ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ತಹಶೀಲ್ದಾರ್ ಸೂಚನೆ

ಚಳ್ಳಕೆರೆ

       ರಾಜ್ಯದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಕ್ಷರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, 1 ಜನವರಿ 2019ಕ್ಕೆ 18 ವರ್ಷ ತುಂಬುವವರು ಮತದಾನ ಪಟ್ಟಿಯಲ್ಲಿ ಸೇರ್ಪಡೆಗೆ ಆರ್ಹರಿದ್ದು ಈ ಬಗ್ಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ನಮೂನೆ ನಂ 6ರಲ್ಲಿ ಅರ್ಜಿಗಳನ್ನು ಪಡೆದು ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಅಂತಿಮವಾಗಿ 4 ಜನವರಿ 2019ರಂದು ಮತದಾರರ ಪರಿಕ್ಷರಣಾ ಪಟ್ಟಿ ಬಿಡುಗಡೆಯಾಗಲಿದ್ದು, ಚುನಾವಣಾ ಕಾರ್ಯದಲ್ಲಿ ನಿರತರಾದ ಎಲ್ಲಾ ಸಿಬ್ಬಂದಿ ವರ್ಗ ನಿಗದಿತ ಅವಧಿಯೊಳಗೆ ಎಲ್ಲಾ ಕೆಲಸ ಕಾರ್ಯಗಳನ್ನು ಕರಾರೂ ಒಕ್ಕಾಗಿ ಪೂರೈಸುವಂತೆ ತಹಶೀಲ್ದಾರರು ಮತ್ತು ತಾಲ್ಲೂಕು ಮಟ್ಟದ ಚುನಾವಣಾಧಿಕಾರಿಯಾದ ಟಿ.ಸಿ.ಕಾಂತರಾಜು ತಿಳಿಸಿದರು.

      ಅವರು, ಮಂಗಳವಾರ ಇಲ್ಲಿನ ಖಾಸಗಿ ಚಿತ್ರಮಂದಿರದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಮತದಾರರ ಪಟ್ಟಿ ಪರಿಕ್ಷರಣೆ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಆರ್.ಗಿರೀಶ್ ಈ ಬಗ್ಗೆ ಆದೇಶ ನೀಡಿದ್ದು, ಮತದಾರರ ಪಟ್ಟಿ ಪರಿಕ್ಷರಣಾ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

        ನಮೂನೆ-6ನ್ನು ಹೊಸದಾಗಿ ಹೆಸರು ಸೇರ್ಪಡೆ ಮಾಡುವುದಕ್ಕೆ ನಮೂನೆ-7ನ್ನು ಹೆಸರು ಕೈಬಿಡಲು, ನಮೂನೆ-8 ಮತದಾರರ ಪಟ್ಟಿಯಲ್ಲಿ ಮಾಹಿತಿ ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡುವ ಬಗ್ಗೆ, ನಮೂನೆ-8ಎ ಬೇರೆ ಮತಗಟ್ಟೆ ಕ್ಷೇತ್ರಕ್ಕೆ ವರ್ಗಾಹಿಸಬೇಕಾದಲ್ಲಿ ಅನುಸರಿಸಬೇಕಾದ ಮಾರ್ಗಸೂಚನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಮತಗಟ್ಟೆ ಅಧಿಕಾರಿಗಳು ಪ್ರತಿಯೊಬ್ಬ ಅರ್ಜಿದಾರರಿಂದಲೂ ಸಹ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

       ಮತದಾರರ ಪಟ್ಟಿ ಪರಿಕ್ಷರಣೆ ಕುರಿತಂತೆ ಮಾಹಿತಿ ನೀಡಿದ ಅವರು, ಹಕ್ಕು ಮತ್ತು ಆಕ್ಷೇಪಣೆಗಳನ್ನು ದಾಖಲಿಸಲು 10 ಅ.2018ರಿಂದ 20 ನ. 2018ರ ತನಕ ಅವಕಾಶವಿದೆ, ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು ಡಿಸೆಂಬರ್ 20ರ ತನಕ ಅವಕಾಶವಿದೆ, ಮತದಾರರ ಅಂತಿಮ ಪಟ್ಟಿ ಪರಿಕ್ಷರಣೆ ಅಂತಿಮ ಪ್ರಕಟಣೆ 4 ಜನವರಿ 2019ರಂದು ಪ್ರಕಟವಾಗಲಿದೆ ಎಂದರು.
ಮತದಾರರ ಪಟ್ಟಿ ಸೇರ್ಪಡೆಗೆ ಸಂಬಂಧಪಟ್ಟಂತೆ ಕ್ಷೇತ್ರ ವ್ಯಾಪ್ತಿಯ 253 ಮತಗಟ್ಟೆ ಅಧಿಕಾರಿಗಳು ನಿಯೋಜಿಸಿದ ಸಿಬ್ಬಂದಿಯೊಂದಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಧಿಕಾರಿಗಳಿಗೆ ನಿಗದಿ ಪಡಿಸಿದ ಮನೆಗಳಿಗೆ ತಪ್ಪದೆ ಭೇಟಿ ನೀಡಿ ಅವರಿಂದಲೇ ಸಂಪೂರ್ಣ ಮಾಹಿತಿ ಹಾಗೂ ದಾಖಲಾತಿಗಳನ್ನು ಪಡೆದು ದಾಖಲಿಸಬೇಕು.

        ಯಾವುದೇ ಕಾರಣಕ್ಕೂ ಎಲ್ಲೇ ಇದ್ದು ದಾಖಲೆ ಮಾಡಲು ಯತ್ನಿಸಿದರೆ ಅದು ಲೋಪವಾಗುತ್ತದೆ. ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಕ್ಷಣೆಗೆ ಹಲವಾರು ನೂತನ ತಾಂತ್ರಿಕತೆಗಳನ್ನು ಅಳವಡಿಸಿದ್ದು, ಇದರಿಂದ ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಮನೆಗಳಿಗೆ ತೆರಳಲೇ ಬೇಕಿದೆ. ಚುನಾವಣಾ ಕಾರ್ಯವನ್ನು ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಗಂಭೀರವಾಗಿ ಪರಿಗಣಿಸಿ ಚುನಾವಣಾ ಕಾರ್ಯದಲ್ಲಿ ನಿರತರಾಗುವಂತೆ ಅವರು ಸೂಚಿಸಿದರು. ಯಾವುದೇ ಅಧಿಕಾರಿಗಳಿಗೆ ಯಾವುದೇ ಸಂದರ್ಭದಲ್ಲಿ ಮಾಹಿತಿ ಬೇಕಾದಲ್ಲಿ ಕೂಡಲೇ ಸಂಪರ್ಕಿಸುವಂತೆ ಮನವಿ ಮಾಡಿದರು.

         ಮತಗಟ್ಟೆ ಅಧಿಕಾರಿಗಳ ಪರವಾಗಿ ಮಾತನಾಡಿದ ಶಿಕ್ಷಕ ನಾಗರಾಜು, ಮತಗಟ್ಟೆ ಪರಿಕ್ಷರಣಾ ಕಾರ್ಯದಲ್ಲಿ ಈಗಾಗಲೇ ತಹಶೀಲ್ದಾರ್ ಕಾಂತರಾಜು ನೀಡಿದ್ದಾರೆ. ಇದಕ್ಕೂ ಹೊರತು ಪಡಿಸಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ವಿಭಿನ್ನ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಾಯೋನ್ಮುಖರಾಗಬೇಕು.

         ಹಿಂಜರಿಕೆಯಿಂದ ಲೋಪವೆಸಗಿದಲ್ಲಿ ಅದು ಇಡೀ ಚುನಾವಣಾ ವ್ಯವಸ್ಥೆಗೆ ಕಪ್ಪು ಚುಕ್ಕಿಯಾಗುತ್ತದೆ. ಈಗಾಗಲೇ ತಹಶೀಲ್ದಾರರೇ ನೇರವಾಗಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಕಾರ್ಯಕ್ಕೆ ಸಂಬಂಧಪಟ್ಟಂತೆ ದೂರವಾಣಿ ಮೂಲಕ ಮಾಹಿತಿ ನೀಡಲು ಸೂಚನೆ ನೀಡಿದ್ದು, ಎಲ್ಲರೂ ಸೇರಿ ಈ ಕಾರ್ಯವನ್ನು ಜವಾಬ್ದಾರಿಯುತವಾಗಿ ಪೂರೈಸಬೇಕೆಂದು ಮನವಿ ಮಾಡಿದರು.

        ಸಭೆಯಲ್ಲಿ ನಗರಸಭೆ ಕಂದಾಯಾಧಿಕಾರಿ ವಿ.ಈರಮ್ಮ, ಶರಣಬಸಪ್ಪ, ಚುನಾವಣಾ ಶಿರಸ್ತೇದಾರ್ ಪ್ರಕಾಶ್, ಚುನಾವಣಾ ಸಿಬ್ಬಂದಿಯಾದ ಸುಭಾನ್, ಓಬಳೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ರಾಜೇಶ್, ಲಿಂಗೇಗೌಡ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap