ಬೆಂಗಳೂರು:
ದೇಶದ ಗಡಿಯಲ್ಲಿ ಭಾರತಿಯ ವಾಯು ಪಡೆ ಏರ್ ಸ್ಟ್ರೈಕ್ ನಡೆಸಿ ಬಾಂಬ್ ದಾಳಿ ನಡೆಸಿ ಉಗ್ರರ ಪಾಳೆಯದಲ್ಲಿ ತಲ್ಲಣ ಹುಟ್ಟಿಸಿದರೆ ಇತ್ತ ರಾಜ್ಯ ರಾಜಕಾರಣದಲ್ಲಿ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ಮಂಡ್ಯ ಲೋಕಸಭೆ ಕ್ಷೇತ್ರ ಸಂಬಂಧಿಸಿದಂತೆ ಬೇರೆಯೇ ನಿರ್ಣಯ ಆಗಿದೆ, ಮಂಡ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳನ್ನು ಜೆಡಿಎಸ್ ಶಾಸಕರಿದ್ದಾರೆ, ಹೀಗಾಗಿ ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟುಕೊಡಲಿದ್ದೇವೆ ಎಂದು ಹೇಳಿದ್ದಾರೆ.
ಇತ್ತ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಬೇಕೆಂದು ಬಯಸಿದ್ದ ಸುಮಲತಾ ಅಂಬರೀಷ್ ಅವರ ಆಸೆಗೆ ತಣ್ಣಿರೆರಚಿದಂತಾಗಿದೆ.
ಮಂಡ್ಯದ ಕೆಲ ಕಾರ್ಯಕರ್ತರು ಸುಮಲತಾರನ್ನ ಒತ್ತಾಯಿಸಿದ್ದಾರೆ. ನಾವು ಸುಮಲತಾ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರಿಗೂ ತಿಳಿಸಿ ಹೇಳುತ್ತೇವೆ. ಸುಮಲತಾ ಅವರಿಗೂ ಪರಿಸ್ಥಿತಿ ವಿವರಿಸಿದ್ದೇವೆ ಎಂದು ಸ್ಪಷ್ಟವಾಗಿ ಶಿವಕುಮಾರ್ ಹೇಳಿದ್ದಾರೆ.