ಸಿ.ಎಂ ಗೆ ಸಂಪೂರ್ಣ ಅಧಿಕಾರ ಕೊಟ್ಟ ರಾಹುಲ್ ಗಾಂಧಿ

ಬೆಂಗಳೂರು

           ರಾಜ್ಯ ಸಚಿವ ಸಂಪುಟ ಪುನರ್ರಚನೆಯ ಬೆನ್ನಲ್ಲೇ ಕೈ ಪಾಳೆಯದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಪೂರಕವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಜ್ಜಾಗಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಹೇಳಿದ್ದಾರೆ.

           ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯೇತರ ಶಕ್ತಿಗಳ ಬಲ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಭಿನ್ನಮತದಂತಹ ಬೆಳವಣಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವಂತೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.

           ಮುಂದಿನ ಐದು ವರ್ಷಗಳ ಕಾಲ ನೀವೇ ಸಿಎಂ.ಇದನ್ನು ಗಮನದಲ್ಲಿಟ್ಟುಕೊಳ್ಳಿ.ಮತ್ತು ಬಿಜೆಪಿಯ ಯಾವುದೇ ಆಪರೇಷನ್‍ಗೆ ಪ್ರತಿಯಾಗಿ ಮುಂದಡಿಯಿಡಿ.ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.

           ಓಟ್ ಫಾರ್ ಟ್ಯಾಟ್ ಎಂಬಂತೆ ಬಿಜೆಪಿ ಏನಾದರೂ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಲು ಮುಂದಾದರೆ ನೀವೂ ಆಪರೇಷನ್ ಬಿಜೆಪಿ ಕಾರ್ಯಕ್ಕೆ ಮುಂದಾಗಿ.ಯಾವುದೇ ನೆರವು ಬೇಕಿದ್ದರೂ ಕೇಳಿ ಎಂದು ಕುಮಾರಸ್ವಾಮಿ ಅವರಿಗೆ ರಾಹುಲ್ ಗಾಂಧಿ ವಿವರಿಸಿದ್ದಾರೆ.

           ನನಗೆ ಗೊತ್ತಿರುವಂತೆ ಕೆಲ ಮಂದಿ ಬಿಜೆಪಿಯ ಜತೆ ಸಂಪರ್ಕದಲ್ಲಿದ್ದಾರಾದರೂ ಹದಿನೈದರಷ್ಟು ಶಾಸಕರು ಆ ಕಡೆ ಹೋಗುವುದು ಅಸಾಧ್ಯ.ಆದರೂ ಸರ್ಕಾರವನ್ನು ಸುಭದ್ರವಾಗಿಟ್ಟುಕೊಳ್ಳುವ ದೃಷ್ಟಿಯಿಂದ ಬಿಜೆಪಿ ಮೇಲೆ ಕಣ್ಣಿಡುವಂತೆ ಅವರು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಜತೆಗೂ ಸುಧೀರ್ಘ ಮಾತುಕತೆ ನಡೆಸಿರುವ ರಾಹುಲ್ ಗಾಂಧಿ,ಸರ್ಕಾರ ಯಾವ ಕಾರಣಕ್ಕೂ ಬೀಳದಂತೆ ನೋಡಿಕೊಳ್ಳಿ.ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಿಮ್ಮ ಸಂಪೂರ್ಣ ಶಕ್ತಿಯ ಅಗತ್ಯ ಪಕ್ಷಕ್ಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

           ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಿನಲ್ಲೇ ಕೆಲ ಮಂದಿ ಶಾಸಕರು ಬಿಜೆಪಿ ಜತೆ ನಿರಂತರ ಸಂಪರ್ಕದಲ್ಲಿದ್ದಾರಾದರೂ ಕಮಲ ಪಾಳೆಯಕ್ಕೆ ಯಶಸ್ಸು ಸಿಗುತ್ತದೆ ಎಂಬ ವಿಷಯದಲ್ಲಿ ಅಪನಂಬಿಕೆ ಇರುವುದರಿಂದ ಇದ್ದಲ್ಲೇ ಇದ್ದು ಪ್ರತಿಭಟನೆ ನಡೆಸುವುದು ಸೂಕ್ತ ಎಂದು ಕೈ ಪಾಳೆಯದ ಬಹುತೇಕ ಭಿನ್ನರು ನಿರ್ಧರಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap