ವಿಶೇಷ ವರದಿ : ವಿನಾಯಕ ಪೂಜಾರ್.
ದಾವಣಗೆರೆ:
ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಬಿ ಫಾರಂ ಪಡೆದು, ಲೋಕಸಭಾ ಕಣಕ್ಕೆ ಇಳಿದ ಹೆಚ್.ಬಿ.ಮಂಜಪ್ಪನವರನ್ನು, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ 1,69,702 ಮತಗಳ ಅಂತರದಿಂದ ಸೋಲಿಸಿದ್ದು, ಈ ಚುನಾವಣೆಯಲ್ಲಿ ಮಂಜಪ್ಪ ಹರಕೆಯ ಕುರಿಯಾದರೇ? ಎಂಬ ಚರ್ಚೆ ಜಿಲ್ಲಾದ್ಯಂತ ನಡೆಯುತ್ತಿದೆ.
ಹೌದು… ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಅಂದರೆ, 2004, 2009 ಹಾಗೂ 2014ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಅವರು ನಿರಂತರ ಸ್ಪರ್ಧಿಸಿ, ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಪರಾಭವಗೊಳ್ಳುತ್ತಾ ಬಂದಿರುವುದಲ್ಲದೇ, 2018ರ ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು ಅನುಭವಿಸಿದ ಕಾರಣಕ್ಕೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಲೋಕಸಭೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ವಯಸ್ಸಿನ ಕಾರಣ ನೀಡಿ ಶಾಮನೂರು ಸಹ ಟಿಕೆಟ್ ನಿರಾಕರಿಸಿದ್ದರು.
ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ದಿನಕ್ಕೊಬ್ಬರ ಹೆಸರು ಮುನ್ನೆಲೆಗೆ ಬಂದ ಕಾರಣ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟಿತ್ತು. ಇನ್ನೇನು ನಾಮಪತ್ರ ಸಲ್ಲಿಕೆಗೆ ಮೂರ್ನಾಲ್ಕು ದಿನ ಬಾಕಿ ಇರುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರೈತ ಮುಖಂಡ ತೇಜಸ್ವಿ ಪಟೇಲ್ ಅವರನ್ನು ಬೆಂಗಳೂರಿಗೆ ಕರೆಸಿ, ಮಾಹಿತಿ ಪಡೆದು ನಾಮಪತ್ರ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳನ್ನು ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು.
ಇತ್ತ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರಿಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದರು. ಈ ಎಲ್ಲ ಕಾರಣಗಳಿಂದ ಟಿಕೆಟ್ ವಿಳಂಬವಾಗಿ, ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಇರುವಾಗ, ಮಂಜಪ್ಪನವರಿಗೆ ಬಿ ಫಾರಂ ನೀಡಲಾಯಿತು.
ಅಂದಿನಿಂದ ಕೇವಲ 17 ದಿನಗಳು ಮಾತ್ರ ಚುನಾವಣೆಗೆ ಬಾಕಿ ಇದ್ದವು. ಈ ಅಲ್ಪ ಅವಧಿಯಲ್ಲಿಯೇ ಮಂಜಪ್ಪ ಹಾಗೂ ಮೈತ್ರಿ ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆ ಪ್ರಚಾರ ಆರಂಭಿಸಿದರೂ, ಎಲ್ಲ ಹಳ್ಳಿ, ನಗರ ಪ್ರದೇಶದ ಜನರನ್ನು ತಲುಪಲಾಗಲಿಲ್ಲ. ಹೀಗಾಗಿಯೇ ಎದುರಾಳಿ ಪಕ್ಷದ ಜಿ.ಎಂ.ಸಿದ್ದೇಶ್ವರ್ ಅವರ ಮತ ಬ್ಯಾಂಕ್‍ಗೆ ಕೈ ಹಾಕಲು ಸಾಧ್ಯವಾಗಲಿಲ್ಲ.
ಇನ್ನೂ ಮಂಜಪ್ಪ ಹಿಂದುಳಿದ ಸಮುದಾಯದ ಕುರುಬ ಜನಾಂಗಕ್ಕೆ ಸೇರಿರುವ ಕಾರಣ, ಕಾಂಗ್ರೆಸ್ ಪಡೆ ಅಲ್ಪಸಂಖ್ಯಾತರ, ಹಿಂದುಳಿದವರು ಹಾಗೂ ದಲಿತರ (ಅಹಿಂದ) ವರ್ಗದ ಮತಗಳು ಮೈತ್ರಿ ಅಭ್ಯರ್ಥಿ ಮಂಜಪ್ಪನವರ ಕೈ ಹಿಡಿಯಲಿವೆ ಎಂಬ ಹುಮ್ಮಸ್ಸಿನಲ್ಲಿದ್ದರು.
ಆದರೆ, ಈ ಚುನಾವಣೆಯಲ್ಲಿ ಅಹಿಂದ ವರ್ಗಗವು ಕಾಂಗ್ರೆಸ್‍ಗೆ ಕಯ ಕೊಟ್ಟಿದೆ. ಇದಕ್ಕೆ, ಅತೀ ಹೆಚ್ಚು ಮುಸ್ಲಿಂ, ಹಿಂದುಳಿದ ಹಾಗೂ ದಲಿತ ಮತದಾರರೇ ಇರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಲೀಡ್ ಪಡೆದಿರುವುದೇ ಉತ್ತಮ ಉದಾಹರಣೆಯಾಗಿದೆ.
ಒಟ್ಟಿನಲ್ಲಿ ಕಡಿಮೆ ಕಾಲಾವಕಾಶ ದೊರೆತ, ಅಹಿಂದ ಸಮುದಾಯ ಹಾಗೂ ಕೆಲವೆಡೆ ಮೈತ್ರಿ ಭಾಗವಾಗಿರುವ ಜೆಡಿಎಸ್ ಮುಖಂಡರು ಕೈ ಕೊಟ್ಟಿರುವ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಪರಾಜಿತರಾಗಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಮಂಜಪ್ಪ ಹರಕೆಯ ಕುರಿಯಾದರೇ? ಎಂಬ ಚರ್ಚೆ ಜಿಲ್ಲಾದ್ಯಂತ ನಡೆಯುತ್ತಿದೆ.