ವಿಆರ್‍ಎಸ್ ಪಡೆದು ಹರಕೆಯ ಕುರಿಗಳಾಗದಿರಿ..!

ದಾವಣಗೆರೆ:

     ಮುಂದಿನ ದಿನಗಳಲ್ಲಿ ಬಿಎಸ್‍ಎನ್‍ಎಲ್‍ಗೆ ಉಜ್ವಲ ಭವಿಷ್ಯವಿದ್ದು, ನೌಕರರು ಅಡಳಿತ ಮಂಡಳಿಯ ಒತ್ತಡದ ತಂತ್ರಕ್ಕೆ ಮಣಿದು ಸ್ವಯಂ ನಿವೃತ್ತಿ(ವಿಆರ್‍ಎಸ್) ಪಡೆದು ಹರಕೆಯ ಕುರಿಗಳಾಗಬಾರದು ಎಂದು ಬಿಎಸ್‍ಎನ್‍ಎಲ್ ಎಂಪ್ಲಾಯಿಸ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಪಿ.ಅಭಿಮಾನ್ಯು ಕಿವಿಮಾತು ಹೇಳಿದರು.

     ಇಲ್ಲಿನ ಪೂಜಾ ಹೋಟೆಲ್ ಸಭಾಂಗಣದಲ್ಲಿ ನಡೆದ ಬಿಎಸ್‍ಎನ್‍ಎಲ್ ಎಂಪ್ಲಾಯಿಸ್ ಯೂನಿಯನ್‍ನ ಕರ್ನಾಟಕ ವಲಯದ 7ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಮುಳುಗಿ ಹೋಗಲಿದೆ ಎಂಬ ಆತಂಕ ನೌಕರರಲ್ಲಿರುವುದರಿಂದ ನೌಕರರು ಸೇವೆಯಲ್ಲಿ ಮುಂದು ವರೆಯುವುದೋ, ಸ್ವಯಂ ನಿವೃತ್ತಿ ಪಡೆಯುವುದೋ ಎಂಬ ಕವಲು ಹಾದಿಯಲ್ಲಿ ನಿಂತಿದ್ದಾರೆ. ಆದರೆ, ನಮ್ಮ ಯೂನಿಯನ್‍ನ ಹೋರಾಟದ ಫಲವಾಗಿ ಸರ್ಕಾರ ಈಗ ಬಿಎಸ್‍ಎನ್‍ಎಲ್‍ಗೆ ಉಚಿತವಾಗಿ 20 ವರ್ಷಕ್ಕೆ 4ಜಿ ಸ್ಪೆಕ್ಟ್ರಂ ಅಲೋಕೇಟ್ ಮಾಡಿದ್ದರೂ ಆಡಳಿತ ಮಂಡಳಿ 4ಜಿ ಸೇವೆಯನ್ನು ಆರಂಭಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

      ಬಿಎಸ್‍ಎನ್‍ಎಲ್ ಜಮೀನು ಸೇರಿದಂತೆ ಇತರೆ ಸ್ವತ್ತುಗಳನ್ನು ಭೋಗಕ್ಕೆ ನೀಡುವುದರಿಂದ 15 ಸಾವಿರ ಲಕ್ಷ ಕೋಟಿ ಮತ್ತು ಸಂಸ್ಥೆಯ ಬಾಂಡ್ ಮಾರಾಟ ಮಾಡುವುದರಿಂದ ಬರುವ 10 ಸಾವಿರ ಲಕ್ಷ ಕೋಟಿ ಸೇರಿ ಒಟ್ಟು 25 ಸಾವಿರ ಲಕ್ಷ ಕೋಟಿ ಹಣ ಬರಲಿದ್ದು, ಇದರಿಂದ ಬಿಎಸ್‍ಎನ್‍ಎಲ್ ಮಾಡಿರುವ ಸಾಲ ತೀರಿಸುವುದರ ಜೊತೆಗೆ ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲು ಅನುಕೂಲವಾಗಲಿದೆ. ಹೀಗಾಗಿ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದರು.

     ಬಿಎಸ್‍ಎನ್‍ಎಲ್‍ಗೆ ಈಗ ದೇಶದಲ್ಲಿ ಉತ್ತಮ ಅವಕಾಶಗಳಿದ್ದರೂ ಆಡಳಿತ ಮಂಡಳಿಯು ನೌಕರರ ವೇತನ ಪಾವತಿಸದೇ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದೆ ಎಂಬುದನ್ನು ಬಿಂಬಿಸಿ, ನೌಕರರು ಸ್ವಯಂ ನಿವೃತ್ತಿ ಪಡೆದು ಹೋಗಲಿ ಎಂಬ ಕಾರಣಕ್ಕೆ ನೌಕರರ ಮೇಲೆ ಒತ್ತಡದ ತಂತ್ರ ಹೇರುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನೌಕರರು ವಿಆರ್‍ಎಸ್ ಪಡೆಯುವ ಆತುರದ ನಿರ್ಧಾರಕ್ಕೆ ಒಳಗಾಗದೇ ಸೇವೆಯಲ್ಲಿ ಮುಂದುವರೆಯಬೇಕೆಂದು ಕಿವಿಮಾತು ಹೇಳಿದರು.

      ಇನ್ನೂ ಮುಂದೆ ಬಿಎಸ್‍ಎನ್‍ಎಲ್ ದೇಶದಲ್ಲಿ ಹೊಸ ಭಾಷ್ಯ ಬರೆಯಲಿದ್ದು, ಹೋರಾಟದಿಂದ ಕೇಂದ್ರ ಸರ್ಕಾರದಿಂದ ಯಾವ ರೀತಿ 4ಜಿ ಸ್ಪೆಕ್ಟ್ರಂ ಉಚಿತವಾಗಿ ಪಡೆದಿದ್ದೆವೋ, ಅದೇರೀತಿಯಲ್ಲಿ ಮುಂದೆ 5ಜಿ ಸ್ಪೆಕ್ಟ್ರಂ ಸಹ ಪಡೆಯುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಮೂರು ತಿಂಗಳಲ್ಲಿ ವೋಡಾಫೋನ್ 50 ಸಾವಿರ ಕೋಟಿ ಹಾಗೂ ಏರ್‍ಟೆಲ್ 25 ಸಾವಿರ ಕೋಟಿ ನಷ್ಟ ಅನುಭವಿಸಿವೆ. ಅಲ್ಲದೇ, ಮೊದಲಿಗೆ ಉಚಿತ ಸೇವೆ ನೀಡಿದ್ದ ಜಿಯೋ ಈಗ ಎಲ್ಲಾ ದೂರ ಸಂಪರ್ಕ ಸಂಸ್ಥೆಗಳಿಗಿಂತ ಹೆಚ್ಚು ಮೊತ್ತದ ಟಾರಿಫ್ ಘೋಷಿಸುತ್ತಿದೆ.

       ಹೀಗೆ ನಮ್ಮ ಪ್ರತಿಸ್ಪರ್ಧಿ ದೂರ ಸಂಪರ್ಕ ಸಂಸ್ಥೆಗಳು ನೆಲ ಕಚ್ಚುತ್ತಿರುವ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ 4ಜಿ ಸೇವೆ ಆರಂಭಿಸುತ್ತಿರುವುದರಿಂದ ಕನಿಷ್ಠ 10 ಕೋಟಿ ಗ್ರಾಹಕರು ಬಿಎಸ್‍ಎನ್‍ಎಲ್‍ನ ಹೊಸದಾಗಿ ಸಂಪರ್ಕಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ವಿಎಎನ್ ನಂಬೂದರಿ ಅವರು ರಚಿಸಿರುವ ವಜ್ರಕಾಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು .ಯೂನಿಯನ್‍ನ ಕರ್ನಾಟಕ ವಲಯ ಕಾರ್ಯದರ್ಶಿ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಯೂನಿಯನ್‍ನ ವಲಯ ಅಧ್ಯಕ್ಷ ಎಂ.ಸಿ.ಬಾಲಕೃಷ್ಣ, ಸಂಸ್ಥಾಪಕ ಕಾರ್ಯದರ್ಶಿ ವಿ.ಎ.ಎನ್.ನಂಬೂದರಿ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ, ಯೂನಿಯನ್‍ನ ಇರ್ಫಾನ್ ಪಾಷಾ, ಜಿ.ಬಿ.ಸಾಲಕಿ, ಎಚ್.ಸಿ.ಪ್ರಕಾಶ್, ಕೆ.ಮಹಾಂತೇಶ್, ಕೇಶವ ಜೆ.ವಿ, ಸುರೇಶ, ಈರಣ್ಣ, ಗಂಗಾಧರಪ್ಪ.ಪಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link