ನಾಯಿಗಳಿಗೂ ಬರ್ತಿದೆ ಕ್ಯಾಬ್

ಬೆಂಗಳೂರು:

     ಏನ್ ಸ್ವಾಮಿ ಇದು. ಮನುಷ್ಯರಿಗೇ ಓಡಾಡಲು ಕ್ಯಾಬ್ ಸಿಗುತ್ತಿಲ್ಲ. ಅಂತಹದ್ದರಲ್ಲಿ ನಾಯಿಗಳಿಗೆ ಕ್ಯಾಬ್ ತರ್ತೀರಿ ಅಂತಿರಲ್ಲಾ?

       ಹೀಗೆ ನೀವು ಮೂಗು ಮುರಿಯುವ ಕಾಲ ಹೋಯ್ತು. ನಿಮ್ಮ ನೆಚ್ಚಿನ ಶ್ವಾನವನ್ನು ಕ್ಯಾಬ್‍ನಲ್ಲಿ ಎಲ್ಲಿಗೆ ಬೇಕಾದರೂ ಹೊಸ ಸಂಚಾರಕ್ಕೆ ಕರೆದೊಯ್ಯಬಹುದು. ಹೌದು, ಶ್ವಾನಗಳಿಗೆಂದೇ ಕ್ಯಾಬ್ ಸೇವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಆರಂಭವಾಗಲಿದೆ. ಡಾಗ್ ಗುರು ಅಮೃತ್ ದೇಶದ ಏಕೈಕ ಶ್ವಾನ ರಕ್ಷಕ, ತರಬೇತಿ ಮತ್ತು ಅಧ್ಯಯನ ಸಂಸ್ಥೆಯಾಗಿದೆ. ಇದೀಗ ಈ ಸಂಸ್ಥೆ ದೇಶದಲ್ಲೇ ವಿನೂತನವಾದ ಮತ್ತು ಮೊದಲ ಪಾ ಕ್ಯಾಬ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ.

      ಅಮೃತ್ ಶ್ರೀಧರ್ ಹಿರಣ್ಯ ಅವರು ಕಳೆದ ಎರಡು ದಶಕಗಳಿಂದ ಸಾಕು ಪ್ರಾಣಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಅವರು ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಿರುವ ಅಮೃತ್ ಡಾಗೂರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಪರಿಪೂರ್ಣವಾದ ಡಾಗ್ ಟ್ರೇನಿಂಗ್ ಅಂಡ್ ಬೋರ್ಡಿಂಗ್ ನೀಡುವುದಷ್ಟೇ ಅಲ್ಲ, ಸ್ನಿಫರ್ ಡಾಗ್ಸ್ ಅನ್ನು ಐಟಿ ಗಳಿಗೆ ನೀಡುತ್ತಿದೆ. ಅವರ ಈ ಸುದೀರ್ಘ ಅವಧಿಯ ಸೇವೆಯನ್ನು ಗಮನಿಸಿದ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆ ಇವರನ್ನು ಕರ್ನಾಟಕ ಪೊಲೀಸ್ ಶ್ವಾನದಳ ಮತ್ತು ರೈಲ್ವೆ ಭದ್ರತಾ ಪಡೆಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿವೆ.

      ಇದೀಗ ಅಮೃತ್ ಶ್ರೀಧರ್ ಅವರು ವಿನೂತನವಾದ ಸಾಹಸಕ್ಕೆ ಕೈ ಹಾಕಿದ್ದಾರೆ. ಬೆಂಗಳೂರಿನಲ್ಲಿ ಶ್ವಾನ ಮಾಲೀಕರು ತಮ್ಮ ಪ್ರೀತಿಯ ಶ್ವಾನಗಳನ್ನು ಆಸ್ಪತ್ರೆ, ಕ್ಲಿನಿಕ್‍ಗೆ ಅಥವಾ ಹೊರಗೆ ಕರೆದೊಯ್ಯುವಾಗ ಹಲವಾರು ಅಡ್ಡಿ ಆತಂಕಗಳನ್ನು ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ, ಗಾಯಗೊಂಡ ಬೀದಿ ನಾಯಿಗಳಿಗೆ ಅಥವಾ ಬೀದಿಬದಿಯಲ್ಲಿ ಸಾವನ್ನಪ್ಪುವ ನಾಯಿಗಳನ್ನು ಸ್ಥಳಾಂತರ ಮಾಡುವುದು ತೊಡಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಮೃತ್ ಅವರ ತಲೆಗೆ ಹೊಳೆದದ್ದು, ಶ್ವಾನಗಳಿಗೆ ಒಂದು ಪ್ರತ್ಯೇಕ ಕ್ಯಾಬ್ ವ್ಯವಸ್ಥೆ ಮಾಡಿದರೆ ಹೇಗೆಂಬುದು.

      ಈ ಕಲ್ಪನೆ ಮೂಡಿದ್ದೇ ತಡ ಅಮೃತ್ ಅವರು ಕ್ಯಾಬ್ ಆರಂಭಿಸುವ ಕುರಿತು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ತಮ್ಮ ಅಮೃತ್ ಡಾಗ್ ಗುರು ಅಡಿಯಲ್ಲಿ ಹೊಸದೊಂದು ಪಾ ಕ್ಲಬ್ ಅನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಈ ಕ್ಲಬ್ ಸಾಕುಪ್ರಾಣಿಗಳನ್ನು ಸಾಗಿಸುವ ಕ್ಯಾಬ್ ಸೇವಾ ಕಾರ್ಯಾಚರಣೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ.

      ಈ ಕ್ಯಾಬ್ ಸೇವೆಯಲ್ಲಿ ಏನೆಲ್ಲಾ ಸಿಗುತ್ತದೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ನೀವು ಹೊರಗೆ ಹೋಗಬೇಕಾದರೆ ನಿಮ್ಮ ನೆಚ್ಚಿನ ಶ್ವಾನವನ್ನು ಆಟೋದವರು, ಕ್ಯಾಬ್‍ಗಳ ಚಾಲಕರು ಹತ್ತಿಸಿಕೊಳ್ಳುವುದಿಲ್ಲ. ಒಂದು ವೇಳೆ ಹತ್ತಿಸಿಕೊಂಡರೂ ದುಬಾರಿ ಬಾಡಿಗೆಗೆ ಡಿಮ್ಯಾಂಡ್ ಮಾಡುತ್ತಾರೆ. ಆದರೆ, ಇಂತಹ ಕಿರಿಕಿರಿ ತಪ್ಪಿಸಲೆಂದೇ ಪಾ ಕ್ಯಾಬ್ ಬಂದಿದೆ. ಅಂದಹಾಗೆ ಈ ಕ್ಯಾಬ್‍ನಲ್ಲಿ ನಿಮ್ಮ ನೆಚ್ಚಿನ ನಾಯಿಯನ್ನು ನಿಮಗೆ ಬೇಕಾದ ಕಡೆಗೆ ಕರೆದೊಯ್ಯಬಹುದು. ಯಾವುದೇ ಕಿರಿಕಿರಿ ಇಲ್ಲದೇ ಅದು ಆಸ್ಪತ್ರೆಯಾಗಲಿ, ಕ್ಲಿನಿಕ್‍ಗೆ ಆಗಲಿ ಅಥವಾ ಹೊರ ಸಂಚಾರಕ್ಕೆ ಕರೆದೊಯ್ಯಬಹುದಾಗಿದೆ. ಇದಿಷ್ಟೇ ಅಲ್ಲ. ಬೀದಿ ನಾಯಿಗಳ ಚಿಕಿತ್ಸೆಗೂ ಈ ಕ್ಯಾಬ್ ಸೇವೆ ಲಭ್ಯವಾಗಲಿದೆ.

      ಬೆಂಗಳೂರು ನಗರದಲ್ಲಿ ಸಾಕಷ್ಟು ಬೀದಿನಾಯಿಗಳಿವೆ. ಇವುಗಳಲ್ಲಿ ಹಲವಾರು ರೋಗಪೀಡಿತವಾಗಿರುತ್ತವೆ. ಈ ನಾಯಿಗಳನ್ನು ಹಿಡಿದು ಚಿಕಿತ್ಸೆಗೆ ಕರೆದೊಯ್ಯುವುದು ಕಷ್ಟವಾಗುತ್ತದೆ. ಅಲ್ಲದೇ, ಬೀದಿಬದಿಯಲ್ಲಿ ನಾನಾ ಕಾರಣಗಳಿಂದ ನಾಯಿಗಳು ಸಾವನ್ನಪ್ಪುತ್ತವೆ. ಆದರೆ, ಅವುಗಳ ಶವಸಂಸ್ಕಾರ ಮಾಡಲು ಯಾರೂ ಮುಂದೆ ಬರುವುದಿಲ್ಲ. ಇಂತಹ ನಾಯಿಗಳಿಗೆ ಪುನರ್ವಸತಿ, ಚಿಕಿತ್ಸೆ ಮತ್ತು ಬೇರೆಡೆಗೆ ಸ್ಥಳಾಂತರ ಮಾಡಲೂ ಈ ಕ್ಯಾಬ್ ಬಳಸಿಕೊಳ್ಳಬಹುದಾಗಿದೆ.

       ಅಂದಹಾಗೆ, ಸಾರ್ವಜನಿಕರು ಈ ಕ್ಯಾಬ್ ಸೇವೆಯನ್ನು ಪಡೆಯಲು ಪ್ಲೇಸ್ಟೋರ್‍ನಲ್ಲಿ ಸುಲಭವಾಗಿ ಅಪ್ಲಿಕೇಷನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್ ಮೂಲಕ ಕ್ಯಾಬ್ ಅನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಿ, ಆನ್‍ಲೈನ್‍ನಲ್ಲೇ ಬಾಡಿಗೆಯನ್ನು ಪಾವತಿ ಮಾಡಬಹುದು. ಈ ಅಪ್ಲಿಕೇಷನ್ ಅನ್ನು ವೆಬ್ ಯೂನಿವರ್ಸಲ್ ಸಹಾಯದಿಂದ ನಿರ್ಮಿಸಲಾಗಿದೆ.

       ನಮ್ಮ ಈ ಕಾರ್ಯಕ್ಕಾಗಿ ನಾವು ಯಾವುದೇ ದೇಣಿಗೆಯನ್ನು ಬಯಸುವುದಿಲ್ಲ. ಡೊಗ್ಗೂರುಅಮೃತ್ ಸಂಸ್ಥೆಯೇ ಇದಕ್ಕೆ ಹಣಕಾಸು ನೆರವು ನೀಡಲಿದೆ. ಇದರ ಮತ್ತೊಂದು ವಿಶೇಷವೆಂದರೆ, ಸಾವನ್ನಪ್ಪಿದ ಬೀದಿ ನಾಯಿಗಳ ಶವವನ್ನು ಉಚಿತವಾಗಿ ಸಾಕುಪ್ರಾಣಿಗಳ ಶವಾಗಾರಕ್ಕೆ ಸಾಗಿಸಲಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap