ಹಂಚಿಕೆಯಾಗದ ಕೆರೆಗಳಿಗೆ ಕಾನೂನು ಬಾಹಿರವಾಗಿ ನೀರು ಹರಿಸಬೇಡಿ: ಸುರೇಶ್‍ಗೌಡ

ತುಮಕೂರು
    ಮುಖ್ಯಮಂತ್ರಿಗಳ ಆದೇಶದಂತೆ ಬಿಡಲಾದ ನೀರು ಕುಡಿಯುವ ನೀರಿನ ಬಳಕಗೆ ಮಾತ್ರ. ಆದರೆ ಅದನ್ನು ಕಾನೂನು ಬಾಹಿರವಾಗಿ ಕುಡಿಯುವ ನೀರಿಗೆ ಹೊರತು ಪಡಿಸಿ ಹಂಚಿಕೆಯಾಗದ ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದು ಮಾಜಿ ಶಾಸಕ ಬಿ.ಸುರೇಶ್‍ಗೌಡ ಆರೋಪ ಮಾಡಿದರು.
    ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ನಾಲೆ ಮೂಲಕ 20 ದಿನಗಳಿಂದ ಹೇಮಾವತಿ ನೀರು ಬರುತ್ತಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಆದರೆ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಅರ್ಥವಾಗಿಲ್ಲ ಅನಿಸುತ್ತಿದೆ. ಅದಕ್ಕೆ ಯಾವ ಕೆರೆಗಳಿಗೆ ಅಲೋಕೇಶನ್ ಆಗಿಲ್ಲವೋ ಅಂತಹ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ತಕ್ಷಣವೇ ಅದನ್ನು ನಿಲ್ಲಿಸಿ ಕುಡಿಯುವ ನೀರಿನ ಕೆರೆಗಳಿಗೆ ಮೊದಲು ನೀರು ಬಿಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. 
     ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮೊದಲು ನೀರನ್ನು ಹರಿಸಬೇಕಿದೆ. ಈಗಾಗಲೇ ತುಮಕೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ 15 ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತಿದೆ. ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಇಲ್ಲಿಯವರೆಗೆ ಒಂದು ತೊಟ್ಟು ನೀರನ್ನು ಬಿಟ್ಟಿಲ್ಲ. ಬದಲಿಗೆ ಕುಡಿಯುವ ನೀರು ಹಂಚಿಕೆಯಾಗದ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಇದು ನಿಲ್ಲಿಸಬೇಕು. ಸರ್ಕಾರದ ಆದೇಶ ಮೀರಿ ಮಾಡುವ ಹುನ್ನಾರಗಳಿಗೆ ಖಂಡಿಸಿ ಪ್ರತಿಭಟನೆ ಮಾಡಲು ಸಿದ್ದರಿದ್ದೇವೆ ಎಂದರು.
     ತುಮಕೂರಲ್ಲಿ ಶೇ.80 ರಷ್ಟು ಕೆರೆಗಳಿಗೆ ಕಾನೂನು ಬಾಹಿರವಾಗಿ ನೀರು ತುಂಬಿಸಲಾಗುತ್ತಿದೆ. ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕು. ಕುಡಿಯುವ ನೀರಿನ ಕೆರೆಗಳು ತುಂಬಿದ ಬಳಿಕ ಕಾನೂನು ಬಾಹಿರವಾಗಿ ನೀರು ಹರಿಸಿಕೊಳ್ಳಲಿ. ಈಗಾಗಲೇ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ,  ತಿಪಟೂರು ಕಡೆ ನೀರು ತೆಗೆದುಕೊಂಡು ಹೋಗಿ ಅಲ್ಲಿನ ಕೆರೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಕಾನೂನು ಉಲ್ಲಂಘನೆಯಾದಲ್ಲಿ ಅದಕ್ಕೆ ಜಿಲ್ಲಾಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹೆಬ್ಬೂರು, ಗೂಳೂರು ಏತನೀರಾವರಿ ಇದ್ದರೂ ಕಳೆದ ವರ್ಷ ಒಂದು ಹನಿ ನೀರು ಬಿಟ್ಟಿಲ್ಲ. ಸುಮಾರು 70 ಕೋಟಿ ವೆಚ್ಚ ಖರ್ಚು ಮಾಡಿದ್ದರೂ ಈ ಕೆರೆಗಳಿಗೆ ನೀರು ಬಿಡುವಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಹೇಮಾವತಿ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆ. ಕುಣಿಗಲ್‍ಗೆ ನೀರು ಹೋಗುತ್ತಿದ್ದರೂ ಇಲ್ಲಿನ ಬಹುಗ್ರಾಮ ಕುಡಿಯುವ ಯೋಜನೆಗಳಿಗೆ ನೀರು ಬಿಟ್ಟಿಲ್ಲ. ಬೆಳ್ಳಾವಿ, ಅರಿಯೂರು, ನಾಗವಲ್ಲಿ, ಬಳ್ಳಗೆರೆ, ದೊಡ್ಡನಾರವಂಗಲ.
    ಹೊಳಕಲ್ಲು, ಹೊನ್ನುಡಿಕೆ, ಗೂಳೂರು ಈ ಭಾಗದ ಬಹುಗ್ರಾಮ ಯೋಜನೆಗಳಿಗೆ ನೀರು ಹರಿಸಿಲ್ಲ. ಹೆಬ್ಬೂರು ಗೂಳೂರಿಗೆ .30ಟಿಎಂಸಿ ಹಂಚಿಕೆ ಮಾಡಲಾಗಿದೆ. ಈ ನೀರನ್ನು ಬಿಡಿಸಿಲ್ಲ ಎಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
     ಹೆಬ್ಬೂರು, ಗೂಳೂರು ಬಳಿ ಇರುವ ಲಿಫ್ಟ್ ಇರಿಗೇಶನ್‍ನಲ್ಲಿ ಮೋಟಾರ್ ಆನ್ ಮಾಡಿಲ್ಲ. ಏನಕ್ಕೆ ಎಂಬುದು ತನಿಖೆಯಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಬಿ.ನಂದೀಶ್, ತಾಪಂ ಅಧ್ಯಕ್ಷ ಗಂಗಾಂಜನೇಯ, ಜಿ.ಪಂ ಸದಸ್ಯ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ, ಮುಖಂಡರಾದ ನಾಗರಾಜು, ರಾಮಚಂದ್ರಪ್ಪ, ರಂಗನಾಯಕ್, ಶಾಂತ ಕುಮಾರ್, ರಾಮಸ್ವಾಮಿ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link