ಚಳ್ಳಕೆರೆ
ಆಸ್ಪತ್ರೆಗೆ ಬರುವ ಬಡ ರೋಗಿಗಳು ಚಿಕಿತ್ಸೆ ನೀಡುವ ವೈದ್ಯರನ್ನೇ ದೇವರು ಎಂದು ಭಾವಿಸಿ ಬರುತ್ತಾರೆ. ಕಳೆದ ಹಲವಾರು ವರ್ಷಗಳ ನಿರಂತರ ಬರಗಾಲ ಈ ಭಾಗದ ಜನರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ. ಕಡೇಯ ಪಕ್ಷ ಆರೋಗ್ಯವನ್ನಾದರೂ ಕಾಪಾಡಿಕೊಳ್ಳುವ ದೃಷ್ಠಿಯಿಂದ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರ ಮೇಲೆ ಅಪಾರವಾದ ನಂಬಿಕೆ ವಿಶ್ವಾಸವನ್ನಿಟ್ಟು ಬರುವ ಮುಗ್ಧ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ಜೀವನದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಬೇಕೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾ ರಾಮಣ್ಣ ವೈದ್ಯ ಸಮೂಹದಲ್ಲಿ ಮನವಿ ಮಾಡಿದರು.
ಅವರು, ಶುಕ್ರವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಸಾರ್ವಜನಿಕರ ಹಲವಾರು ಸಮಸ್ಯೆಗಳ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಕೋಟಿಗಟ್ಟಲೆ ಹಣವನ್ನು ಇಲ್ಲಿನ ಆಸ್ಪತ್ರೆಗೆ ನೀಡಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಸದಾ ಕಾರ್ಯನಿರ್ವಹಿಸುವ ಸಾರ್ವಜನಿಕ ಆಸ್ಪತ್ರೆ ಇದಾಗಿದ್ದು, ನೆರೆಯ ಆಂಧ್ರ ಪ್ರದೇಶಗಳಿಂದಲೂ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಆದರೆ, ಕೆಲವೊಮ್ಮೆ ಇಲ್ಲಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವುದಿಲ್ಲವೆಂಬ ಆರೋಪವಿದೆ. ಆದ್ದರಿಂದ ಎಲ್ಲಾ ವೈದ್ಯರು ರೋಗಿಗಳಿಗೆ ಸ್ಪಂದಿಸಿ ಆಸ್ಪತ್ರೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಸಮರ್ಥರಾಯ ಮಾತನಾಡಿ, ಸದರಿ ಆಸ್ಪತ್ರೆಯಲ್ಲಿ ಅನೇಕ ಉತ್ತಮ ವೈದ್ಯರಿದ್ದಾರೆ. ಯಾವುದೇ ಹಂತದಲ್ಲೂ ತಮ್ಮ ಕರ್ತವ್ಯಕ್ಕೆ ಚ್ಯುತಿಬಾರದಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾರೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರ ಸ್ಕ್ಯಾನಿಂಗ್ ಹೊರಗಡೆ ಮಾಡಿಸಲಾಗುತ್ತಿದೆ. ಇಲ್ಲಿನ ಅಂಬ್ಯುಲೆನ್ಸ್ ವಾಹನದಲ್ಲಿ ರೋಗಿಗಳನ್ನು ತರುವ ಸಿಬ್ಬಂದಿ ಹಣ ಕೇಳಿ ಪಡೆಯುತ್ತಾರೆಂಬ ಆರೋಪವಿದೆ. ಇಂತಹ ಆರೋಪಗಳು ಆಸ್ಪತ್ರೆಯ ಗೌರವವನ್ನು ಕುಂದಿಸುತ್ತವೆ. ಈ ನಿಟ್ಟಿನಲ್ಲಿ ಲೋಪದೋಷಗಳನ್ನು ಸರಿಪಿಡಿಸಿಕೊಳ್ಳುವಂತೆ ಮನವಿ ಮಾಡಿದರು.
ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ, ಉಮಾಜನಾರ್ಥನ್, ಸಣ್ಣ ಸೂರಯ್ಯ, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಜಿ.ರಂಜಿತಾ ಮುಂತಾದವರು ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಜಿ.ತಿಪ್ಪೇಸ್ವಾಮಿ ಮಾತನಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಅನೇಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ಧಾರೆ. ಈಗಾಗಲೇ ಎಲ್ಲರಿಗೂ ತಿಳಿದಂತೆ ತಾಲ್ಲೂಕಿನ ಅತಿದೊಡ್ಡ ಆಸ್ಪತ್ರೆಯಾಗಿ ಈ ಆಸ್ಪತ್ರೆ ಹೊರಹೊಮ್ಮಿದೆ. ದಿನದ 24 ಗಂಟೆಗಳ ಕಾಲ ಇಲ್ಲಿ ವೈದ್ಯರು ಸಿಬ್ಬಂದಿ ವರ್ಗ ಕಾರ್ಯನಿಹಿಸಬೇಕಿದೆ. ಪ್ರತಿನಿತ್ಯ ಅಂದಾಜು ಹಗಲು ರಾತ್ರಿಯಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರು ಮತ್ತು ಸಿಬ್ಬಂದಿ ವರ್ಗ ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಸಹ ಯಾವುದಾದರೂ ನಿರ್ಧಿಷ್ಟವಾದ ದೂರುಗಳು ಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ವೈಧ್ಯರಾದ ಶಮಾಪರ್ಮಿನ್, ಜ್ಯೋತಿ, ವೆಂಕಟೇಶ್, ಪ್ರಜ್ವಲ್ ಧನ್ಯ, ಅಮೀತ್ ಗುಪ್ತ, ಬಿ.ಆರ್.ಮಂಜಪ್ಪ, ಬಸವರಾಜು, ಸುಹೀನಾ, ಮ್ಯಾಟ್ರನ್ ಸಾಂತಮ್ಮ, ಶುಶ್ರೂಷಕಿಯರಾದ ಪಾರ್ವತಿ, ಮಂಜುಳಾ, ವ್ಯವಸ್ಥಾಪಕಿ ರಾಜೇಶ್ವರಿ, ಕಾಂತರಾಜು, ಪ್ರಕಾಶ್, ತಿಪ್ಪೇಸ್ವಾಮಿ, ಭೀಮಣ್ಣ ಮುಂತಾದವರು ಭಾಗವಹಿಸಿದ್ದರು.