ಹುಬ್ಬಳ್ಳಿ:
ರಾಷ್ಟ್ರಾದ್ಯಂತ ಆತಂಕ ಸೃಷ್ಠಿಸಿರುವ ಕೊರೋನಾ ವೈರಸ್’ನಿಂದ ಭೀತಿಗೊಳಗಾಗುತ್ತಿರುವ ರಾಜ್ಯದ ಜನತೆಗೆ ಧೈರ್ಯ ತುಂಬಲ ರಾಜ್ಯ ಆರೋಗ್ಯ ಇಲಾಖೆ ತೆರೆದಿರುವ ಸಹಾಯವಾಣಿ (104)ಗೆ ಪ್ರತೀನಿತ್ಯ ಸುಮಾರು 40,000 ಮಂದಿ ಕರೆ ಮಾಡುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಸಹಾಯವಾಣಿ ಸಂಖ್ಯೆಗೆ ಕರೆ ಮಾಡುತ್ತಿರುವ ಜನತೆ, ವೈರಸ್ ಕುರಿತಂತೆ ಸಲಹೆ ಹಾಗೂ ಸಹಾಯಗಳನ್ನು ಕೇಳುತ್ತಿದ್ದಾರೆಂದು ತಿಳಿದುಬಂದಿದೆ.
ಹುಬ್ಭಳ್ಳಿಯಲ್ಲಿ 2013ರಲ್ಲಿಯೇ ಆರೋಗ್ಯವಾಣಿಯನ್ನು ತೆರೆಯಲಾಗಿತ್ತು. ಆರೋಗ್ಯವಾಣಿಯಲ್ಲಿ ತರಬೇತಿ ಪಡೆದ ನೂರಾರು ಬಿಪಿಒ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಕರೆಗಳನ್ನು ಸ್ವೀಕರಿಸುವ ಈ ಸಿಬ್ಬಂದಿಗಳು, ವೈರಸ್ ಕುರಿತಂತೆ ಮಾಹಿತಿ ನೀಡುತ್ತಿದ್ದಾರೆ. ಒಂದು ವೇಳೆ ತಾನು ನೀಡುವ ಉತ್ತರಕ್ಕೆ ಕರೆ ಮಾಡಿದವರಿಗೆ ಸಮಾಧಾನವಾಗದೇ ಹೋದಲ್ಲಿ, ಕರೆಯನ್ನು ವೈದ್ಯಕೀಯ ವೃತ್ತಿಪರರಿಗೆ ವರ್ಗಾಯಿಸಲಾಗುತ್ತದೆ. ಹುಬ್ಬಳ್ಳಿ ಸಹಾಯವಾಣಿಗೆ ಹೆಚ್ಚು ಜನರು ಕರೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನಲ್ಲೂ ಸಹಾಯವಾಣಿ ಕೇಂದ್ರವನ್ನು ಸ್ಥಾಪಸಲಾಗಿದೆ. ಇದೀಗ ಈ ಎರಡೂ ಕೇಂದ್ರಗಳು ಇಡೀ ರಾಜ್ಯದಿಂದ ಬರುವ ಕರೆಗಳನ್ನು ಸ್ವೀಕರಿಸಿ ಜನರ ಸಂಶಯಗಳನ್ನು ದೂರಾಗಿಸಿ, ಸಲಹೆಗಳನ್ನು ನೀಡುತ್ತಿವೆ.
ಜ್ವರ, ಶೀತ ಬಂದ ಬಳಿಕ ವೈರಸ್ ಕುರಿತಂತೆ ಸಂಶಯಗಳನ್ನಿಟ್ಟುಕೊಳ್ಳುತ್ತಿರುವ ಜನರು ಈ ಸಹಾಯವಾಣಿಗೆ ಕರೆ ಮಾಡಿ, ಮಾರ್ಗದರ್ಶನಗಳನ್ನು ಪಡೆಯುತ್ತಿದ್ದಾರೆ. ಕೆಲ ಪ್ರಕರಣಗಳಲ್ಲಿ ಬಿಪಿಒ ಸಿಬ್ಬಂದಿಗಳು ಸ್ಥಳೀಯ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು, ಬಳಿಕ ಕರೆ ಮಾಡಿದ ವ್ಯಕ್ತಿಗೆ ಮಾಹಿತಿ ನೀಡುತ್ತಿದ್ದಾರೆ.
ವ್ಯಕ್ತಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದ್ದರೆ, ವೈರಸ್ ದೃಢಪಡುವ ಸಾಧ್ಯತೆಗಳಿದ್ದರೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಈ ಕುರಿತು ಮಾಹಿತಿ ನೀಡುತ್ತಿದ್ದೇವೆ. ಫರ್ಸ್ಟ್ ರೆಸ್ಪಾನ್ಸ್ ಹಾಸ್ಪಿಟಲ್ ಗೆ ವ್ಯವಸ್ಥೆಗಳ ಮೂಲಕ ಸಂದೇಶ ರವಾನಿಸಲಾಗುತ್ತದೆ. ಇದೇ ಸಂದೇಶವನ್ನೇ ರೋಗಿಯ ಮೊಬೈಲ್ ಸಂಖ್ಯೆಗೂ ರವಾನಿಸಲಾಗುತ್ತದೆ. ಈ ಸಂದೇಶವನ್ನು ರೋಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ತೋರಿಸಿದ ಕೂಡಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.