ಜಾತಿ-ಧರ್ಮದ ಹೆಸರಿನಲ್ಲಿ ಸಂಘರ್ಷ ಅಪಾಯ

ಚಿತ್ರದುರ್ಗ:

        ಲಾಂಛನಗಳ ಮೇಲೆ ಧರ್ಮ ನಿಂತಿರುವುದರಿಂದ ಧರ್ಮ ಜಾತಿಗಳ ಹೆಸರಿನಲ್ಲಿ ಘರ್ಷಣೆ ನಡೆದರೆ ಭಾರತದ ಶಾಂತಿ ನೆಮ್ಮದಿಗೆ ಭಂಗ ಉಂಟಾಗಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕನವರು ಹೇಳಿದರು.

         ವಿಮುಕ್ತಿ ವಿದ್ಯಾಸಂಸ್ಥೆ, ಕರ್ನಾಟಕ ಶಾಂತಿ ಸೌಹಾರ್ಧ ವೇದಿಕೆ, ಅಲೆಮಾರಿ, ಅರೆಅಲೆಮಾರಿ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಬುಡಕಟ್ಟು ಮಹಾಸಭಾ, ಭೂಮಿತಾಯಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಐ.ಎಂ.ಎ.ಸಭಾಂಗಣದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಜನಾಂಗಗಳಿಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

        ಏಕಜಾತಿ, ಏಕನೀತಿ, ಏಕಧರ್ಮದ ಭಾರತವನ್ನು ಕಟ್ಟಬೇಕಾಗಿದೆ. ರಾಜಕಾರಣಿಗಳು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಯಾರು ಏಕಧರ್ಮದ ಭಾರತವನ್ನು ಕಟ್ಟಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಆಧುನಿಕ ಜೀವನದಲ್ಲಿ ಎಲ್ಲರೂ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಆದರೆ ದಿನನಿತ್ಯದ ಬದುಕಿಗೆ ಬೇಕಾಗಿರುವ ನೆಮ್ಮದಿ ಇಲ್ಲದಂತಾಗಿದೆ. ಪ್ರತಿಯೊಬ್ಬರು ವೈಯಕ್ತಿಕ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ನರಕವನ್ನು ಸ್ವರ್ಗ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಸ್ವರ್ಗ ಎಂದರೆ ಸ್ವಚ್ಚತೆ, ಸ್ನೇಹ, ಏಕತೆ, ಸಂತೋಷ. ಹಾಗಾಗಿ ಸ್ವಪರಿವರ್ತನೆಯಿಂದ ಜಗತ್ತನ್ನು ಪರಿವರ್ತನೆ ಮಾಡಬಹುದು ಎಂದು ತಿಳಿಸಿದರು.

       ಒಬ್ಬರನ್ನೊಬ್ಬರು ಪರಸ್ಪರ ಸ್ನೇಹ ಗೌರವದಿಂದ ಕಂಡಾಗ ಜೀವನದಲ್ಲಿ ನೆಮ್ಮದಿ ಕಾಣಬಹುದು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದ ಸಂದರ್ಭದಲ್ಲಿ ಅತ್ತೆಯರಿಂದ ಸೊಸೆಯರಿಗೆ ಸನ್ಮಾನ ಮಾಡಿಸಲಾಯಿತು. ಇದರಿಂದ ದಿನವೂ ಜಗಳವಾಡುತ್ತಿದ್ದ ಅತ್ತೆ ಸೊಸೆಯರ ಮನಸ್ಸು ಪರಿವರ್ತಿಸಿದಂತಾಯಿತು. ಪ್ರೀತಿ, ಸ್ನೇಹಕ್ಕೆ ಶತ್ರುಗಳನ್ನು ಗೆಲ್ಲುವ ಶಕ್ತಿಯಿದೆ. ಭಾರತ ಸ್ವರ್ಗವಾಗಬೇಕಾದರೆ ನಾರಿಯರಿಂದ ಮಾತ್ರ ಸಾಧ್ಯ, ಪ್ರಮುಖ ನದಿಗಳಿಗೆ ಹೆಣ್ಣಿನ ಹೆಸರನ್ನಿಡಲಾಗಿದೆ. ನಾರಿಗೆ ನದಿಯಂತೆ ಹರಿಯುವ ಶಕ್ತಿಯಿದೆ. ವಿದ್ಯೆ ಮತ್ತು ಹಣಕ್ಕೆ ಸರಸ್ವತಿ, ಲಕ್ಷ್ಮಿಯನ್ನು ಪೂಜಿಸಲಾಗುವುದು. ಮಹಿಳೆಯರು ಕೂಡ ಮೊದಲು ಜೀವನದ ಮಹತ್ವ ತಿಳಿದುಕೊಳ್ಳಬೇಕು ಎಂದರು.

       ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಜನಾಂಗದ ಅಧ್ಯಕ್ಷ ನಾಗರಾಜ್, ವಿಮುಕ್ತಿ ವಿದ್ಯಾಸಂಸ್ಥೆಯ ಆರ್.ವಿಶ್ವಸಾಗರ್, ಅನ್ನಪೂರ್ಣಮ್ಮ ವಿಶ್ವಸಾಗರ್, ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್, ರಂಗಪ್ಪ, ಕೃಷ್ಣಪ್ಪ, ಮಹಮದ್ ನೂರುಲ್ಲಾ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link