ದಾವಣಗೆರೆ
ಭವಿಷತ್ತಿನ ವಿಜ್ಞಾನಿಗಳು ನಮ್ಮ ನಾಗರೀಕತೆಗೆ ಮಾರಕವಾಗದ ರೀತಿಯಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಅನ್ವೇಷಣೆ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಕರೆ ನೀಡಿದರು.
ಶ್ರೀ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಕ್ಷೇತ್ರಗಳಿಗೂ ವಿಜ್ಞಾನದ ಕೊಡುಗೆ ಅಪಾರವಾಗಿದೆ. ಆದರೆ, ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಮನುಕುಲದ ಶಾಂತಿ-ಸಂಬಂಧಗಳು ಕುಂಠಿತವಾಗುತ್ತಿವೆ. ಆದ್ದರಿಂದ ಭವಿಷತ್ತಿನ ವಿಜ್ಞಾನಿಗಳು ನಮ್ಮ ನಾಗರೀಕತೆಗೆ ಮಾರಕವಾಗದ ರೀತಿಯಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಅನ್ವೇಷಣೆ ನಡೆಸಬೇಕೆಂದು ಕಿವಿಮಾತು ಹೇಳಿದರು.
ಈ ವಸ್ತುಪ್ರದರ್ಶನವು ಈ ವರೆಗೂ ಸಮಾಹದ ಮೇಲೆ ವಿಜ್ಞಾನ ಮಾಡಿರುವ ಅಡ್ಡ ಪರಿಣಾಮಗಳನ್ನು ಸರಿಪಡಿಸುವ ಪ್ರಯತ್ನದಂತಿದೆ. ವಿಜ್ಞಾನದಿಂದ ಆವಿಷ್ಕಾರವಾದ ಪ್ಲಾಸ್ಟಿಕ್ ಬಳಕೆ, ಸುಖಕರ ಪರಿಕರಗಳ ಬಳಕೆ, ರಾಸಾಯನಿಕ ವಸ್ತುಗಳ ಬಳಕೆಯಿಂದ ಮನುಕುಲದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಪ್ಲಾಸ್ಟಿಕ್‍ರಹಿತ ಚೀಲಗಳ ಬಳಕೆ, ಸಾವಯವ ಕೃಷಿಯಂತಹ ಪ್ರದರ್ಶನ ಗಮನ ಸೆಳೆಯುತ್ತಿವೆ. ವಿಜ್ಞಾನದಿಂದ ನಾವೇ ಹೆಣೆದುಕೊಂಡ ಬಲೆಗೆ ವಿಜ್ಞಾನದಿಂದಲೇ ಕತ್ತರಿ ಹಾಕುವ ಪ್ರಯತ್ನದಲ್ಲಿದ್ದೇವೆ. ಆದ್ದರಿಂದ ಮುಂಬರುವ ವಿಜ್ಞಾನಿಗಳು ಸಮಾಜಕ್ಕೆ ಪೂರಕವಾಗುವಂತಹ ಸಂಶೋಧನೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಸುಖ ಜೀವನಕ್ಕೆ ಅಗತ್ಯವಾದ ಎಲೆಕ್ಟ್ರಾನಿಕ್ ಪರಿಕರ, ವಾಹನ, ಮೊಬೈಲ್ ಇತ್ಯಾದಿಗಳ ಹೊಸ ಸಂಶೋಧನೆಗಳಿಗೆ ಮಾತ್ರ ವಿಜ್ಞಾನ ಸೀಮಿತವಾಗಬಾರದು. ಬದಲಾಗಿ ಸ್ವಯಂ ಚಿಂತನೆಗೆ ಒಳಪಡಿಸುವ, ಮಾನವ ಸಂಬಂಧಗಳನ್ನು ಉಳಿಸಿ ಗಟ್ಟಿಗೊಳಿಸುವಂತಹ ವೈಜ್ಞಾನಿಕ ಸಂಶೋಧನೆಗಳು ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಕೃಷಿ ಕ್ಷೇತ್ರದಲ್ಲೂ ಹಿಂದೆ ಸಾಕಷ್ಟು ವೈಜ್ಞಾನಿಕ ಸಂಶೋಧನೆ ನಡೆಸಿ, ದೇಶದ ಜನಸಂಖ್ಯೆ ಹೆಚ್ಚಿದಂತೆ ಆಹಾರ ಸಾಮಗ್ರಿಗಳನ್ನು ಪೂರೈಸಲು ರಾಸಾಯನಿಕ ಗೊಬ್ಬರ, ರಾಸಾಯನಿಕ ಔಷಧಿಗಳನ್ನು ಕಂಡು ಹಿಡಿದು ಬಳಸಲಾಗುತ್ತಿದೆ. ಈಗ ಅದರ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ನಾವು ಸಾವಯವ ಕೃಷಿಗೆ ಒತ್ತು ನೀಡುವ ಅನಿವಾರ್ಯತೆ ಇದೆ ಎಂದು ಹೇಳಿದರು.
ತಾವು ಕೃಷಿ ಸಚಿವನಾಗಿದ್ದ ಸಂದರ್ಭದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದೆ. ಹಿಂದೆಲ್ಲ ಕೆಂಪು ಜೋಳ, ಅಕ್ಕಿ ಇತ್ಯಾದಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಅದನ್ನು ತಿಂದರೆ ನಮಗೆ ಹೊಟ್ಟೆನೋವು ಬರುತ್ತಿತ್ತು. ಆದರೆ, ಅದಕ್ಕೆ ಒಗ್ಗಿಕೊಂಡಿದ್ದೇವೆ. ಈಗ ದೇಶದ ಜನಸಂಖ್ಯೆ 130 ಕೋಟಿಗೆ ತಲುಪಿದ್ದು, ರಾಸಾಯನಿಕ ಗೊಬ್ಬರದಿಂದ ಬೆಳೆದ ಬೆಳೆಯನ್ನು ರಫ್ತು ಮಾಡುವ ಹಂತಕ್ಕೆ ಬಂದಿದ್ದು, ಈ ರಾಸಾಯನಿಕಯುಕ್ತ ಆಹಾರ ವಿಷಪೂರಿತವಾಗಿದ್ದು ಆರೋಗ್ಯಕ್ಕೆ ಹಾನಿಯುಂಟುಮಾಡುತ್ತಿದೆ. ಆದ್ದರಿಂದ ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.
ಸಿದ್ದಗಂಗಾ ಶಾಲೆಯ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೋಜಾ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ನಮ್ಮ ಶಾಲೆಯಲ್ಲಿ ಪ್ರತಿವರ್ಷ ವ್ಯವಸ್ಥಿತವಾಗಿ ವಿಜ್ಞಾನದ ಹಬ್ಬ ನಡೆಯುತ್ತಿದೆ. ವಿಜ್ಞಾನ ಎಲ್ಲರ ಜೀವನದ ಹಾಸುಹೊಕ್ಕಾಗಿದ್ದು, ವಿಜ್ಞಾನವಿಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ನವೀನ ವೈಜ್ಞಾನಿಕ ಸಂಶೋಧನೆ ಕೈಗೊಳ್ಳಲು ನಾವು ಪ್ರೋತ್ಸಾಹಿಸಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಡಯಟ್ ಪ್ರಾಂಶುಪಾಲ ಲಿಂಗರಾಜು ಹೆಚ್.ಕೆ, ವಿದ್ಯಾರ್ಥಿಗಳು ಸ್ವಯಂ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಕರೂ ಸಹ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಂತಹ ಚಟುವಟಿಕೆಗಳನ್ನು ಕಷ್ಟಪಟ್ಟು ಮಾಡದೇ ಸರಾಗವಾಗಿ ಕಲಿಸಿಕೊಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳುವುದಕ್ಕೆ ಮುಂದಾಗಬೇಕು. ಹಾಗೂ ವಿಜ್ಞಾನ ಪ್ರಯೋಗಗಳನ್ನು ಪ್ರೋತ್ಸಾಹಿಸಬೇಕೆಂಬುದನ್ನು ವಿದ್ಯುತ್ ಬಲ್ಬ್ ಕಂಡುಹಿಡಿದ ಥಾಮಸ್ ಆಳ್ವಾ ಎಡಿಸನ್ ಹಲವಾರು ವಿಫಲ ಪ್ರಯತ್ನಗಳ ನಂತರ ಬಲ್ಪ್ ಕಂಡುಹಿಡಿದು ಅದನ್ನು ಹೊತ್ತಿಸಲು ತನ್ನ ಸಹಾಯಕನಿಗೆ ಪ್ರೋತ್ಸಾಹಿಸಿದ ಉಲ್ಲೇಖದೊಂದಿಗೆ ವಿವರಿಸಿದರು.
ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ ಅಭಿವೃದ್ದಿಗೆ ಪೂರಕವಾಗಿದ್ದು, ದೇಶದ ಜನಸಂಖ್ಯೆಯ ಶೇ.50 ರಷ್ಟು 26 ವರ್ಷದೊಳಗಿನ ಯುವಕರಿಂದ ಕೂಡಿದ್ದು ಭಾರತ ಯುವ ರಾಷ್ಟ್ರ ಎಂಬ ಘೋಷಣೆಗೆ ದೂರವಿಲ್ಲ ಎಂದ ಅವರು ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳೊಂದಿಗೆ ಕರ್ತವ್ಯಗಳನ್ನೂ ನೀಡಿದ್ದು ಅದನ್ನು ನಾವು ಮಾಡಬೇಕಿದೆ. ರಾಷ್ಟ್ರ ಧ್ವಜ, ಗೀತೆ ಒಟ್ಟಾರೆ ರಾಷ್ಟ್ರೀಯತೆಗೆ ಗೌರವ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಸಿದ್ದಗಂಗಾ ಶಾಲೆಯ ಶಿಕ್ಷಕರಾದ ಜಯಂತ್, ಇತರೆ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
