾನಗಳು ತೆರವಾಗಲಿದ್ದು, ಹಿರಿಯರ ಮನೆಗೆ ಆಯ್ಕೆ ಆಗಲು 48 ಶಾಸಕರ ಬೆಂಬಲ ಅಗತ್ಯವಾಗಿದೆ. ಆದರೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಬಲ ಕೇವಲ 34 ಇದ್ದು, ಹೆಚ್ಚುವರಿಯಾಗಿ 14 ಶಾಸಕರ ಬೆಂಬಲ ಅಗತ್ಯವಾಗಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದು ಜೆಡಿಎಸ್‍ನ ಮತ್ತೊಂದು ಸ್ಥಾನ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.

     ಈ ನಡುವೆ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಸಿದ್ದರಾಮಯ್ಯ ಮತ್ತು ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಲಿದೆ. ಮೈತ್ರಿ ಸರ್ಕಾರ ಪತನಕ್ಕೆ ಹಾಗೂ ಕಳೆದ ಒಂದು ವರ್ಷದ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ಮೊಮ್ಮಗ ನಿಖಿಲ್ ಸೋಲಲು ಸಿದ್ದರಾಮಯ್ಯ ಕಾರಣ ಎಂದು ಗೌಡರು ಮತ್ತು ಕುಮಾರ ಸ್ವಾಮಿ ಬಹಿರಂಗವಾಗಿ ಆರೋಪಿಸಿದ್ದರು. ಈ ಬೆಳವಣಿಯಿಂದ ಸಿದ್ದರಾಮಯ್ಯ ಆಕ್ರೋಶಗೊಂಡಿದ್ದಾರೆ.

      ಬಳಿಕ ಸಿದ್ದರಾಮಯ್ಯ ಯಡಿಯೂರಪ್ಪ ಅವರ ಜತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಹ ಕಾರಣರಾದರು. ಈ ಬೆಳವಣಿಗೆ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಉಂಟುಮಾಡಿದೆ. ಹೀಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ತನ್ನೊಟ್ಟಿಗೆ ಕರೆದೊಯ್ಯಬೇಕು ಎನ್ನುವ ಕೂಗು ಪಕ್ಷದ ಒಳ ವಲಯದಲ್ಲಿದೆ. ಇದಕ್ಕೆ ಸ್ಪಷ್ಟ ರೂಪ ನೀಡಲು ಡಿ.ಕೆ. ಶಿವಕುಮಾರ್ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link