ಚಿತ್ರದುರ್ಗ :
ನಿವೃತ್ತ ಸರ್ಕಾರಿ ನೌಕರರಿಗೆ ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ಪಡೆಯಲು ಅನುಕೂಲವಾಗುವಂತೆ ಪ್ರತಿ ತಿಂಗಳು 25 ರಿಂದ 5 ವರೆಗೆ ಬ್ಯಾಂಕ್‍ಗಳಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಿಂಚಣಿದಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತವು ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲಾಗುತ್ತಿದೆ. ಜಿಲ್ಲೆಯ ಹೊಸದುರ್ಗ, ಚಳ್ಳಕೆರೆ ತಾಲ್ಲೂಕುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪಿಂಚಣಿಗೆ ಸಂಬಂಧಿಸಿದಂತೆ ಹೆಚ್ಚು ಅಹವಾಲು ಕೇಳಿ ಬಂದಿವೆ. ಬ್ಯಾಂಕ್‍ಗಳಲ್ಲಿ ಪಿಂಚಣಿ ಪಡೆಯಲು ಸರಿಯಾದ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.
ಬ್ಯಾಂಕ್‍ನ ಸಿಬ್ಬಂದಿಗಳು ಪಿಂಚಣಿದಾರ ಸಮಸ್ಯೆಗಳಿಗೆ ಸೌಜನ್ಯಯುತವಾಗಿ ಸ್ಪಂದಿಸಬೇಕು. ಬ್ಯಾಂಕ್‍ಗಳಲ್ಲಿ ಪಿಂಚಣಿದಾರರು ಸರದಿ ಸಾಲಿನಲ್ಲಿ ನಿಂತು ಪಿಂಚಣಿ ಪಡೆಯಲು ಸಮಸ್ಯೆಯಾಗುತ್ತಿದ್ದು, ಪಿಂಚಣಿದಾರರಿಗೆ ಜಿಲ್ಲೆಯಾದ್ಯಂತ ಬ್ಯಾಂಕ್‍ಗಳಲ್ಲಿ ಪ್ರತಿ ತಿಂಗಳು 25 ರಿಂದ 5 ವರೆಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲು ಕೂಡಲೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ ಅವರಿಗೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆದೇಶವಿತ್ತರು.
ಸರ್ಕಾರಿ ನೌಕರರು ನಿವೃತ್ತವಾಗುವ 6 ತಿಂಗಳು ಮೊದಲೆ ಅವರಿಗೆ ನಿವೃತ್ತಿ ದಿನಾಂಕವನ್ನು ಸೂಚಿಸಲಾಗಿರುತ್ತದೆ. ಇಲಾಖೆ ಅಧಿಕಾರಿಗಳು ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿಗೆ ಬೇಕಾದ ದಾಖಲೆಗಳನ್ನು ಸಾಕಷ್ಟು ಮೊದಲೇ ಒದಗಿಸಬೇಕು. ಪಿಂಚಣಿದಾರರ ಕುಂದು ಕೊರತೆ ಆಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪಿಂಚಣಿ ಅದಾಲತ್ ಕಾರ್ಯಕ್ರವನ್ನು ಜಾರಿಗೆ ತಂದಿದೆ. ಕುಂದು ಕೊರತೆಗಳನ್ನು ಬಗೆಹರಿಸಲು ಈ ಕಾರ್ಯಕ್ರಮ ಆಯೋಜಿಸಿದ್ದು, ಇದರ ಸದುಪಯೋಗ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿದಾರರು ಆಗಮಿಸಬೇಕಿತ್ತು. ಆದರೆ ಕುಂದು ಕೊರತೆ ಇರುವ ನಿವೃತ್ತ ನೌಕರರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ರಾಜ್ಯ ನಿವೃತ್ತ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ ಮಾತನಾಡಿ, ನಿವೃತ್ತ ಸರ್ಕಾರಿ ನೌಕರರಿಗೆ ಬ್ಯಾಂಕ್‍ಗಳಲ್ಲಿ ಮಾತ್ರವಲ್ಲದೆ ಕೆಇಬಿ, ಆಸ್ಪತ್ರೆ, ಎಲ್.ಐ.ಸಿ ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಗಳಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಕಲ್ಪಿಸಬೇಕು. ಕುಟುಂಬ ಪಿಂಚಣಿ ವ್ಯವಸ್ಥೆಯ ಸಮಸ್ಯೆಗಳಿದ್ದು ಇವುಗಳನ್ನು ಕೂಡಲೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಪಿಂಚಣಿದಾರರು ಸಭೆಯಲ್ಲಿ ತಮ್ಮ ಕುಂದುಕೊರತೆ ಕುರಿತು ಮಾತನಾಡಿ, ಕುಟುಂಬ ಪಿಂಚಣಿ ಸಮಸ್ಯೆ ಬಗೆಹರಿಸಬೇಕು, ಆರೋಗ್ಯ ಸಂಜೀವಿನಿ ಯೋಜನೆ ನಿವೃತ್ತರಿಗೂ ಕಲ್ಪಿಸಬೇಕು, ಜಿಲ್ಲಾದ್ಯಂತಹ ಏಕ ಕಾಲದಲ್ಲೇ ಪಿಂಚಣಿ ಸೌಲಭ್ಯ, ಪಿಂಚಣಿ ಮೇಲೆ ನೀಡುವ ಸಾಲ ತ್ವರಿತಗತಿಯಲ್ಲಿ ಆಗಬೇಕು. ಬ್ಯಾಂಕ್‍ಗಳಲ್ಲಿರುವ ಸಮಸ್ಯೆ, ಸರ್ಕಾರ 75, 80, 85 ವಯೋಮಾನ ದವರೆಗೆ ಇನ್‍ಕ್ರೀಮೆಂಟ್ ಶೇ.20, 25 ರಷ್ಟು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಖಜಾನೆ ಅಧಿಕಾರಿ ಶಶಿಕಲಾ, ಎಲ್ಲಾ ತಾಲ್ಲೂಕಿನ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಸರ್ಕಾರಿ ನೌಕರ ಪಿಂಚಿಣಿದಾರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
