ವಾಷಿಂಗ್ ಟನ್:
ಕೊರೋನಾದ ನಾನಾ ಅವತಾರಗಳಿಂದ ತತ್ತರಿಸಿ ಹೋಗಿರುವ ಅಮೆರಿಕಾದಲ್ಲಿ ಅದರ ತಡೆಗೆ ಅಮೇರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಸಲಹೆ ಕೇಳಿದ ವೈದ್ಯರು, ವಿಜ್ಞಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. ಈ ಮಹಾಮಾರಿಗೆ ಮದ್ದೇನು? ಎಂದು ತಲೆಕೆಡಿಸಿಕೊಂಡು ವೈದ್ಯಕೀಯ ಸಮೂಹ ಕುಳಿತಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ.
ಈ ಸಲಹೆಯನ್ನು ಕೇಳಿದ ವೈದ್ಯಕೀಯ ಪ್ರಪಂಚ ಬೆಚ್ಚಿಬಿದ್ದಿದೆ. ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ವಾತಾವರಣದಲ್ಲಿರುವ ಕೊರೋನಾ ವೈರಸ್ ನ್ನು ತೊಲಗಿಸಲು ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ಸಿಂಪಡಿಸಲಾಗುತ್ತದೆ. ಹಾಗೆಯೇ ರೋಗಿಗಳಿಗೂ ಇದನ್ನು ಚುಚ್ಚು ಮದ್ದು ಮೂಲಕ ನೀಡುವುದರಿಂದ ಅವರಲ್ಲಿರುವ ಕೊರೋನಾ ವೈರಸ್ ನ್ನು ತೊಲಗಿಸಬಹುದಾಗಿದೆ, ಶ್ವಾಸಕೋಶ ಇದರಿಂದ ಸ್ವಚ್ಛವಾಗಲಿದೆ ಇದನ್ನು ವೈದ್ಯರು, ವಿಜ್ಞಾನಿಗಳು ಬಹುಶಃ ಪರಿಗಣಿಸಬಹುದೇನೋ ಎಂದು ಹೇಳಿದ್ದರು.
ಆದರೆ ಈ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅಧ್ಯಕ್ಷರ ಕಚೇರಿಯಿಂದ ಸ್ಪಷ್ಟನೆ ಬಂದಿದ್ದು, ಟ್ರಂಪ್ ಈ ಸಲಹೆಯನ್ನು ವ್ಯಂಗ್ಯಧಾಟಿಯಲ್ಲಿ ಹೇಳಿದ್ದಾರಷ್ಟೇ ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಹೇಳಿದೆ.
