ಚರ್ಮರೋಗದ ಬಗ್ಗೆ ತಪ್ಪು ಕಲ್ಪನೆ ಬೇಡ;ಡಾ.ಪಾಲಾಕ್ಷ

ಚಿತ್ರದುರ್ಗ:

   ಚರ್ಮರೋಗದ ಬಗ್ಗೆ ಜನರಲ್ಲಿ ಈಗಲೂ ಬೇರೂರಿರುವ ಮೂಢನಂಬಿಕೆ, ತಪ್ಪುಕಲ್ಪನೆಗಳನ್ನು ಹೋಗಲಾಡಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷರವರು ಹೇಳಿದರು.

      ಭಾರತೀಯ ಚರ್ಮ,ಲೈಂಗಿಕ ಮತ್ತು ಕುಷ್ಟ ರೋಗ ತಜ್ಞರ ಸಂಘದಿಂದ ಜಿಲ್ಲೆಯಾದ್ಯಂತ 20 ದಿನಗಳ ಕಾಲ ಸಂಚರಿಸುವ ಚರ್ಮರಥ ಜಾಗೃತಿ ಅಭಿಯಾನವನ್ನು ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಚರ್ಮ ರೋಗದ ಕುರಿತು ಹಳ್ಳಿಗಾಡಿನ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಜಿಲ್ಲೆಯಾದ್ಯಂತ ಚರ್ಮರಥ ಜಾಗೃತಿ ಅಭಿಯಾನ ಸಂಚರಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಸುಬು, ಕಜ್ಜಿ ಇನ್ನಿತರೆ ಚರ್ಮರೋಗ ಕಾಣಿಸಿಕೊಂಡರೆ ಗಿಡ, ಸೊಪ್ಪು, ಮಣ್ಣು ಹಾಕಿ ತಿಕ್ಕುವ ಸಂಪ್ರದಾಯ ಈಗಲೂ ಇದೆ. ಹಾಗಾಗಿ ಚರ್ಮರೋಗಕ್ಕೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸಿ ಎಂದು ತಿಳಿಸಿದರು.

     ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಟರೋಗ ತಜ್ಞರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಬಿ.ಎಸ್.ಚಂದ್ರಶೇಖರ್ ಮಾತನಾಡಿ ಎರಡು ವರ್ಷದ ಹಿಂದೆ ರಾಜ್ಯದಲ್ಲಿ ಚರ್ಮರಥವನ್ನು ಆರಂಭಿಸಲಾಯಿತು. ಎಲ್ಲಾ ರಾಜ್ಯಗಳು ಚರ್ಮರಥದ ಉದ್ದೇಶವನ್ನು ಮಾದರಿಯಾಗಿಟ್ಟುಕೊಂಡು ಅನುಷ್ಟಾನಗೊಳಿಸಿವೆ. ಅಷ್ಟರ ಮಟ್ಟಿಗೆ ಚರ್ಮರಥ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

     ಚರ್ಮರೋಗ ಬಗ್ಗೆ ಜನರಲ್ಲಿರುವ ತಪ್ಪುಕಲ್ಪನೆಯನ್ನು ಹೋಗಲಾಡಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸುವುದು ಚರ್ಮರಥ ಜಾಗೃತಿ ಅಭಿಯಾನದ ಗುರಿ. ಜಿಲ್ಲೆಯ ಪ್ರತಿ ಹಳ್ಳಿ ಹಾಗೂ ಹೋಬಳಿ ಮಟ್ಟದಲ್ಲಿ ಚರ್ಮರಥ ಸಂಚರಿಸಿ ಇದರ ಪ್ರಯೋಜನವನ್ನು ಜನರಿಗೆ ತಿಳಿಸಲಾಗುವುದು ಎಂದರು.

     ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಚರ್ಮರಥ ಜಾಗೃತಿ ಅಭಿಯಾನ ಸಂಚರಿಸಿ ಚರ್ಮರೋಗ ಹಾಗೂ ವಿವಿಧ ಕಾಯಿಲೆಗಳ ಬಗ್ಗೆ ವಿವಿಧ ಸ್ತರಗಳಲ್ಲಿ ತಿಳುವಳಿಕೆ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತಲುಪಿಸಲಾಗುವುದು ಎಂದು ಜಾಗೃತಿ ಅಭಿಯಾನ ಚರ್ಮರಥದ ಉದ್ದೇಶವನ್ನು ವಿವರಿಸಿದರು.

     ಬಸವೇಶ್ವರ ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಜಿ.ಪ್ರಶಾಂತ್, ಡಾ.ಯೋಗೇಂದ್ರ, ಡಾ.ಗೌರಮ್ಮ, ಚರ್ಮರಥ ಅಭಿಯಾನದ ಅಧ್ಯಕ್ಷ ಡಾ.ಸತೀಶ್‍ಪೈ, ಕಾರ್ಯದರ್ಶಿ ಡಾ.ಮಂಜುನಾಥ್, ಡಾ.ತಿಪ್ಪಾರೆಡ್ಡಿ, ಡಾ.ಪ್ರಶಾಂತ್, ವಿಜಯಕುಮಾರ್, ಎನ್.ಎಸ್.ಮಂಜುನಾಥ್, ರಾಜ್ಯ ಯುವ ಪ್ರಶಸ್ತಿ ಪುರಸ್ಕತ ಮಳಲಿ ಶ್ರೀನಿವಾಸ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap