ಕೊರೋನಾ ಸೋಂಕು : ಕರ್ನಾಟಕ 9ನೇ ಸ್ಥಾನದಲ್ಲಿ : ಸಿಎಂ

ಬೆಂಗಳೂರು:

    ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ವಿಡಿಯೋ ಸಂದರ್ಶನದ ಮೂಲಕ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡು ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಒದಗಿಸಿದರು.

   ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ.ಸುಧಾಕರ್, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

     ಬಳಿಕ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಪ್ರಧಾನಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಲಾಕ್ ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ರಾಜ್ಯದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ವಲಸಿಗರನ್ನು ಪ್ರತ್ಯೇಕವಿರಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದರು.

     ಕೊರೊನಾ ಸೋಂಕಿನಿಂದಾಗಿ ಜಾಗತಿಕ ಮಟ್ಟದಲ್ಲಿ ಚಿಂತಾಜನಕವಾಗಿದೆ. ಲಾಕ್‌ಡೌನ್‌ ಸರಿಯಾಗಿ ನಿಭಾಯಿಸುವಂತೆ ಸೂಚಿಸಿದ್ದಾರೆ‌. ಔಷಧ, ಆಹಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಹಾಗೂ ಆಯುಷ್ ವೈದ್ಯರಿಗೆ ಆನ್ ಲೈನ್ ಮೂಲಕ ತರಬೇತಿ ನೀಡಲು ಸೂಚಿಸಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಬಾರದು. ಜನರಿಗೆ ಪ್ರತ್ಯೇಕ ಆಸ್ಪತ್ರೆ ಬಗ್ಗೆ ತಿಳಿಸಬೇಕು. ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಬೇಕು, ಹೆಚ್ಚಿನ ಸೇವೆಗೆ ಆಯುಷ್ ವೈದ್ಯರ ಸೇವೆ ಪಡೆದುಕೊಳ್ಳುವಂತೆ ಹಾಗೂ ಬ್ಯಾಂಕ್ ನೂಕು‌ನುಗ್ಗಲು ತಡೆಯುವುದು ಮತ್ತಿತರ ಸಮಸ್ಯೆ ಪರಿಹರಿಸುವಂತೆ ನಮಗೆ ಸೂಚಿಸಿದ್ದಾರೆ ಎಂದು ವಿವರಿಸಿದರು.

     ನಮ್ಮ ರಾಜ್ಯದಲ್ಲಿ ಪ್ರಧಾನಿಯವರ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು, ಏಪ್ರಿಲ್ 14ರವರೆಗೆ ಕಟ್ಟುನಿಟ್ಟಾಗಿಯೇ ಲಾಕ್‌ಡೌನ್ ಪಾಲಿಸಲಾಗುವುದು. ಇದರ ಮೇಲೆ ಮುಂದಿನ ನಿರ್ಧಾರ ನಿಂತಿದೆ. ಎಲ್ಲಾ ಧರ್ಮಗುರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಲಾಗುವುದು. ಎಲ್ಲರ ಸಹಕಾರದೊಂದಿದೆ ಅನಾಹುತವನ್ನು ನಿಯಂತ್ರಿಸುವುದಾಗಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    31 ಪ್ರಕರಣಗಳು ನೆಗೆಟಿವ್ ಬಂದಿವೆ‌‌. ನಿಜಾಮುದ್ದೀನ್ ನಿಂದ ಬಂದ ಎಲ್ಲರಿಗೂ ಟೆಸ್ಟ್ ಮಾಡಲಾಗುತ್ತಿದೆ. ಅವರೆ ಬಂದು ಪರೀಕ್ಷೆ ಮಾಡಿಕೊಂಡರೆ ಒಳ್ಳೆಯದು ಎಂದರು.ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಕರ್ನಾಟಕದಿಂದ ಹೋಗಿದ್ದ 391 ಜನರನ್ನು ಗುರುತಿಸಿಲಾಗಿದ್ದು ಅವರನ್ನು ಹೋಮ್ ಕ್ವಾರಂಟೇನ್ ಮಾಡುವ ಪ್ರಕ್ರಿಯೆ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದರು.ಲಾಕ್ ಡೌನ್ ನಿಂದ ಕೆಲ ಜಿಲ್ಲೆ ಗಳಲ್ಲಿ ಅವರು ಸಿಲುಕಿ ಕೊಂಡಿದ್ದಾರೆ. ಅವರನ್ನು ಗುರುತಿಸಿ ಅಲ್ಲೇ ಕ್ವಾರಂಟೇನ್ ಮಾಡುವಂತೆ ಸಂಬಂಧಿಸಿದ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.

      ಬೀದರ್ ನಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲಿ 91 ಜನರನ್ನು ಕ್ವಾರಂಟೇನ್ ಮಾಡಲಾಗಿದೆ. 80 ಜನರ ವರದಿ ನೆಗಟೀವ್ ಬಂದಿದೆ. ಉಳಿದ 11 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದರು.

      ಲಾಕ್ ಡೌನ್ ನಿಂದ ಕೃಷಿ ಚಟುವಟಿಕೆಗೆ ವಿನಾಯತಿ ನೀಡಲಾಗಿದೆ. ಏ.14ರ ವರೆಗೆ ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ ಎನ್ನುವುದರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.ಎಲ್ಲರು ಸಹಕಾರ ನೀಡಬೇಕು ಎಂದು ಎಲ್ಲಾ ಧರ್ಮಗುರುಗಳ ಬಳಿ ಮನವಿ ಮಾಡಿಕೊಳ್ಳುತ್ತೇನೆ, ಜನರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ, ಅದಕ್ಕೆ ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.

     ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಘಟನೆಗಳು ಆಗಿವೆ‌, ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಜತೆಗೆ ದೆಹಲಿಗೆ ಹೋಗಿ ಬಂದವರು ಕೂಡ ಸಹಕರಿಸಬೇಕು‌‌. ಸ್ವಯಂಪ್ರೇರಿತರಾಗಿ ಹೊರಬಂದು ಪರೀಕ್ಷೆಗೆ ಸಹಕರಿಸಬೇಕೆಂದು ಯಡಿಯೂರಪ್ಪ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap