ಬೆಂಗಳೂರು
ಬಿಜೆಪಿ ಪಕ್ಷದ ನಾಯಕರ ವಿರೋಧದ ನಡುವೆಯೂ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಿರುವ ಮೈತ್ರಿ ಸರ್ಕಾರದ ನಡೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಯಾವುದೇ ಕಾರಣಕ್ಕೂ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ನಮೂದಿಸಬಾರದೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಕಾರಣಕ್ಕೂ ತಮ್ಮ ಹೆಸರು ಸೇರಿಸಬೇಡಿ. ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರ ಜನರ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದೆ. ಆದರೆ, ಟಿಪ್ಪು ಕನ್ನಡ ವಿರೋಧಿ ಮತ್ತು ಹಿಂದು ವಿರೋಧಿಯಾಗಿದ್ದ ಎಂಬುದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಅಂತಹ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಜಯಂತಿ ಆಚರಿಸುತ್ತಿರುವುದಕ್ಕೆ ನನ್ನ ವಿರೋಧವಿದೆ ಎಂದು ಹೆಗಡೆ ಅವರ ವಿಶೇಷ ಕರ್ತವ್ಯಾಧಿಕಾರಿ ವಿಜಯಕುಮಾರ್ ತೋರಗಲ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.