ಚಿತ್ರದುರ್ಗ:
ಸಂವಿಧಾನದಲ್ಲಿ ಮೀಸಲಾತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು, ಕೆಲವರು ಅನಗತ್ಯವಾಗಿ ಪರಿಶಿಷ್ಟರ ಪಟ್ಟಿಯಿಂದ ಭೋವಿ, ಲಂಬಾಣಿ ಸಮುದಾಯಗಳನ್ನು ತೆಗೆದು ಹಾಕಬೇಕು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ಅದರ ತಂಟೆಗೆ ಬಂದರೆ ಸಹಿಸುವುದಿಲ್ಲ ಎಂದು ಹೊಳಲ್ಕೆರೆ ತಾಲ್ಲೂಕು ಹಮ್ ಗೋರ್ ಬಂಜಾರ ಸಂಘದ ಮುಖಂಡ ಜಯಸಿಂಹ ಖಾಟ್ರೋತ್ ಆರೋಪಿಸಿದರು.
ಹೊಳಲ್ಕೆರೆ ತಾಲ್ಲೂಕು ಹಮ್ ಗೋರ್ ಬಂಜಾರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರ ಚಳುವಳಿಯ ನೇತೃತ್ವ ವಹಿಸಿ ಮಾತನಾಡಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿ ನೂರಾ ಒಂದು ಜಾತಿಗಳಿಗೆ ಸಂವಿಧಾನದಲ್ಲಿ ಸೇರಿಸುವ ಮೂಲಕ ಪರಿಶಿಷ್ಟ ಜಾತಿಯ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಆದರೆ ಕೆಲವು ಹಿತಾಸಕ್ತಿಗಳು ಸುಪ್ರೀಂ ಕೋರ್ಟ್‍ಗೆ ಅರ್ಜಿಯೊಂದನ್ನು ಸಲ್ಲಿಸುವ ಮೂಲಕ ಭೋವಿ, ಲಂಬಾಣಿ, ಕೊರಚ, ಕೊರಮ, ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆದು ಹಾಕಬೇಕೆಂದು ಮನವಿ ಮಾಡಿಕೊಂಡಿದ್ದು, ಆದರೆ ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್‍ನ ವ್ಯಾಪ್ತಿಗೆ ಬಾರದೇ ಇರುವುದರಿಂದ ಪರಿಶಿಷ್ಟ ಜಾತಿಯ ಆಯೋಗಕ್ಕೆ ಸೂಚನೆ ನೀಡಿ, ಈ ಸಮಸ್ಯೆಯನ್ನು ಆಯೋಗದ ಹಂತದಲ್ಲಿಯೇ ಬಗೆಹರಿಸಬೇಕೆಂದು ಮಾರ್ಗದರ್ಶನ ನೀಡಲಾಗಿದ್ದರೂ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಪರಿಶಿಷ್ಟ ಜಾತಿಯ ಒಳಗಿನ ಐಕ್ಯತೆಗೆ ಧಕ್ಕೆ ತರುವ ಉದ್ದೇಶದಿಂದ ಮೀಸಲಾತಿಯಿಂದ ಭೋವಿ, ಲಂಬಾಣಿ, ಕೊರಚ, ಕೊರಮ ಜನಾಂಗಗಳನ್ನು ತೆಗೆದು ಹಾಕಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದು ಸುಳ್ಳು ಅಪಪ್ರಚಾರಗಳನ್ನು ಕೈಗೊಂಡಿದ್ದಾರೆ. ಅಂತಹವರ ವಿರುದ್ಧ ಸರ್ಕಾರ ಮತ್ತು ನ್ಯಾಯಾಲಯ ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಭೋವಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಲಕ್ಷ್ಮಣ್ ಅವರು ಮಾತನಾಡಿ, ಮೀಸಲಾತಿ ಸಂವಿಧಾನ ಬದ್ಧ ಹಕ್ಕಾಗಿದ್ದು, ಮೀಸಲಾತಿಯಿಂದ ತೆಗೆದುಹಾಕಲು ಮತ್ತು ಸೇರಿಸಲು ಲೋಕಸಭೆಗೆ ಮಾತ್ರ ಅಧಿಕಾರವಿದ್ದು, ಇನ್ನುಳಿದಂತೆ ಶಿಫಾರಸ್ಸು ಮಾಡುವಂತಹ ವ್ಯವಸ್ಥೆಗಳಾಗಿವೆ. ಆದಾಗ್ಯೂ ಕೆಲವು ಸುಪ್ರೀಂ ಕೋರ್ಟ್ ಹೆಸರು ಹೇಳಿಕೊಂಡು ಕೇಂದ್ರ ಪರಿಶಿಷ್ಟ ಆಯೋಗದ ಹೆಸರು ಹೇಳಿಕೊಂಡು ಹಸಿ ಹಸಿ ಸುಳ್ಳಿನ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಕಾನೂನು ವಿರೋಧಿ ಕೃತ್ಯವಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯ ಎಲ್ಲಾ ಜನಾಂಗಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಾಗಿವೆ. ಆ ಕಾರಣಕ್ಕಾಗಿ ಮೀಸಲಾತಿ ಸೌಲಭ್ಯ ಪಡೆದು ಕೊಳ್ಳುವುದು ಈ ಸಮುದಾಯಗಳಿಗೆ ಸಂವಿಧಾನ ಬದ್ಧ ಹಕ್ಕಾಗಿದೆ ಎಂದು ಹೇಳಿದರು.
ಪತ್ರ ಚಳುವಳಿಯ ನೇತೃತ್ವವನ್ನು ಹಮ್ ಗೋರ್ ಬಂಜಾರ ಸಂಘದ ತಾಲ್ಲೂಕು ಅಧ್ಯಕ್ಷ ವೇದಮೂರ್ತಿ ನಾಯ್ಕ, ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷೆ ಸುಜಾತ ಧನಂಜಯ ನಾಯ್ಕ, ರಾಜಾನಾಯ್ಕ, ಪರಮೇಶ್ವರ ನಾಯ್ಕ್, ಶಿವಗಂಗ ಗ್ರಾಮಪಂಚಾಯಿತಿ ಸದಸ್ಯೆ ಶ್ರೀಮತಿ ಪಾರ್ವತಿ ಲೋಕೇಶ್ ನಾಯ್ಕ್, ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಸಿಂಹ ಖಾಟ್ರೋತ್, ಸುರೇಶ್‍ಬಾಬು, ರಾಜಶೇಖರ್, ಲೀಲಾಬಾಯಿ, ಕೋಕಿಲಾ ಬಾಯಿ, ನರೇನಹಳ್ಳಿ ಅರುಣ್‍ಕುಮಾರ್ ಮುಂತಾದವರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರಗಳನ್ನು ಹೊಳಲ್ಕೆರೆ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಇರುವ ಡಬ್ಬಕ್ಕೆ ಹಾಕುವ ಮೂಲಕ ತಮ್ಮ ಹಕ್ಕುಗಳ ಪ್ರತಿಪಾದನೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
