ಕೋವಿಡ್ ಸೋಂಕು : ಫಿವರ್ ಕ್ಲಿನಿಕ್‍ಗಳಲ್ಲಿ ಆರೋಗ್ಯ ತಪಾಸಣೆಗೆ ವೈದ್ಯರ ಸಲಹೆ

ತುಮಕೂರು

     ಜಿಲ್ಲೆಯಲ್ಲಿ ಸಾಮಾನ್ಯ ಕಾಯಿಲೆಗಳು ಗೌಣವಾಗಿವೆಯೇನೋ ಎನ್ನವಷ್ಟರ ಮಟ್ಟಿಗೆ ಕೊರೊನ ಸೋಂಕು ಹೆಚ್ಚುತಾ ಸಮುದಾಯದಲ್ಲಿ ಭೀತಿ ಉಂಟುಮಾಡಿದೆ. ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನೆದಿನೆ ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಫೀವರ್ ಕ್ಲಿನಿಕ್‍ಗಳನ್ನು ತೆರೆದು ಸಾರ್ವಜನಿಕರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡುತ್ತಿದೆ.

     ಜ್ವರ ಸಂಬಂಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಯನ್ನು ಫಿವರ್ ಕ್ಲಿನಿಕ್‍ಗಳಲ್ಲಿ ಮಾಡಲಾಗುತ್ತದೆ. ಕೊರೊನಾ ಸೋಂಕಿನ ಭೀತಿಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಇಂತಹ ರೋಗಿಗಳ ತಪಾಸಣೆಗೆ ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಖಾಸಗಿ ಕ್ಲಿನಿಕ್‍ಗಳಲ್ಲಿ ಜ್ವರ, ಕೆಮ್ಮು, ನೆಗಡಿ, ಶೀತಾದಂತಹ ಕೋವಿಡ್ ಲಕ್ಷಣದ ಕಾಯಿಲೆಗಳಿದ್ದವರನ್ನು ಸಮೀಪಕ್ಕೆ ಬಿಟ್ಟುಕೊಳ್ಳುವುದಿಲ್ಲ, ಸರ್ಕಾರದ ಫೀವರ್ ಕ್ಲಿನಿಕ್‍ಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಹೇಳುವಂತಹ ಪರಿಸ್ಥಿತಿ ಇದೆ. ಈಗ ಯಾರಲ್ಲಿ ಕೊರೊನಾ ಸೋಂಕು ಇದೆಯೋ ಹೇಳಲಾಗದು, ಖಾಸಗಿ ಆಸ್ಪತೆಗಳಲ್ಲಿ ಸೋಂಕಿನ ಸುರಕ್ಷತಾ ವ್ಯವಸ್ಥೆಗಳಿರುವುದಿಲ್ಲ, ಹೀಗಾಗಿ ಇಂತಹ ರೋಗಿಗಳ ತಪಾಸಣೆಗೆ ಆ ವೈದ್ಯರು ಹಿಂಜರಿಯುವಂತಾಗಿದೆ.

     ಈ ಮೊದಲು ನೀಡುತ್ತಿದ್ದಂತೆ ಮೆಡಿಕಲ್ ಸ್ಟೋರ್‍ನವರು ಜ್ವರ, ಕೆಮ್ಮು, ನೆಗಡಿ, ಗಂಟಲು ಸಮಸ್ಯೆಗೆ ಮಾತ್ರೆ ಕೊಡುವುದಿಲ್ಲ. ಕೊಡಲು ಅವರಿಗೆ ಅನುಮತಿಯೂ ಇಲ್ಲ, ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಅವರು ಇಂತಹ ಕಾಯಿಲೆಗಳಿಗೆ ಔಷಧಿ ಮಾತ್ರೆ ಕೊಡುವಂತಿಲ್ಲ. ಹಾಗಂತ ಫೀವರ್ ಕ್ಲಿನಿಕ್‍ಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲೂ ಜನ ಹೆದರುತ್ತಾರೆ. ತಪಾಸಣೆಗೆಂದು ಕೊರೊನಾ ಸೋಂಕಿತರೂ ಆಸ್ಪತ್ರೆಗಳಿಗೆ ಬಂದುಹೋಗಿರಬಹುದು, ಅಲ್ಲಿಂದ ತಮಗೂ ಹರಡಬಹುದು ಎಂಬ ಆತಂಕ ಜನರಲ್ಲಿ ಇದೆ. ಈ ಪರಿಸ್ಥಿತಿಯಲ್ಲಿ ಮನೆ ಮದ್ದು ಬಳಿಸಿ ಕಾಯಿಲೆ ಗುಣ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕಯಿಲೆ ವಾಸಿಯಾಗುತ್ತಿಲ್ಲ ಎನ್ನುವುದು ಅರಿವಿಗೆ ಬಂದಾಗ ಅನಿವಾರ್ಯವಾಗಿ ಫೀವರ್ ಕ್ಲಿನಿಕ್‍ಗೆ ಹೋಗಲೇಬೇಕಾದ ಪರಿಸ್ಥಿತಿ ಬರುತ್ತದೆ.

     ಫಿವರ್ ಕ್ಲಿನಿಕ್‍ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಭಯಪಡುವ ಅಗತ್ಯವಿಲ್ಲ, ಅಲ್ಲಿನ ವೈದ್ಯರು ತಪಸಣೆ ಮಾಡಿ ಸೂಕ್ತ ಸಲಹೆ ನೀಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಬಿ.ನಾಗೇಂದ್ರಪ್ಪ ಹೇಳುತ್ತಾರೆ.
ಈಗ ಜಿಲ್ಲೆಯಲ್ಲಿ 17 ಫಿವರ್ ಕ್ಲಿಕ್‍ಗಳು, ಎರಡು ಮೊಬೈಲ್ ಫಿವರ್ ಕ್ಲಿನಿಕ್‍ಗಳು ಸೇವೆಯಲ್ಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಫೀವರ್ ಕ್ಲಿನಿಕ್ ಆರಂಭಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ಜಿಲ್ಲೆಯ 144 ಪಿಹೆಚ್‍ಸಿಗಳ ಪೈಕಿ ಶೇಕಡ 50ರಷ್ಟು ಕಡೆ ಫಿವರ್ ಕ್ಲಿನಿಕ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಡಾ. ಎಂ.ಬಿ.ನಾಗೇಂದ್ರಪ್ಪ ಹೇಳಿದರು.

    ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒಂದೊಂದು ಉಳಿದಂತೆ ತುಮಕೂರು ನಗರದಲ್ಲಿ ಸೇರಿ 17 ಫೀವರ್ ಕ್ಲಿನಿಕ್‍ಗಳು ಈಗ ಸೇವೆಯಲ್ಲಿವೆ. ಜೊತೆಗೆ, ತುರ್ತು ಸಂದರ್ಭಕ್ಕಾಗಿ ತುಮಕೂರು ಹಾಗೂ ಮಧುಗಿರಿಯಲ್ಲಿ ಒಂದೊಂದು ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕ್ಲಿನಿಕ್‍ನಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ ಇರುತ್ತಾರೆ. ತಪಾಸಣೆಗೆ ಬರುವವರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಈ ವೇಳೆ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಶೀತಾ ಮುಂತಾದ ಲಕ್ಷಣಗಳು ಕಂಡುಬಂದರೆ ಗಂಟಲು ಮತ್ತು ಮೂಗಿನ ದ್ರವ ತೆಗೆದು ತಪಾಸಣೆಗೆ ಕಳುಹಿಸಲಾಗುತ್ತದೆ. ಇದಾವುದೇ ಲಕ್ಷಣಗಳಿಲ್ಲದೆ ಸಾಮಾನ್ಯ ಕಾಯಿಲೆಗಳಿದ್ದರೆ ಸೂಕ್ತ ಚಿಕಿತ್ಸೆ ನೀಡುತ್ತಾರೆ ಎಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಆರ್.ವಿ.ಮೋಹನ್‍ದಾಸ್ ಹೇಳಿದರು.

    ಕೊರೊನಾ ಸೋಂಕಿನ ಭಯ ಜನರಲ್ಲಿದೆ. ಆದರೂ ತಪಾಸಣೆ ಅಗತ್ಯವಿರುವ ಕಾರಣ ಆರೋಗ್ಯ ಸಮಸ್ಯೆ ಇರುವವರು ಫೀವರ್ ಕ್ಲಿನಿಕ್‍ಗಳಿಗೆ ಬರುತ್ತಿದ್ದಾರೆ. ರೋಗ ತಪಾಸಣೆ, ಚಿಕಿತ್ಸಾ ಸೇವೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕಿನ ಲಕ್ಷಣ ಇರುವವರ ಸ್ವಾಬ್ ಸಂಗ್ರಹ ಮಾಡಲಾಗುತ್ತದೆ. ಪ್ರತಿ ದಿನ ಜಿಲ್ಲೆಯಲ್ಲಿ ಸರಾಸರಿ 500ರಿಂದ 600 ಜನರ ಸ್ವಾಬ್ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಸಂಗ್ರಹಿಸಿದ ಸ್ವಾಬ್ ಪರೀಕ್ಷೆಗೊಳಪಡಿಸಿ, ಪಾಸಿಟೀವ್ ವರದಿ ಬಂದರೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುವುದು, ಅವರ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೆಗೆಟೀವ್ ವರದಿ ಬಂದರೆ ಇದಾವುದರ ಅಗತ್ಯವಿಲ್ಲ. ಸಾರ್ವಜನಿಕರು ಫೀವರ್ ಆಸ್ಪತ್ರೆಗಳ ಬಗ್ಗೆ ಅನಗತ್ಯ ಭಯ ಪಡದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ವೈದ್ಯರು ಹೇಳುತ್ತಾರೆ.

     ಜ್ವರ ಸಂಬಂಧಿ ಕಾಯಿಲೆ ಕಾಣಿಸಿದರೆ ವಿಳಂಬ ಮಾಡದೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಗಂಟಲು, ಮೂಗಿನ ದ್ರವ ಸಂಗ್ರಹಿಸಲು ಅವಕಾಶ ಮಾಡಿಕೊಡಿ, ಅದರ ಪರೀಕ್ಷೆಯ ವರದಿ ಆಧರಿಸಿ, ಮುಂದಿನ ಕ್ರಮಗಳನ್ನು ಅನುಸರಿಸಿ. ವಿಳಂಬ ಮಾಡಿದರೆ ಸಮಸ್ಯೆ ಹೆಚ್ಚಾಗಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಇಂತಹ ಕ್ರಮ ಅನುಸರಿಸುವುದು ಅನಿವಾರ್ಯ ಹಾಗೂ ಸೋಂಕು ತಡೆಗೆ ಮಾಸ್ಕ್ ಧರಿಸಿವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಅಥವಾ ಸೋಪು ಬಳಿಸಿ ನೀರಿನಲ್ಲಿ ಆಗಾಗ ಕೈ ತೊಳೆದುಕೊಳ್ಳುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link