ಸರ್ಕಾರಿ ಸೌಲಭ್ಯ ಪಡೆಯಲು ಹಿಂಜರಿಕೆ ಬೇಡ;ಡಿಸಿ

ಚಿತ್ರದುರ್ಗ;
     ಬಡ ಜನರ ಅಭ್ಯುದಯಕ್ಕಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಸವಲತ್ತುಗಳನ್ನು ಪಡೆಯಲು ಸಾರ್ವಜನಿಕರು ಹಿಂಜರಿಯಬಾರದು.  ಯೋಜನೆಗೆ ಅರ್ಹರಿದ್ದಲ್ಲಿ ಕೂಡಲೆ ಸೌಲಭ್ಯ ಪಡೆದು, ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
 
    ಚಿತ್ರದುರ್ಗ ತಾಲ್ಲೂಕು ಸಿಂಗಾಪುರ ಕಾವಲ್‍ಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಜನಸ್ಪಂದನ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
    ಗ್ರಾಮೀಣ ಪ್ರದೇಶಗಳಲ್ಲಿನ ಜನರ ಸಮಸ್ಯೆಗಳನ್ನು ಅರಿತು, ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮಾಡುವುದು,  ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವುದು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳ ಮಾಹಿತಿಯನ್ನು ಜನರಿಂದಲೇ ಪಡೆದು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜನಸ್ಪಂದನ ಸಭೆಗಳನ್ನು ಗ್ರಾಮಗಳಲ್ಲಿ ಏರ್ಪಡಿಸಲಾಗುತ್ತಿದೆ ಎಂದರು
 
     ಕೃಷಿ, ತೋಟಗಾರಿಕೆ, ಕಾರ್ಮಿಕ, ಆರೋಗ್ಯ ಹೀಗೆ ಹಲವಾರು ಇಲಾಖೆಗಳಲ್ಲಿ ಜನರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳಿವೆ.  ನರೇಗಾ ಯೋಜನೆಯಡಿ ಬಹಳಷ್ಟು ಉಪಯುಕ್ತ ಯೋಜನೆಗಳಿವೆ,  ಆದರೆ ಜಿಲ್ಲೆಯಲ್ಲಿ ಜನರು ಈ ಯೋಜನೆಗಳ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ.  ಮಾಹಿತಿಯ ಕೊರತೆಯೋ ಅಥವಾ ಜನರಲ್ಲಿ ನಿರಾಸಕ್ತಿಯೋ ತಿಳಿಯುತ್ತಿಲ್ಲ.  ಆದರೆ ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರು ಮುಂದೆ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.  
     ಜಿಲ್ಲೆಯಲ್ಲಿ 06 ತಿಂಗಳಿನಿಂದ 06 ವರ್ಷ ವಯೋಮಿತಿಯೊಳಗಿನ ಎಲ್ಲ ಅಂಗವಿಕಲರನ್ನು ಪತ್ತೆ ಮಾಡಲು ವಿಶೇಷ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಾಕಿಕೊಳ್ಳಲಾಗಿದೆ.  ಈ ರೀತಿ ಗುರುತಿಸಲಾದ ಅಂಗವಿಕಲ ಮಕ್ಕಳಿಗೆ ಇಲಾಖೆ ವತಿಯಿಂದಲೇ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಮಂಜೂರು ಮಾಡುವ ರೀತಿ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ತರಬೇತಿಗೆ ಮಹಿಳೆಯರಿಗೆ ಸಲಹೆ : 
     ಗ್ರಾಮೀಣ ಮಟ್ಟದಲ್ಲಿ ವಿದ್ಯಾವಂತ ಮಹಿಳೆಯರು, ಉದ್ಯೋಗ ಮಾಡಲು ಆಸಕ್ತಿ ಇದ್ದಲ್ಲಿ, ಅಂತಹವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಲ್ಲಿ, ಅಂತಹವರಿಗೆ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ, ಬ್ಯಾಂಕ್‍ಗಳಿಂದ ಅಗತ್ಯ ಸಾಲ ಸೌಲಭ್ಯ ದೊರಕಿಸಲಾಗುವುದು.  ಆಸಕ್ತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಸಂಪರ್ಕಿಸುವಂತೆ ತಿಳಿಸಿದರು.
 
    ತಾಲ್ಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜು ಅವರು ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳು, ವಿವಿಧ ಸೌಲಭ್ಯಗಳ ಮಾಹಿತಿ ಗ್ರಾಮೀಣ ಜನರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಪ್ರತಿ ತಿಂಗಳು ಗ್ರಾಮಗಳಲ್ಲಿ ಹಮ್ಮಿಕೊಳ್ಳುತ್ತಿರುವ ಜನಸ್ಪಂದನ ಕಾರ್ಯಕ್ರಮ ನಿಜಕ್ಕೂ ಉಪಯುಕ್ತವಾಗಿದೆ ಎಂದರು
    ತಹಸಿಲ್ದಾರ್ ವೆಂಕಟೇಶಯ್ಯ ಅವರು ಮಾತನಾಡಿ, ಗ್ರಾಮ ಪಂಚಾಯತ್‍ಗಳಲ್ಲಿ ರೈತರಿಗೆ ಪಹಣಿ ವಿತರಿಸುವ ಸೌಲಭ್ಯ ಲಭ್ಯವಿದ್ದರೂ ವಿತರಿಸುತ್ತಿಲ್ಲ, ಆಧಾರ್ ತಿದ್ದುಪಡಿ ಕಾರ್ಯ ಮಾಡುತ್ತಿಲ್ಲ.  ಇದರಿಂದಾಗಿ ಸಾರ್ವಜನಿಕರು ನೂರಾರು ರೂ. ಖರ್ಚು ಮಾಡಿಕೊಂಡು ಜಿಲ್ಲಾ ಕೇಂದ್ರಕ್ಕೆ, ತಹಸಿಲ್ದಾರರ ಕಚೇರಿಗೆ ಬರುತ್ತಿದ್ದಾರೆ.  ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಪಹಣಿ ವಿತರಿಸುವುದು ಹಾಗೂ ಆಧಾರ್ ತಿದ್ದುಪಡಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದರು. 
    ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ನಂದಗಾವಿ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ನಿರ್ಮಲಮ್ಮ, ಉಪವಿಭಾಗಾಧಿಕಾರಿ ಪ್ರಸನ್ನ, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap