ಶಿರಾ
ಏಡ್ಸ್ ಅನ್ನುವುದು ಒಂದು ಮಾರಕ ರೋಗವಾಗಿದ್ದರೂ, ಈ ರೋಗಕ್ಕೆ ತುತ್ತಾದವರನ್ನು ಕಂಡು ಅವರನ್ನು ತುಚ್ಚ ಭಾವನೆಗಳಿಂದ ಕಾಣುವುದನ್ನು ದೂರಗೊಳಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮೊಹಮದ್ ಆರೀಫುಲ್ಲಾ ತಿಳಿಸಿದರು.
ನಗರದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರದಂದು ಆರೋಗ್ಯ ಇಲಾಖೆ, ತಾ.ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಏಡ್ಸ್ ದಿನಾಚರಣಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ರೋಗಳನ್ನು ನಾವು ಉದ್ದೇಶಪೂರ್ವವಾಗಿ ಸ್ವೀಕಾರ ಮಾಡುವುದಿಲ್ಲ. ಅದೆಷ್ಟೋ ರೋಗಗಳು ನಮಗೆ ಅರಿವಿಲ್ಲದಂತೆಯೇ ಅಂಟಿಕೊಳ್ಳಲಿದ್ದು ಅದಕ್ಕೆ ಪರಿಹಾರ ಹುಡುಕಿಕೊಳ್ಳಬೇಕಾದರೆ, ಚಿಕಿತ್ಸೆಯೊಂದೇ ಮಾರ್ಗ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಧನಲಕ್ಷ್ಮೀ ಮಾತನಾಡಿ, ಯಾವುದೇ ರೋಗಗಳು ನಮ್ಮ ಕಣ್ಣಿಗೆ ಕಂಡಾಗ ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ಸಮಗ್ರವಾದ ಪರೀಕ್ಷೆಗೆ ಒಳಪಡಬೇಕು. ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೀತಾ ಕುಂಬಾರ ಮಾತನಾಡಿ, ಏಡ್ಸ್ ಒಂದು ಮಾರಕ ರೋಗವಾದರೂ ಒಂದಷ್ಟು ವರ್ಷಗಳ ಅವಧಿಯಲ್ಲಿ ಉತ್ತಮವಾದ ಜೀವನ ಸಾಗಿಸಲು ಸೂಕ್ತ ಚಿಕಿತ್ಸೆಯಿಂದ ಸಾಧ್ಯವಿದೆ. ಅಂತಹ ರೋಗಿಗಳು ಎದೆಗುಂದಬಾರದು ಎಂದು ಸಲಹೆ ನೀಡಿದರು.
ತಾ.ವಕೀಲರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಎಸ್.ವಿ.ಮಂಜುನಾಥ್, ಕಾರ್ಯದರ್ಶಿ ಸಣ್ಣಕರೇಗೌಡ, ಸರ್ಕಾರಿ ವಕೀಲರಾದ ರಂಗನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ, ಡಾ.ಡಿ.ಎಂ.ಗೌಡ, ಡಾ.ಜಗದೀಶ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ