ದಾವಣಗೆರೆ
ಮಹಾನಗರ ಪಾಲಿಕೆ, ಸ್ಮಾರ್ಟ್ಸಿಟಿ, ಪಿಡಬ್ಲ್ಯುಡಿ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಗುಣಮಟ್ಟದ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಪಾಲಿಕೆ, ಸ್ಮಾರ್ಟ್ಸಿಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆ, ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಪರಸ್ಪರ ಸಮನ್ವಯ ಸಾಧಿಸದೇ ಆಯಾ ಇಲಾಖೆಯವರೇ ಕಾಮಗಾರಿಗಳನ್ನು ಕೈಗೊಂಡರೆ, ಗುಣಮಟ್ಟದ ಕಾಮಗಾರಿ ಮಾಡಲಾಗುವುದಿಲ್ಲ. ಆದ್ದರಿಂದ ಪರಸ್ಪರ ಸಮನ್ವಯ ಸಾಧಿಸಿ, ಗುಣಮಟ್ಟದ ಕಾಮಗಾರಿಗಳನ್ನು ನಡೆಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಒತ್ತು ನೀಡಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ಮಾತನಾಡಿದ ಆರ್ಟಿಓ ಎನ್.ಜೆ.ಬಣಕಾರ್, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿರುವ ಟ್ಯಾಕ್ಸಿ ಸ್ಟ್ಯಾಂಡ್ ಅನ್ನು ಸ್ಥಳಾಂತರಿಸಲು ಪೊಲೀಸ್, ಸಾರಿಗೆ ಹಾಗೂ ಲಾರಿ ಮಾಲೀಕರ ಸಂಘದ ಅಧ್ಯಕ್ಷರೊಂದಿಗೆ ನಗರದ ರಿಂಗ್ ರಸ್ತೆ ವೃತ್ತದ ಎಡಭಾಗದಲ್ಲಿರುವ ರಸ್ತೆ ಮತ್ತು ಡಿಸಿಎಂ ಟೌನ್ಶಿಪ್ ಬಳಿ ಜಾಗ ಪರಿಶೀಲನೆ ನಡೆಸಲಾಗಿದೆ. ಆದರೆ, ರಿಂಗ್ರಸ್ತೆ ಬಳಿ ಹೈಟೆನ್ಷನ್ ಲೈನ್ ಹೋಗಿರುವ ಕಾರಣ ಇಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ ಬೇಡ ಎನ್ನಲಾಗುತ್ತಿದೆ. ಆದ್ದರಿಂದ ಇನ್ನೊಂದು ಜಾಗ ಹುಡುಕಿ, ಪರಿಶೀಲಿಸಿ ಟ್ಯಾಕ್ಸಿ ಸ್ಟ್ಯಾಂಡ್ ಸ್ಥಳಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.
ನಗರದ 3 ಮತ್ತು 4 ಚಕ್ರಗಳ ಸರಕು ಸಾಗಣಿಕೆ ವಾಹನಗಳ ನಿಲುಗಡೆ ಜಾಗಕ್ಕಾಗಿ ನಗರದ ಕೆಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಸೂಕ್ತ ಸ್ಥಳಾವಕಾಶ ಸಿಗದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಇನ್ನೊಮ್ಮೆ ಪರಿಶೀಲಿಸಿ ಸ್ಥಳ ನಿಗದಿಗೊಳಿಸಲಾಗುವುದು ಎಂದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾತನಾಡಿ, ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಯೋಜನೆ ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ನಗರ ಭಾಗದಲ್ಲಿ ಜಾಗದ ಕೊರತೆ ಇರುವ ಕಾರಣ ಇದಕ್ಕಾಗಿ ಬಾತಿ ಗುಡ್ಡದ ಬಳಿ ಜಾಗ ಗುರುತಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಗರದಲ್ಲಿ ಆಶ್ರಯ ಮನೆ ಸೇರಿದಂತೆ ಎಲ್ಲದಕ್ಕೂ ಸ್ಥಳದ ಸಮಸ್ಯೆ ಎದುರಾಗುತ್ತಿದೆ. ಈಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವೂ ಸ್ಥಳ ಪರಿಶೀಲಿಸಿ, ಈ ತಿಂಗಳ ಅಂತ್ಯದೊಳಗೆ ಸರಕು ಸಾಗಣೆ ಮತ್ತು ಟ್ರಕ್ ಟರ್ಮಿನಲ್ ಜಾಗವನ್ನು ಅಂತಿಮ ಗೊಳಿಸಿದರು.
ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಮಾತನಾಡಿ, ನಗರದ ಯಾವುದೇ ಅಂಡರ್ಪಾಸ್ಗಳಲ್ಲಿ ಸ್ವಚ್ಛತೆ ಇಲ್ಲ. ಪಿಡಬ್ಲ್ಯುಡಿ, ಪಾಲಿಕೆಯವರು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಅಂಡರ್ಪಾಸ್ಗಳನ್ನು ಸುಸ್ಥಿತಿಯಲ್ಲಿ ಇಡಬೇಕೆಂದು ಮನವಿ ಮಾಡಿದರು.ಸರಕು ಸಾಗಣೆ ವಾಹನಗಳ ಸಂಘದ ಅಧ್ಯಕ್ಷ ಮಾತನಾಡಿ, ನಗರದ ಬಂಬೂ ಜಜಾರ್ನ ಕಲ್ಲೇಶ್ವರ ರೈಸ್ಮಿಲ್ ಬಳಿ ರಸ್ತೆ ಬದಿಗಳಲ್ಲಿ ಹೊಂಡದ ರೀತಿಯಾಗಿದ್ದು ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೇ, ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿದೆ. ಆದ್ದರಿಂದ ಈ ರಸ್ತೆ ಬಳಿ ಇರುವ ಡ್ರೈನೇಜ್, ಪಾದಚಾರಿ ರಸ್ತೆಗಳನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮಾತನಾಡಿ, ಪಾಲಿಕೆ ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ರಸ್ತೆ ಬದಿಯ ಮಣ್ಣನ್ನು ಸ್ವಚ್ಛಗೊಳಿಸಿಲ್ಲ. ಪಿಬಿ ರಸ್ತೆ ಅಭಿವೃದ್ಧಿಯಾಗಿ ಐದು ವರ್ಷ ಕಳೆದರೂ, ಪಾದಚಾರಿ ರಸ್ತೆ ನಿರ್ಮಿಸಿಲ್ಲ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಒಳಗಿನಿಂದ ದಾರಿಯುದ್ದಕ್ಕೂ ನಿಲುಗಡೆಗೊಳಿಸುತ್ತಾ, ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವುದರಿಂದ ವಾಹನ ದಟ್ಟಣೆ ಹೆಚ್ಚುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಮಾತನಾಡಿ, ಶಾಮನೂರು ಪಾದಚಾರಿ ಕಾಮಗಾರಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿಯೇ ಕೆಲಸ ಆರಂಭವಾಗಲಿದೆ ಎಂದರು.ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ಎಲ್ಲೆಡೆ ಕೆಸಲ ಆಗುತ್ತಿದೆ. ಪಿಬಿ ರಸ್ತೆಯಲ್ಲಿ ಡಸ್ಟ್ಫ್ರೀ ಗೊಳಿಸಿ, ನೀರು ಸಿಂಪಡಿಸಲಾಗುತ್ತಿದೆ, ಇತರೆ ರಿಪೇರಿ ಕೆಲಸಗಳಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿಯೇ ಕೆಲಸ ಆರಂಭವಾಗಲಿದೆ ಎಂದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಾತನಾಡಿ, ನಗರದ ಹಲವಾರು ಕಡೆ ರಸ್ತೆ ಬದಿಗಳಲ್ಲಿ ಮಣ್ಣು ಹಾಗೇ ಇದೆ, ಕುಂದುವಾಡ ರಸ್ತೆ ಬಳಿ ಮಣ್ಣು ತೆಗೆದಿಲ್ಲ. ಬಿಎಸ್ಎನ್ಎಲ್ ಫ್ಲೈ ಓವರ್ ಎದುರಿನ ರಸ್ತೆಯಲ್ಲಿ ಅಪಘಾತದ ಸಂಭವ ಹೆಚ್ಚಿದೆ. ಎಸ್ಪಿ ಕಚೇರಿ ಹಾಗೂ ಆರ್ಟಿಓ ಕಚೇರಿ ಮುಂದಿನ ಡಬ್ಬಲ್ ರಸ್ತೆ ಕಾಮಗಾರಿ ಆಗಿರುವುದಿಲ್ಲ. ಈ ರಸ್ತೆಯು ರಿಂಗ್ ರಸ್ತೆಯಾಗಿದ್ದು ಎಸ್ಪಿ ಕಚೇರಿಯಿಂದ ಕೊಂಡಜ್ಜಿ ರಸ್ತೆ ವರೆಗೆ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಡಿಸಿ, ಸ್ಮಾರ್ಟ್ಸಿಟಿ ಯೋಜನೆಯಡಿ ಈ ಕಾಮಗಾರಿ ಕೈಗೊಂಡು, ಜಂಕ್ಷನ್ ಸುಧಾರಣೆಗೊಳಿಸಲಾಗುವುದು ಎಂದರು.ಸಭೆಯಲ್ಲಿ ಪಿಡಬ್ಲ್ಯುಡಿ ಇಲಾಖೆ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ