ಬೆಂಗಳೂರು

ಅಂತೂ ಇಂತೂ ರಾಜ್ಯದ ಗದ್ದುಗೆ ಏರಿದ ಭಾರತೀಯ ಜನತಾ ಪಕ್ಷ ಒಂದಿಲ್ಲೊಂದು ಆಂತರಿಕ ಸಮಸ್ಯೆ ಎದುರಿಸುತ್ತಿದೆ.
ಒಂದೆಡೆ ಅನರ್ಹ ಶಾಸಕರ ಕಗ್ಗಂಟು ಬಿಜೆಪಿಗೆ ತಲೆ ನೋವಾಗಿದ್ದರೆ, ಇತ್ತ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಕೂಡ ಸ್ಫೋಟವಾಗುವ ಸಾಧ್ಯತೆ ಇದೆ.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಟಿಕೆಟ್ ಹಂಚಿಕೆ ಬಗ್ಗೆ ಬಿಜೆಪಿಯಲ್ಲಿ ಭಿನ್ನಮತ ವ್ಯಕ್ತವಾಗಿದೆ. ಈ ಬಗ್ಗೆ ನಟ ಹಾಗೂ ಮಾಜಿ ಶಾಸಕ ಜಗ್ಗೇಶ್ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ‘ಬೈ ಎಲೆಕ್ಷನ್ ಬಂತು! 2018ರಲ್ಲಿ ಕಡೆಘಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು! ಮೌನವಾಗಿ ಇರಲೋ? ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ! ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇದಕ್ಕೆ ಬಿಜೆಪಿ ಕರ್ನಾಟಕ ಮತ್ತು ಬಿ.ಎಸ್.ಸಂತೋಷ್ ಅವರನ್ನು ಟ್ಯಾಗ್ ಮಾಡಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ, ವಿಧಾನಪರಿಷತ್ ಸದಸ್ಯರಾದ ಜಗ್ಗೇಶ್ ಅವರು ವಲಸೆ ಬಂದಿರುವ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಈ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
