ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡ ಮರೆಯಬಾರದು : ಬಿಇಓ

ಮಧುಗಿರಿ

         ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡ ಭಾಷೆ ಬದುಕಾಗಿರಬೇಕು. ನಮ್ಮ ಭಾಷೆಯನ್ನು ಯಾರೂ ಮರೆಯಬಾರದು ಎಂದು ಬಿಇಓ ನರಸಿಂಹಯ್ಯ ಅಭಿಪ್ರಾಯಪಟ್ಟರು.

         ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಕಾರ್ಡಿಯಲ್ ಆಂಗ್ಲ ಶಾಲೆಯ 2 ದಿನಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಕನ್ನಡ ನಮಗೆ ಎಲ್ಲವನ್ನೂ ಕೊಟ್ಟಿದೆ. ಶಿಕ್ಷಕರು ಮಾನವೀಯ ಮೌಲ್ಯಯುತವಾದ ಕನ್ನಡ ಪರವಾದ ಶಿಕ್ಷಣವನ್ನು ಮಕ್ಕಳ ಮನದಲ್ಲಿ ಉಳಿಯುವಂತೆ ಮಾಡಬೇಕು. ಇಂತಹ ಕಾರ್ಯಗಳಿಂದ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಿ ದಂತಾಗುತ್ತದೆ. ಕಳೆದ ಪರೀಕ್ಷೆಗಳ ಫಲಿತಾಂಶದಲ್ಲಿ ಸುಮಾರು 19 ವರ್ಷಗಳಿಂದಲೂ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಈಗಲೂ ಉತ್ತಮ ಫಲಿತಾಂಶ ದಾಖಲಿಸುತ್ತಿರುವುದು ಶ್ಲಾಘನೀಯ.

         ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಭರದಲ್ಲಿ ಕನ್ನಡವನ್ನು ಮರೆಯಬಾರದು. ನರ್ಸರಿಯಿಂದ 5ನೆ ತರಗತಿವರೆಗಿನ ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಂತಿದ್ದು, ಆ ಗೋಡೆಗೆ ಏನು ಎಸೆದರೂ ಹಿಡಿದು ಕೊಳ್ಳುವಂತಹ ಶಕ್ತಿ ಹೊಂದಿರುತ್ತದೆ. ಅದೇ ಮಾದರಿಯಲ್ಲಿ ಈ ಮಕ್ಕಳು ತಮ್ಮದೇ ಆದಂತಹ ಬುದ್ಧಿ ಶಕ್ತಿಯನ್ನು ಹೊಂದಿರುತ್ತಾರೆ ಎಂದರು.

         ವಿದ್ಯಾರ್ಥಿಗಳಿಂದ ಇಂಟರ್ ನ್ಯಾಷನಲ್ ಫೋಕ್, ಮಣಿಪುರಿ, ಕಥಕ್, ಯಕ್ಷಗಾನ ಮತ್ತು ಪಂಚ ಭೂತಗಳನ್ನು ಹೋಲುವಂತಹ, ಕಾರ್ಗಿಲ್ ವಿಜಯೋತ್ಸವ, ಶ್ರೀನಿವಾಸ ಕಲ್ಯಾಣ ನೃತ್ಯಗಳು ಹಾಗೂ ದಂಡಿಯಾತ್ರೆ, ಉಕ್ಕಿನ ಮನುಷ್ಯ ಸರದಾರ್ ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆಯ ಎಲ್ ಇ ಡಿ ಪ್ರದರ್ಶನಗಳು, ಯುಕೆಜಿ ವಿದ್ಯಾರ್ಥಿಗಳಿಂದ ಒನಕೆ ಓಬವ್ವ ನೃತ್ಯ ಪ್ರದರ್ಶನ, 9ನೇ ತರಗತಿಗಳ ವಿದ್ಯಾರ್ಥಿಗಳಿಂದ ನೀರು ಸಂರಕ್ಷಣೆಯ ಬಗ್ಗೆ ಪ್ರದರ್ಶನಗಳು ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರನ್ನು ರಂಜಿಸಿದವು.

           ಈ ಸಂದರ್ಭದಲ್ಲಿ ಶ್ರೀ ಮಾರುತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಹಾಗೂ ಮಾಜಿ ಪುರಸಭಾಧ್ಯಕ್ಷ ಎಂ.ಕೆ.ನಚಿಜುಂಡರಾಜು, ಖಜಾಂಚಿ ಡಿ.ಒ.ನಾಗರಾಜು, ಸಂಸ್ಥೆಯ ನಿರ್ದೆಶಕರಾದ ಶೋಭಾ, ಮಂಜುಳಾ, ಶೈಲಶ್ರೀ, ಮುಖ್ಯ ಶಿಕ್ಷಕಿ ಮಂಜುಳಾ ನಾಗಭೂಷಣ್, ದೈಹಿಕ ಶಿಕ್ಷಕರಾದ ಜಯರಾಂ, ರಾಜೇಶ್ ಹಾಗೂ ಬೆಂಗಳೂರಿನ ಎಜುಶೈನ್ ಸಂಸ್ಥೆಯ ಕಿರಣ್ ಕುಮಾರ್, ಆಡಳಿತ ಸಿಬ್ಬಂದಿ, ಪೋಷಕರು ಮತ್ತು ಸಾರ್ವಜನಿಕರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link