ಕ್ರೀಡಾಂಗಣದ ಏರಿ ಮಣ್ಣನ್ನೇ ಮಾರಿಕೊಂಡ್ರಾ ಗುತ್ತಿಗೆದಾರರು..?

ತುಮಕೂರು

ವಿಶೇಷ ವರದಿ :ರಾಕೇಶ್.ವಿ.

    ನಗರದ ಮಹಾತ್ಮಗಾಂಧೀ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆಯಷ್ಟೇ, ಆದರೆ ಅಲ್ಲಿನ ಮರುಬಳಕೆ ಮಾಡಬಹುದಾದ ಮಣ್ಣನ್ನು ಎರಡೇ ದಿನಗಳಲ್ಲಿ ರವಾನೆ ಮಾಡಲಾಯಿತು. ಅದು ಎಲ್ಲಿಗೆ ರವಾನಿಸಿದರು. ಯಾರಿಗೆ ನೀಡಿದರು. ಅಥವಾ ಅದನ್ನು ಮಾರಿಕೊಂಡಿದ್ದಾರಾ ಎಂಬುದು ಇದೀಗ ಸಾರ್ವಜನಿಕರಲ್ಲಿ ಎದುರಾಗಿರುವ ಪ್ರಶ್ನೆಯಾಗಿದೆ.

    ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯು ಕಳೆದ ಸೆಪ್ಟೆಂಬರ್ 9ರಂದು ಆರಂಭವಾಯಿತು. ಕಾಮಗಾರಿ ಮಾಡುವ ಮುನ್ನ ಅಲ್ಲಿನ ಏರಿಯನ್ನು ನೆಲಸಮ ಮಾಡಬೇಕಾಯಿತು. ಏರಿಯನ್ನು ನೆಲ ಸಮ ಮಾಡುವಾಗ ಅಲ್ಲಿದ್ದ ಬಂಡೆಗಲ್ಲುಗಳನ್ನು ಕ್ರೀಡಾಂಗಣದ ಮಧ್ಯದಲ್ಲಿ ಜೋಡಿಸಿಡಲಾಯಿತು. ಆದರೆ ಅಲ್ಲಿನ ಮಣ್ಣನ್ನು ಮಾತ್ರ ಕೇವಲ ಒಂದೆರಡು ದಿನಗಳಲ್ಲಿ ಖಾಲಿ ಮಾಡಲಾಯಿತು. ಈ ಮಣ್ಣು ಎಲ್ಲಿಗೆ ಹೋಯಿತು..? ಎತ್ತುವಳಿ ಮಾಡಿದವರು ಯಾರು..? ಗುತ್ತಿಗೆದಾರರು ಈ ಮಣ್ಣನ್ನೇ ಮಾರಿಕೊಂಡು ಬಿಟ್ಟರಾ ..? ಒಂದು ವೇಳೆ ಮಾರಿಕೊಂಡಿದ್ದೇ ಆದರೆ ಅದಕ್ಕೆ ಅನುಮತಿ ಇತ್ತೇ ಇಂತಹ ಹಲವು ಹತ್ತು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

    ಕ್ರೀಡಾಂಗಣದ ಅಭಿವೃದ್ಧಿ ಮಾಡುವಾಗ, ಅಲ್ಲಿನ ಮಣ್ಣನ್ನು ರವಾನಿಸಲು ಗುತ್ತಿಗೆದಾರರಿಗೆ ಹಣ ನೀಡಬೇಕು. ಮತ್ತೆ ಕಾಮಗಾರಿ ಮಾಡುವಾಗ ಅವಶ್ಯಕ ಬೀಳುವ ಮಣ್ಣನ್ನು ತರಿಸಲು ಹಣ ಖರ್ಚು ಮಾಡಬೇಕು. ಆಗಲೂ ಮಣ್ಣನ್ನು ರವಾನಿಸಲು ಹಣ ವ್ಯವ ಮಾಡಬೇಕು. ಹೀಗಿದ್ದಾಗ ಆ ಮಣ್ಣನ್ನು ಕ್ರ್ರೀಡಾಂಗಣದಲ್ಲಿಯೇ ಹಾಕಿಕೊಂಡರೆ ಮರುಬಳಕೆ ಯಾಗುವುದಿಲ್ಲವೇ..? ಅದನ್ನು ಗುತ್ತಿಗೆದಾರನಾಗಲಿ ಅಥವಾ ಕ್ರೀಡಾ ಇಲಾಖೆಯ ಮುಖ್ಯಸ್ಥರಾಗಲಿ, ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳಾಗಲಿ ಅದರ ಬಗ್ಗೆ ಕಿಂಚಿತ್ತೂ ಗಮನ ಹರಿಸುವುದಿಲ್ಲವೇಕೆ..? ಇದೇ ಮಣ್ಣನ್ನು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದಿತ್ತೇ..? ಈ ಪ್ರಶ್ನೆಗಳಿಗೆ ಉತ್ತರ ದೊರಕುತ್ತಿಲ್ಲ. ಹೀಗಾಗಿ ಕ್ರೀಡಾಂಗಣದ ಏರಿಯಲ್ಲಿದ್ದ ಮಣ್ಣನ್ನು ಮಾರಿಕೊಂಡಿದ್ದಾರೆಂದೇ ವ್ಯಾಪಕ ಟೀಕೆಗಳು ವ್ಯಕ್ತ ವಾಗುತ್ತಿವೆ.

     ಸರ್ಕಾರದ ಆಸ್ತಿಯನ್ನು ಅಭಿವೃದ್ಧಿ ಮಾಡುವಾಗ ಅಲ್ಲಿನ ಯಾವುದೇ ವಸ್ತುವನ್ನು ಮಾರಬೇಕಾದರೆ ಅದನ್ನು ಸರ್ಕಾರದ ನಿಯಾಮವಳಿಗಳ ಪ್ರಕಾರ ಬಹಿರಂಗ ಹರಾಜು ಮಾಡಬೇಕು. ಹರಾಜಿನ ಮೂಲಕವೇ ಆ ವಸ್ತುಗಳ ಮಾರಾಟ ಮಾಡಬೇಕು. ಆ ಹಣವನ್ನು ಸಂಬಂಧಪಟ್ಟ ಇಲಾಖೆ ಮೂಲಕ ಸರ್ಕಾರಕ್ಕೆ ಒಪ್ಪಿಸಬೇಕು. ಆದರೆ ಇಲ್ಲಿ ಯಾರ ಗಮನಕ್ಕೆ ತಂದು ಮಣ್ಣನ್ನು ಇತರರಿಗೆ ಮಾರಿಕೊಳ್ಳಲಾಗಿದೆ ಎಂಬುದು ತಿಳಿಯುತ್ತಿಲ್ಲ.

     ಕ್ರೀಡಾಂಗಣದ ಏರಿಯ ಮೇಲಿನ ಮಣ್ಣನ್ನು ಪುಟ್ಟಸ್ವಾಮಯ್ಯನಪಾಳ್ಯದಲ್ಲಿ ಎರಡು ಕಡೆಗಳಲ್ಲಿ, ಸತ್ಯಮಂಗಲದ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ, ಎಂಎಸ್ ರಾಮಯ್ಯ ಲೇಔಟ್ ಒಳಭಾಗದಲ್ಲಿ, ಲೇಔಟ್‍ನ ಹಿಂಬದಿಯಲ್ಲಿ, ಇಟ್ಟಿಗೆ ಬಟ್ಟಿಗಳಲ್ಲಿ, ನವನಹಳ್ಳಿ ಕ್ರಾಸ್, ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಖಾಸಗಿ ಸೈಟ್‍ನ ಪಕ್ಕದಲ್ಲಿ ಮಣ್ಣಿನ ರಾಶಿಗಳನ್ನು ನೋಡಬಹುದಾಗಿದೆ. ಈ ಮಣ್ಣನ್ನು ಕಡಿಮೆ ಹಣಕ್ಕೆ ಕೊಂಡುಕೊಂಡು ಅದನ್ನು ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಾರೆ ಎಂಬ ಗುಮಾನಿ ಕೇಳಿ ಬರುತ್ತಿದೆ.

     ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಮಣ್ಣನ್ನು ಮಾರಿಕೊಂಡರಾ..? ಎಂಬುದು ಬಹುದೊಡ್ಡ ಪ್ರಶ್ನೆಯಾದರೆ, ಕಾಮಗಾರಿಗೆ ಮಣ್ಣು ಬೇಕಾದಾಗ ಮತ್ತೆ ಎಲ್ಲಿಂದ ಕೊಂಡುಕೊಳ್ಳುತ್ತಾರೆ. ಅದಕ್ಕೆ ಎಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈಗಾಗಲೇ ಕೋಟ್ಯಂತರ ರೂಗಳನ್ನು ವೆಚ್ಚ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಎಷ್ಟು ಹಣ ಪೋಲಾಗುತ್ತಿದೆ. ಸಾರ್ವಜನಿಕರ ಹಣ ಎಷ್ಟು ವ್ಯರ್ಥವಾಗುತ್ತಿದೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಅಧಿಕಾರಿಯೂ ಯಾಕೆ ಇದರ ಬಗ್ಗೆ ಗಮನ ಹರಿಸಿಲ್ಲ. ಒಂದು ವೇಳೆ ಗೊತ್ತಿದ್ದರೂ ಗೊತ್ತಿಲ್ಲದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಯೇ…? ಎಂಬುದು ತಿಳಿಯದಾಗಿದೆ.

     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೇ ಈ ಕಾಮಗಾರಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ಸ್ಮಾರ್ಟ್ ಸಿಟಿ ಕಂಪನಿಯು ಕೇವಲ ಅನುದಾನ ಮಾತ್ರ ಒದಗಿಸುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪತ್ರಿಕಾ ಪ್ರಕಟಣೆಯ ಮಾಹಿತಿ ಪ್ರಕಾರ ನೋಡುವುದಾದರೆ, ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ 9 ಕೋಟಿ 33 ಲಕ್ಷ ವೆಚ್ಚವನ್ನು ತೋರಿಸಲಾಗಿದೆ. ಇದರಲ್ಲಿ ನೆಲಸಮ ಮಾಡುವುದು ಕೂಡ ಸೇರಿದೆ. ಆದರೆ ನೆಲಸಮ ಮಾಡಿದ ನಂತರ ಬರುವ ಮಣ್ಣನ್ನು ಏನು ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡಬೇಕಿದೆ.

     ಇದಲ್ಲದೆ, ಏರಿ ಮೇಲೆ ಕೂರಲು ಅಳವಡಿಸಲಾಗಿದ್ದ ಬಂಡೆಗಳು ಕೂಡ ಈಗ ಮರುಬಳಕೆ ಮಾಡಲು ಆಗುವುದಿಲ್ಲ ಎಂಬ ಮಾಹಿತಿ ಇದೆ. ಹಾಗಾದರೆ ಈ ಬಂಡೆಗಳನ್ನು ಏನು ಮಾಡುತ್ತಾರೆ. ಇವುಗಳನ್ನು ಕೂಡ ಮಾರಿಕೊಳ್ಳುತ್ತಾರೆಯೇ..? ಈ ಬಂಡೆಗಳನ್ನು ಮಾರಿಕೊಂಡರೆ ಬರುವ ಹಣವನ್ನು ಗುತ್ತಿಗೆದಾರರು ಪಡೆಯುತ್ತಾರಾ ಅಥವಾ ಸರ್ಕಾರಕ್ಕೆ ನೀಡುತ್ತಾರಾ.. ಎಂಬ ಹಲವು ಪ್ರಶ್ನೆಗಳು ಗೊಂದಲಕಾರಿಯಾಗಿಯೇ ಉಳಿದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link