ತುಮಕೂರು
ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯದ ಬಳಿ ರಾಷ್ಟ್ರೀಯ ಹೆದ್ದಾರಿ-206 ನಿರ್ಮಾಣ ಮತ್ತು ತಿಪಟೂರು ನಗರದ ಬೈಪಾಸ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಪಕ್ಷಪಾತ, ಅಕ್ರಮ, ಅನ್ಯಾಯ, ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಸಂತ್ರಸ್ತ ರೈತರಿಗೆ ಅನ್ಯಾಯ ಆಗುತ್ತಿದೆ .ತಕ್ಷಣವೇ ಸರ್ಕಾರ ಮಧ್ಯೆಪ್ರವೇಶಿಸಿ ಅನ್ಯಾಯ ಸರಿಪಡಿಸದಿದ್ದರೆ, ರಸ್ತೆ ಕಾಮಗಾರಿಗೆ ರೈತರು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ರೈತರು ಮತ್ತು ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-206 ಸಂತ್ರಸ್ತರ ಸಮಿತಿ ಮುಖಂಡ ಎಸ್.ಎನ್.ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಟಿ.ಎಸ್.ದೇವರಾಜ್, ರೈತ-ಕೃಷಿ ಕಾರ್ಮಿಕರ ಸಂಘಟನೆಯ ಸಿ.ಆನಂದ್, ಸಂತ್ರಸ್ತ ಮನೋಹರ್ ಪಟೇಲ್, ಹನುಮಂತರಾಯಪ್ಪ ಮತ್ತು ಅರುಣಕುಮಾರ್ ಅವರುಗಳು ಶನಿವಾರ ಬೆಳಗ್ಗೆ ತುಮಕೂರು ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತ, ತಿಪಟೂರು ಬೈಪಾಸ್ ಯೋಜನೆಯನ್ನು ರದ್ದುಪಡಿಸಿ, ಪರ್ಯಾಯ ವ್ಯವಸ್ಥೆ ಮಾಡಲಿ ಎಂದೂ ಆಗ್ರಹಿಸಿದರು.
ರೈತರ ಸಮಾಧಿ ಮೇಲೆ ಹೆದ್ದಾರಿ
ಎಸ್.ಎನ್.ಸ್ವಾಮಿ ಮಾತನಾಡಿ, ಹೆದ್ದಾರಿಗಾಗಿ ಭೂಮಿಯನ್ನು ಬಿಟ್ಟುಕೊಡುತ್ತಿರುವ ರೈತರಿಗೆ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ಲಭಿಸುತ್ತಿಲ್ಲ. ಪೊಲೀಸ್ ಬಲದೊಂದಿಗೆ ಭೂಸ್ವಾಧೀನ/ಕಾಮಗಾರಿ ನಡೆಸಲಾಗುತ್ತಿದೆ. ಕಾನೂನು-ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಲಾಗಿದೆ. ಪ್ರಭಾವಿ ರಾಜಕಾರಣಿಗಳ ಲಾಬಿಗೆ ಮಣಿದು, ಹೆದ್ದಾರಿಯ ಅಲೈನ್‍ಮೆಂಟ್‍ನ್ನು ಮನಬಂದಂತೆ ಅವೈಜ್ಞಾನಿಕವಾಗಿ ಬದಲಾಯಿಸಲಾಗುತ್ತಿದೆ.
ರೈತರಿಗೆ ನಷ್ಟ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ/ ಗುತ್ತಿಗೆದಾರರಿಗೆ ಲಾಭ ಎನ್ನುವಂತಾಗಿದೆ. ಜಮೀನು ಕಳೆದುಕೊಳ್ಳುವ ರೈತರ ಅಳಲನ್ನು ಆಲಿಸಲು ಯಾರೊಬ್ಬರೂ ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದು, ರೈತರ ಸಮಾಧಿ ಮೇಲೆ ಹೆದ್ದಾರಿ ನಿರ್ಮಿಸಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಿಪಟೂರಿಗೆ ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ದರು. ಆಗ ಸಹ ರೈತರು ಮನವಿ ಸಲ್ಲಿಸಲು ಯತ್ನಿಸಿದರಾದರೂ, ಅವರು ಸೂಕ್ತವಾಗಿ ಸ್ಪಂದಿಸದೆ ರೈತರನ್ನು ಅಪಮಾನಿಸಿದರು ಎಂದು ಆರೋಪಿಸಿದ ಎಸ್.ಎನ್.ಸ್ವಾಮಿ, ಮುಖ್ಯಮಂತ್ರಿಗಳೇ ಹೀಗೆ ಪ್ರತಿಕ್ರಿಯಿಸಿದರೆ ನೊಂದವರು ಇನ್ನು ಯಾರನ್ನು ಕಾಣಬೇಕು? ರಸ್ತೆಗಿಳಿದು ಹೋರಾಡುವುದೇ ಈಗಿರುವ ದಾರಿ ಎಂದರು.
ಸಂತ್ರಸ್ತ ಮನೋಹರ್ ಪಟೇಲ್ ಮಾತನಾಡುತ್ತ, ತಿಪಟೂರು ನಗರದ ಬೈಪಾಸ್ ಯೋಜನೆಯಲ್ಲಿ ಆಗುತ್ತಿರುವ ಅಕ್ರಮ ಹಾಗೂ ಅನ್ಯಾಯದಿಂದ 8 ಗ್ರಾಮಗಳ 25 ಕುಟುಂಬಗಳ ಸುಮಾರು 200 ಜನರು ಬೀದಿಪಾಲಾಗುವ ಅಪಾಯ ಉಂಟಾಗಿದೆ ಎಂದು ಆತಂಕದಿಂದ ನುಡಿದರು. ಹುಚ್ಚಗೊಂಡನಹಳ್ಳಿಯಿಂದ ಮಡೆನೂರುಗೇಟ್ ವರೆಗಿನ ಒಟ್ಟು 7.5 ಕಿ.ಮೀ. ಬೈಪಾಸ್ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, 2016 ರ ಪ್ರಕಟಣೆಯನ್ನು ಮನಬಂದಂತೆ ಬದಲಿಸಲಾಗಿದೆ.
ಅಲೈನ್‍ಮೆಂಟ್ ಸಹಾ ಬದಲಾಗಿದೆ. ನೈಜ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಭಾಗವು ತಿಪಟೂರು ನಗರ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದರೂ, ಪರಿಹಾರಧನ ವಿಷಯದಲ್ಲಿ ತಾರತಮ್ಯ ಹಾಗೂ ಅನ್ಯಾಯವೆಸಗಲಾಗುತ್ತಿದೆ. ಒಂದು ಎಕರೆಗೆ ಕೇವಲ 2 ರಿಂದ 3 ಲಕ್ಷ ರೂ.ಗಳನ್ನು ನಿಗದಿಪಡಿಸಿ, ಪಕ್ಷಪಾತವೆಸಗಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಹನುಮಂತರಾಯಪ್ಪ ಮತ್ತು ಅರುಣಕುಮಾರ್ ಮಾತನಾಡಿ, ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯದಲ್ಲಿ ಹೆದ್ದಾರಿಯ ಅಲೈನ್‍ಮೆಂಟನ್ನು ಉದ್ದೇಶಪೂರ್ವಕವಾಗಿ ಬದಲಿಸಲಾಗಿದೆ. ಇದರಿಂದ ಅನೇಕ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು. ಆನಂದ್ ಮಾತನಾಡುತ್ತ, ಹೆದ್ದಾರಿ ನಿರ್ಮಾಣದ ವಿಷಯದಲ್ಲಿ ದಲ್ಲಾಳಿಗಳ ಹಾವಳಿ ಅಧಿಕವಾಗುತ್ತಿದೆ. ಭ್ರಷ್ಟಾಚಾರ ವ್ಯಾಪಕವಾಗಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಹಕ್ಕೊತ್ತಾಯಗಳು
1)ಭೂಮಿ ಕಳೆದುಕೊಳ್ಳುವ ರೈತರಿಗೆ ಸರಿಯಾದ ಪರಿಹಾರ ನೀಡದಿರುವುದರಿಂದ ತಿಪಟೂರು ಬೈಪಾಸ್ ರಸ್ತೆಯನ್ನು ರದ್ದುಗೊಳಿಸಿ, ಪರ್ಯಾಯ ವ್ಯವಸ್ಥೆ ಮಾಡಬೇಕು.
2)ಅಲೈನ್‍ಮೆಂಟ್‍ನಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು,
3) ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಯೋಜನಾಧಿಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು,
4) ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕಾರಿಡಾರ್ ನಿರ್ಮಿಸಬೇಕು,
5) ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕೂಡಲೇ ರೈತರ ಪರವಾಗಿ ನಿಂತು, ನ್ಯಾಯಬದ್ಧ ಪರಿಹಾರ ಮತ್ತು ಎರಡನೇ ಷೆಡ್ಯೂಲ್‍ನಲ್ಲಿ ಬರುವ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಐದು ಹಕ್ಕೊತ್ತಾಯಗಳನ್ನು ಈ ಮುಖಂಡರುಗಳು ಮುಂದಿಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ