ಪಾಪದ ಹಣ ಮುಟ್ಟಬೇಡಿ, ಅಳುವವರ ಮಾತಿಗೆ ಮರುಳಾಗಬೇಡಿ : ಸಿದ್ಧರಾಮಯ್ಯ

ಶಿರಾ

     ಶಿರಾ ಉಪ ಚುನಾವಣೆ ದಿನ ದಿನಕ್ಕೂ ಕಾವೇರುತ್ತಿದ್ದು ವಿರೋಧ ಪಕ್ಷಗಳ ಧುರೀಣರು ಈ ಕ್ಷೇತ್ರಕ್ಕೆ ಬಂದು ಬೀಡು ಬಿಟ್ಟಿದ್ದಾರೆ. ಕೋವಿಡ್ ಹೆಸರಲ್ಲಿ ಲೂಟಿ ಮಾಡಿದ ಭ್ರಷ್ಟಾಚಾರದ ಪಾಪದ ಹಣವನ್ನು ಹಂಚುವವರ ಪಾಪದ ಹಣವನ್ನು ಖಂಡಿತ ಮುಟ್ಟಬೇಡಿ. ಮಾತು ಮಾತಿಗೂ ಮೊಸಳೆ ಕಣ್ಣೀರಿಡುತ್ತಾ ವೋಟು ಗಿಟ್ಟಿಸಲು ಬಂದಿರುವ ಯಾವುದೇ ರಾಜಕೀಯ ಮುಖಂಡರ ಮಾತಿಗೆ ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ಹರಿಹಾಯ್ದರು.

    ತಾಲ್ಲೂಕಿನ ಬೂವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾನಂಗಿ ತಾಂಡಾ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರ ಗುರುವಾರ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಐದು ವರ್ಷಗಳ ನಿರಂತರ ಅವಧಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದಾಗ ಅನ್ನಭಾಗ್ಯ, ಉಚಿತ ಬೈಸಿಕಲ್, ಕೃಷಿ ಭಾಗ್ಯ, ಪಶುಭಾಗ್ಯ, ಷಾದಿಭಾಗ್ಯ…ಹೀಗೆ ಒಂದಲ್ಲಾ ಎರಡಲ್ಲ ಹತ್ತು ಹಲವು ಭಾಗ್ಯಗಳನ್ನು ನಾಡಿನ ಜನತೆಗೆ ನೀಡಿದೆ. ರಾಜ್ಯದಲ್ಲಿ ನೀಡಿದ ಅನ್ನಭಾಗ್ಯ ಯೋಜನೆಯಿಂದ ಯಾವೊಬ್ಬ ವ್ಯಕ್ತಿಯೂ ಇಂದು ಅನ್ನವಿಲ್ಲದೆ ಬದುಕಬಾರದೆಂಬ ಉದ್ದೇಶದಿಂದ ಅಂದು 7 ಕೆ.ಜಿ. ಉಚಿತ ಅಕ್ಕಿಯನ್ನು ನೀಡುವ ಯೋಜನೆ ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು. ಆದರೆ ಈ ಬಿ.ಜೆ.ಪಿ. ಸರ್ಕಾರ 7 ಕೆ.ಜಿ.ಯಲ್ಲಿ ಎರಡು ಕೆ.ಜಿ. ಅಕ್ಕಿಯನ್ನು ಮೊಟಕುಗೊಳಿಸಿ ಜನರ ಹಸಿವನ್ನು ತಣಿಸಲಿಲ್ಲವೆಂದು ಲೇವಡಿ ಮಾಡಿದರು.

    ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ರಾಜ್ಯದ ಅನೇಕ ತಾಂಡಾಗಳು, ಹಾಡಿಗಳು, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಸರ್ಕಾರದ ಜಾಗದಲ್ಲಿ ವಾಸಿಸುವವರೆ ಒಡೆಯರೆಂದು ಘೋಷಣೆ ಮಾಡಿ ಕಂದಾಯ ಗ್ರಾಮಗಳನ್ನಾಗಿಸಿದ್ದರೂ, ಕಳೆದ ಎರಡೂವರೆ ವರ್ಷಗಳಿಂದ ನಮ್ಮ ಈ ಯೋಜನೆಯನ್ನು ಜಾರಿಗೆ ತರದೆ ಬಿ.ಜೆ.ಪಿ. ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ ಎಂದು ಸಿದ್ಧರಾಮಯ್ಯ ಟೀಕಿಸಿದರು.

   ಕಾಂಗ್ರೆಸ್ ಪಕ್ಷ ಇಂದು ಗಟ್ಟಿಗೊಂಡಿದೆ ಎಂದರೆ ಅದಕ್ಕೆ ತಳ ಸಮುದಾಯಗಳ ಶಕ್ತಿಯೇ ಕಾರಣ. ತಳ ಸಮುದಾಯಗಳ ಸಮಸ್ಯೆಗಳಿಗೆ ನಮ್ಮ ಪಕ್ಷ ಹಿಂದಿನಿಂದಲೂ ಸ್ಪಂದಿಸುತ್ತಲೇ ಬಂದಿದೆ. ಮೊದಲಬಾರಿಗೆ ಬಂಜಾರ ಸಮುದಾಯದ ಆರಾಧ್ಯ ದೈವ ಸೇವಾಲಾಲ್ ಜಯಂತಿಯ ಆಚರಣೆಗೆ ಅನುಮತಿಸಿದ್ದು ಕಾಂಗ್ರೆಸ್ ಸರ್ಕಾರವಾಗಿದ್ದು, ಆರಾಧ್ಯ ದೈವ ಸೇವಲಾಲ್ ಜನ್ಮತಾಳಿದ ಭೂಮಿಗೆ 19 ಎಕರೆ ಜಮೀನನ್ನು ಉಚಿತವಾಗಿ ಸರ್ಕಾರದಿಂದ ನೀಡಿದ್ದಲ್ಲದೆ, ಅಭಿವೃದ್ಧಿಗೆ 30 ಕೋಟಿ ರೂ.ಗಳ ಅನುದಾನವನ್ನೂ ನಮ್ಮ ಸರ್ಕಾರ ಮೀಸಲಿಟ್ಟಿತ್ತು ಎಂದರು.

    ಶಿರಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಟಿ.ಬಿ.ಜಯಚಂದ್ರ ಅಭಿವೃದ್ಧಿಯ ಹರಿಕಾರರಷ್ಟೇ ಅಲ್ಲದೆ, ನಿಮ್ಮ ಬರದ ಬೀಡಿನ ಭಗೀರಥ ಎಂಬ ಖ್ಯಾತಿಗೂ ಅವರು ಒಳಗಾಗಿದ್ದಾರೆ. ಅಭಿವೃದ್ಧಿ ಕಾರ್ಯ ಕೈಗೊಂಡವರನ್ನು ಸೋಲಿಸಬಾರದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದರೆ ಟಿ.ಬಿ.ಜಯಚಂದ್ರ ಅವರ ಗೆಲುವಿನಿಂದಲೆ ಅದು ಆರಂಭಗೊಳ್ಳಬೇಕು ಎಂದು ಸಿದ್ಧರಾಮಯ್ಯ ಹೇಳಿದರು.

    ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ನನಗೆ ಅತಿ ಹೆಚ್ಚು ಪ್ರೀತಿಯ ಕಾರ್ಯಕ್ರಮ ಅನ್ನಭಾಗ್ಯವಾಗಿದೆ. ಸಿದ್ಧರಾಮಯ್ಯ ಅವರನ್ನು ಅನ್ನಧಾಮಯ್ಯ ಎಂತಲೂ ನಾಡಿನ ಜನ ಕರೆಯುತ್ತಾರೆ. ನರೇಂದ್ರ ಮೋದಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ನಿರುದ್ಯೋಗಿಗಳನ್ನೂ ವಂಚಿಸಿದ್ದಾರೆ. ಕೋವಿಡ್ ಹೆಸರಲ್ಲಿ ಕೇಂದ್ರ ರಾಜ್ಯ ಸರ್ಕಾರಗಳೆರಡೂ ಹಣ ಲೂಟಿ ಮಾಡಿವೆ. ಇಂತಹ ಸರ್ಕಾರಗಳು ನಮಗೆ ಬೇಕಿಲ್ಲ ಎಂದರು.

    ವ್ಯಾಪಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ ಕಳೆದ ಬಾರಿ ಜಯಚಂದ್ರ ಪರಾಜಯಗೊಂಡರು. ಅದಕ್ಕೆ ಪ್ರಮುಖ ಕಾರಣ ಅಪ ಪ್ರಚಾರವಷ್ಟೆ. ಕ್ಷೇತ್ರದ ಜನ ಕಾಂಗ್ರೆಸ್ ಗೆಲ್ಲಿಸಲು ಕಾತರರಾಗಿದ್ದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪ್ರ್ರಾಮಾಣಿಕವಾಗಿ ದುಡಿಯಬೇಕಿದೆ.
ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.

   ತಾಲ್ಲೂಕಿನ ಕಾಡಜ್ಜನಪಾಳ್ಯ, ಹುಣಸೇಹಳ್ಳಿ, ಹೇರೂರು ಸೇರಿದಂತೆ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಚಾರಸಭೆಯನ್ನು ಏರ್ಪಡಿಸಲಾಗಿತ್ತು. ಪಕ್ಷದ ಮುಖಂಡ ರವಿಕುಮಾರ್ ಕಲ್ಕೆರೆ, ಮಾಜಿ ಸಚಿವರುಗಳಾದ ಶಿವಮೂರ್ತಿ ನಾಯ್ಕ, ಪಿ.ಟಿ.ಪರಮೇಶ್ವರನಾಯ್ಕ, ಪ್ರಕಾಶ್ ರಾಥೋಡ್, ವಿನಯ್ ತ್ಯಾಗರಾಜು, ಗ್ರಾ. ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಬೂವನಹಳ್ಳಿ ಸತ್ಯನಾರಾಯಣ್, ಗೋಣಿಹಳ್ಳಿ ದೇವರಾಜು, ಜನಾರ್ಧನ್, ಮಹೇಶ್, ಶೇಷಾನಾಯ್ಕ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap