ಹುಳಿಯಾರು
ಕಡಿಮೆ ಬೆಲೆಗೆ ವಿದೇಶಿ ವಸ್ತುಗಳು ಸಿಗುತ್ತವೆಂದು ಖರೀದಿಸಬೇಡಿ. ಏಕೆಂದರೆ ಕಡಿಮೆ ಬೆಲೆಗೆ ಸಿಗುವ ವಸ್ತುಗಳ ಗುಣಮಟ್ಟ ತೀರಾ ಕಳಪೆಯಾಗಿದ್ದು ಬಹುಬೇಗ ಹಾಳಾಗುತ್ತದೆ. ಹಾಗಾಗಿ ಬೆಲೆ ಹೆಚ್ಚಾದರೂ ಸಹ ಗುಣಮಟ್ಟದಿಂದ ಕೂಡಿರುವ ದೀರ್ಘಕಾಲ ಬಾಳಿಕೆ ಬರುವ ದೇಶಿಯ ವಸ್ತುಗಳನ್ನು ಖರೀದಿಸಿ. ಈ ಮೂಲಕ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಿರಿ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕರೆ ನೀಡಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಏರ್ಪಡಿಸಿದ್ದ 74 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಮೋದಿಯವರು ಸ್ವಾವಲಂಭಿ ಭಾರತ ನಿರ್ಮಾಣಕ್ಕೆ ಟೊಂಕ ಕಟ್ಟಿನಿಂತಿದ್ದಾರೆ. ವಿದೇಶಿ ಕಂಪನಿಗಳು ಈಗಾಗಲೇ ಮೋದಿಯವರ ಸ್ವಾವಲಂಭಿ ಭಾರತಕ್ಕೆ ಬೆಂಬಲ ನೀಡಿ ದೇಶದಲ್ಲಿ ಹೂಡಿಕೆ ಮಾಡುತ್ತಿವೆ. ಭಾರತೀಯರಾದ ನಾವೂ ಕೂಡ ಮೇಡಿನ್ ಇಂಡಿಯಾ ವಸ್ತುಗಳನ್ನು ಖರೀದಿಸುವ ಮೂಲಕ ಆತ್ಮ ನಿರ್ಭರ ಯೋಜನೆಗೆ ಕೈ ಜೋಡಿಸೋಣ. ಈ ಮೂಲಕ ದೇಶದ ಆರ್ಥಿಕತೆಯನ್ನು ಸದೃಢಗೊಳಿಸೋಣ. ಇದೇ ದೇಶಕ್ಕೆ ನಾವು ಕೊಡುವ ದೊಡ್ಡ ಕೊಡುಗೆ ಎಂದರು.
1857 ರ ಸಿಪಾಯಿ ದಂಗೆಯೇ ಮೊದಲ ಮಹಾ ಸ್ವಾತಂತ್ರ್ಯ ಯುದ್ದ. ಅಲ್ಲಿಂದ ಇಲ್ಲಿಯವರೆವಿಗೂ ಬ್ರಿಟೀಷರ ವಿರುದ್ಧ ಅನೇಕ ಹೋರಾಟ ಮಾಡಿ ತ್ಯಾಗಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯಕ್ಕೆ ಹೋರಾಡಿದವರಿಗೆ ಕೃತಜ್ಞತೆ ಅರ್ಪಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಏಕೆಂದರೆ ದೇಶದಲ್ಲಿ ಸ್ವಾತಂತ್ರ್ಯ ಇಲ್ಲದಿದ್ದರೆ ದೇಶದಲ್ಲಿ ನೆಮ್ಮದಿಯ ಜೀವನ ನಡೆಸಲಾಗುತ್ತಿರಲಿಲ್ಲ. ಹಣ, ವಿದ್ಯೆ, ಅಧಿಕಾರ ಅಷ್ಟೇ ಏಕೆ ಮಾತನಾಡುವ ಸ್ವಾತಂತ್ರ್ಯವೂ ನಮಗೆ ಸಿಗುತ್ತಿರಲಿಲ್ಲ ಎಂದರು.
ವಿದ್ಯಾವಾರಿಧಿ ಶಾಲೆಯ ಕಾರ್ಯದರ್ಶಿ ಕವಿತಾಕಿರಣ್, ಪ್ರಾಚಾರ್ಯ ಎಸ್.ದಿಲೀಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
