ಚಿತ್ರದುರ್ಗ :
ಹೆಚ್.ಐ.ವಿ ಪೀಡಿತರಿಗೆ ಮಾನಸಿಕ ನೋವು ನೀಡಿ, ಸಮುದಾಯದಿಂದ ಹೊರಗಿಡುವ ಪ್ರಯತ್ನ ಮಾಡಬಾರದು. ಅವರು ಸಮಾಜದಲ್ಲಿ ಗೌರವವಯುತವಾಗಿ ಬಾಳಿ ಬದುಕಲು ಅವಕಾಶ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ ವಟವಟಿ ಅವರು ಕಳಕಳಿ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ‘ವಿಶ್ವ ಏಡ್ಸ್ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ದಿನಾಚರಣೆ ಎಂದರೆ ಸಂಭ್ರಮದಿಂದ ಆಚರಿಸುವ ದಿನವಲ್ಲ, ಈ ರೀತಿಯ ದಿನಾಚರಣೆಗಳ ಮೂಲಕ ಸಮುದಾಯಕ್ಕೆ ಹೆಚ್.ಐ.ವಿ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಬೇಕು. ರಸ್ತೆ ಅಪಘಾತಕ್ಕೀಡಾದ ಒಬ್ಬ ವ್ಯಕ್ತಿಗೆ ಪ್ರಥಮ ಚಿಕಿತ್ಸೆ, ನೀರು ಅಥವಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ಸೌಜನ್ಯವನ್ನು ನಮ್ಮ ಜನ ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೆಯೇ ಹೆಚ್.ಐ.ವಿ ಪೀಡಿತರನ್ನು ಸಮಾಜ ತತ್ಸಾರ ಮನೋಭಾವದಿಂದ ಕಾಣುತ್ತದೆ, ಇದು ತಪ್ಪು. ಅವರು ಎಲ್ಲರಂತೆಯೇ ಮನುಷ್ಯರು, ಅವರೊಂದಿಗೆ ಬೆರೆತು ಬಾಳಬೇಕು.
ಅವರಿಗೂ ಸಮಾಜದಲ್ಲಿ ಎಲ್ಲರಂತೆಯೇ ಬದುಕುವ ಅವಕಾಶ ಮಾಡಿಕೊಟ್ಟು, ಉತ್ತಮ ವಾತಾವರಣ ಕಲ್ಪಿಸಬೇಕು. ಎಲ್ಲರೂ ಸಮಾಜಸೇವೆಯಲ್ಲಿ ಪಾಲ್ಗೊಂಡು, ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆ ತುಂಬಾ ಶ್ರೇಷ್ಠವಾದುದು. ಸಮಾಜದಲ್ಲಾಗುವ ಅವಮಾನವನ್ನೆಲ್ಲಾ ಮೆಟ್ಟು ನಿಂತು, ಸಮಾಜಕ್ಕೆ ಸೇವೆ ಮಾಡುವುದರ ಮೂಲಕ ದೇವರಾಗಿ ಬಾಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ ವಟವಟಿ ಸಾರ್ವಜನಿಕರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಮದುವೆ ಹೊರತಾಗಿನ ಲೈಂಗಿಕ ಸಂಪರ್ಕ ತಪ್ಪು, ಹಾಗೆಯೇ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹೆಚ್.ಐ.ವಿ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ ಆಸ್ಪತ್ರೆಗಳಲ್ಲಿ ಬಳಸುವ ಅಸುರಕ್ಷಿತ ಸಿರಿಂಜ್, ಹೆಚ್.ಐ.ವಿ ಪೀಡಿತ ರಕ್ತ ತಮ್ಮ ದೇಹಕ್ಕೆ ಸೇರುವುದರಿಂದ ಹಾಗೂ ಹೆಚ್.ಐ.ವಿ ಪೀಡಿತ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ತಾಯಿಯಿಂದ ಮಗುವಿಗೆ ಏಡ್ಸ್ ಹರಡುವುದನ್ನು ತಡೆಗಟ್ಟಲು ಅವಕಾಶವಿದೆ. ವೈದ್ಯರ ಸಹಾಯ ಪಡೆದು ಹೆಚ್.ಐ.ವಿ ನಿಯಂತ್ರಣದ ಬಗ್ಗೆ ಕ್ರಮವಹಿಸಬೇಕು. ನಮ್ಮದಲ್ಲದ ವಸ್ತುವಿಗೆ ಆಸೆ ಪಡುವುದು ತಪ್ಪು, ಪರಸ್ತ್ರೀ, ಪರಧನ ಮತ್ತು ಮೋಹಕ್ಕೆ ತುತ್ತಾಗಬಾರದು. ಸ್ತ್ರೀ ಪೂಜನೀಯ ನಾಡು ನಮ್ಮದು. ಹೆಣ್ಣು ಗಂಡು ಸಮಾನರು. ನಮ್ಮ ಪುರಾಣಗಳಲ್ಲಿಯೂ ಕೂಡ ಹಲವು ಮೌಲ್ಯಗಳಿವೆ. ಈ ಮೌಲ್ಯಗಳನ್ನರಿತು ಬಾಳಿದರೇ ಸಮಾಜದಲ್ಲಿರುವ ಅನಿಷ್ಠಗಳನ್ನು ತೊಡೆದು ಹಾಕಬಹುದು ಎಂದರು.
ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಆರ್ ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, 1981 ರಲ್ಲಿ ದಕ್ಷಿಣ ಆಫ್ರಿಕ್ರಾದಲ್ಲಿ ಮೊದಲ ಹೆಚ್‍ಐವಿ ಪ್ರಕರಣ ದಾಖಲಾಯಿತು. ಅಂದಿನಿಂದ ಹೆಚ್.ಐ.ವಿ ಹಲವು ದೇಶಗಳಿಗೆ ಲಗ್ಗೆ ಇಟ್ಟಿದೆ. ಹೆಚ್.ಐ.ವಿ ವೈರಾಣುವಿನಿಂದ ಏಡ್ಸ್ ಎಂಬ ಖಾಯಿಲೆ ಉಂಟಾಗುತ್ತದೆ. ಇದು ನಮ್ಮ ದೇಹ ಸೇರಿದ ಕೂಡಲೇ ರೋಗನಿರೋಧಕ ಶಕ್ತಿ ಕುಂದಿಸುವುದಲ್ಲದೇ ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತದೆ. ಕೊನೆಗೆ ಮರಣಕ್ಕೆ ತುತ್ತಾಗುವಂತೆ ಮಾಡುತ್ತದೆ. ವಿಶ್ವದಲ್ಲಿ ಇದುವರೆಗೆ 7.5 ಲಕ್ಷ ಜನ ಏಡ್ಸ್ ನಿಂದ ಮರಣಕ್ಕೆ ತುತ್ತಾಗಿದ್ದಾರೆ. ಭಾರತ ಏಡ್ಸ್ ಪೀಡಿತ ದೇಶಗಳಲ್ಲಿ ಮೂರನೇ ಸ್ಥಾನ ಪಡೆದಿರುವುದು ಬೇಸರದ ಸಂಗತಿ. ರಾಜ್ಯದಲ್ಲಿ ಕೂಡ ಏಡ್ಸ್ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ.
ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಶೇ. 87 ರಷ್ಟು ಹೆಚ್.ಐ.ವಿ ತಗುಲುವ ಸಾಧ್ಯತೆಯಿರುತ್ತದೆ. ಸಮುದಾಯಗಳಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಭಾರತದ ಸಂಸ್ಕøತಿಯಲ್ಲಿ ಮದುವೆಗೆ ಮುಂಚೆ ಲೈಂಗಿಕ ಸಂಪರ್ಕಕ್ಕೆ ಅವಕಾಶವಿಲ್ಲ. ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸಿ, ಪಾಲಿಸಿದರೆ ಅನೇಕ ತೊಂದರೆಗಳಿಂದ ದೂರವಿರಬಹುದು. ಹೆಚ್.ಐ.ವಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ 101 ಪರೀಕ್ಷಾ ಕೇಂದ್ರಗಳಿವೆ. ಏಡ್ಸ್ ನಿಯಂತ್ರಣದ ಬಗ್ಗೆ ಜಿಲ್ಲೆಯ ಕಾರ್ಯವೈಖರಿ ಉತ್ತಮವಾಗಿದ್ದು. ಏಡ್ಸ್ ನಿಯಂತ್ರಣ ಕಾರ್ಯ ಚಟುವಟಿಕೆಗಳಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಅಲಂಕರಿಸಿರುವದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಜಿಲ್ಲೆಯನ್ನು ಏಡ್ಸ್ ಮುಕ್ತವನ್ನಾಗಿಸೋಣ ಎಂದು ಆಶಯ ವ್ಯಕ್ತಪಡಿಸಿದರು.
ಆರೋಗ್ಯ ವಿಭಾಗದಲ್ಲಿ ಅತ್ಯುತ್ತಮ ವೈದ್ಯಾಧಿಕಾರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಡಾ. ರೂಪಶ್ರೀ, ಐಸಿಟಿಸಿ ಪ್ರಯೋಗ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯ ಪಿ. ಎಂ. ನವೀದುದ್ದೀನ್, ಐಸಿಟಿಸಿ ಆಪ್ತ ಸಮಾಲೋಚಕರು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ನಂದಾಜ್ಯೋತಿ, ಎಫ್‍ಐಸಿಟಿಸಿ ಮೊಳಕಾಲ್ಮೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಶೋಕ ಸಿದ್ದಾಪುರ, ಸುಚೇತನ ನೆಟ್‍ವರ್ಕ್ ಸಂಸ್ಥೆ ಅಧ್ಯಕ್ಷ ರಾಮೇಗೌಡ ಹಾಗೂ ಹಿರಿಯೂರಿನ ಸಹವರ್ತಿ ಶಿಕ್ಷಕಿ ಶಿವಮ್ಮ ಅವರಿಗೆ ಇದೇ ವೇಳೆ ಸನ್ಮಾನಿಸಿ, ಗೌರವಿಸಲಾಯಿತು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಶಿವಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ ಬಸವರಾಜ್, ವಕೀಲರ ಸಂಘದ ಅಧ್ಯಕ್ಷ ಎಸ್. ವಿಜಯಕುಮಾರ್, ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್, ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ರೂಪಶ್ರೀ ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಏಡ್ಸ್ ಮುಕ್ತ ಸಮಾಜ ನಿರ್ಮಿಸಲಾಗುವುದು. ಏಡ್ಸ್ ರೋಗಿಗಳಿಗೆ ಸಮಾಜದಲ್ಲಿ ಗೌರವ ನೀಡಿ, ಏಡ್ಸ್ ನಿಯಂತ್ರಣಕ್ಕೆ ಸಹಕಾರ ನೀಡುವುದಾಗಿ ಕ್ಯಾಂಡಲ್ ಲೈಟ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಸ್ವೀಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ