ಹೊನ್ನಾಳಿ:
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಧೀಮಂತ ನಾಯಕ ಡಿ.ಕೆ. ಶಿವಕುಮಾರ್ ಅವರು ಪಕ್ಷವನ್ನು ಸದೃಢಗೊಳಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪಕ್ಷಕ್ಕೆ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಪಟ್ಟಣದ ಕನಕ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರತಿಜ್ಞಾ ವಿಧಿ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯುವಕರ ಆಶಾಕಿರಣ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಎಲ್ಲಾ ವರ್ಗಗಳ ಹಿತಚಿಂತಕರು ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಕಳೆದ 40 ವರ್ಷಗಳಿಂದ ಪಕ್ಷ ನಿಷ್ಠೆಯಿಂದ ಸಂಘಟನೆ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಿದವರಲ್ಲಿ ಮುಂಚೂಣಿ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಇವರು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲಿ ಕೂಡ ಪಕ್ಷದ ಸಂಘಟನೆ ಹಾಗೂ ಗೆಲುವಿಗೆ ತಮ್ಮ ರಾಜಕೀಯ ಚಾಣಾಕ್ಷತನವನ್ನು ಮೆರೆದಿದ್ದಾರೆ ಎಂದು ಶ್ಲಾಘಿಸಿದರು. ಕಾಂಗ್ರೆಸ್ ಪಕ್ಷ ಹಲವಾರು ಸಂದರ್ಭಗಳಲ್ಲಿ ಸಂಕಷ್ಟದಲ್ಲಿದ್ದ ವೇಳೆ ಸಮರಕ್ಕಿಳಿದು ಆಪದ್ಬಾಂಧವನಂತೆ ಕೆಲಸ ಮಾಡಿದ್ದಾರೆ ಎಂದು ಸೋದಾಹರಣವಾಗಿ ವಿವರಿಸಿದರು.ಪಕ್ಷದ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್ ಅವರೂ ಪಕ್ಷಕ್ಕೆ ಭವಿಷ್ಯದಲ್ಲಿ ಶಕ್ತಿ ತುಂಬಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಹೊನ್ನಾಳಿ ವೀಕ್ಷಕ ರವಿಕುಮಾರ್ ಮಾತನಾಡಿದರು. ಪ್ರತಿಜ್ಞಾ ದಿನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪುಪ್ಪಾವತಿ, ಹಿರಿಯ ಮುಖಂಡರಾದ ವರದರಾಜಪ್ಪ, ಬಿ. ಸಿದ್ದಪ್ಪ, ಎಂ. ಸಿದ್ದಪ್ಪ, ಪಪಂ ಸದಸ್ಯ ರಾಜೇಂದ್ರ, ಯುವ ಕಾಂಗ್ರೇಸ್ ಅಧ್ಯಕ್ಷ ಮುಧುಗೌಡ, ಡಾ.ಎಲ್. ಈಶ್ವರನಾಯ್ಕ, ವಸಂತನಾಯ್ಕ, ಸೋಮಣ್ಣ, ಎಚ್.ಬಿ. ಅಣ್ಣಪ್ಪ, ಎಚ್.ಡಿ. ವಿಜೇಂದ್ರಪ್ಪ, ಬಾಷಾ, ಹಬೀಬುಲ್ಲಾ, ಚಂದ್ರಪ್ಪ, ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
