ಬೆಳಗಾವಿ
ಸಚಿವ ಸಂಪುಟ ವಿಸ್ತರಣೆ ಮಾಡುವ ಜತೆಗೆ ಕಾಂಗ್ರೆಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಜತೆ ಚರ್ಚೆ ನಡೆಸುವುದಾಗಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಅಭಯ ನೀಡುವ ಮೂಲಕ ಪಕ್ಷದಲ್ಲಿ ಎದ್ದಿರುವ ಬಂಡಾಯ ಶಮನಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಯಾವುದೇ ಊಹಾಪೋಹಳಿಗೆ ಕಿವಿಗೊಡಬೇಡಿ. ನಿಮ್ಮ ಜತೆ ನಾನಿದ್ದೇನೆ. 22 ರಂದು ಮಂತ್ರಿಮಂಡಲ ವಿಸ್ತರಣೆಯಾಗಲಿದೆ. 21ಕ್ಕೆ ದೆಹಲಿಗೆ ತೆರಳುವುದಾಗಿ ಸಿದ್ದರಾಮಯ್ಯ ಶಾಸಕರಿಗೆ ಭರವಸೆ ನೀಡಿ ಬಂಡಾಯ ಶಮನಗೊಳಿಸುವಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದಾರೆ.
ಇದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಧನಿ ಗೂಡಿಸಿದ್ದು, ಬಹುತೇಕ ಇದೇ 22 ರಂದು ಮಂತ್ರಿಮಂಡಲ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಆರಂಭವಾಗಿದ್ದು, ಉತ್ತರ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ಸಂಭವವಿದೆ.
ಮಂತ್ರಿ ಮಂಡಲ ವಿಸ್ತರಣೆ ಮಾಡಲು ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಕೂಡ ಸಮ್ಮತಿಸಿದ್ದು, ಇದರಿಂದಾಗಿ ಈ ವಾರದ ವಿಧಾನಮಂಡಲ ಅಧಿವೇಶನ ಸುಗಮವಾಗಿ ನಡೆಯುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕ ಭಾಗಕ್ಕೆ ಈ ಬಾರಿ ಸೂಕ್ತ ಪ್ರಾತಿನಿಧ್ಯೆ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇಂದು ನಡೆದ ಸಭೆಯಲ್ಲಿ ನಿರೀಕ್ಷೆಯಂತೆ ಉತ್ತರ ಕರ್ನಾಟಕ ಭಾಗದ ಶಾಸಕರಿಂದ ಸೂಕ್ತ ಪ್ರಾತಿನಿಧ್ಯೆ ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು. ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಪಾಲಿನ 6 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು ಎಂಬ ಪ್ರಬಲ ಕೂಗು ಹೇಳಿ ಬಂದಿದೆ.
ಸಭಾಪತಿ ಆಯ್ಕೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಇದಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೇ ಕಾರಣ ಎಂದು ಕೆಲ ಶಾಸಕರು ನೇರವಾಗಿ ಆರೋಪ ಮಾಡಿದ್ದಾರೆ. ಆದರೆ ಈ ಬಾರಿ ಮಂತ್ರಿಮಂಡಲ ವಿಸ್ತರಣೆಯಲ್ಲಿ ಇದು ಪುನರಾವರ್ತನೆಯಾಗಬಾರದು ಎಂದು ಈ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯನ್ನು ಪದೇ ಪದೆ ಮುಂದೂಡುತ್ತಿರುವ ಬಗ್ಗೆಯೂ ಸಚಿವ ಸ್ಥಾನ ಆಕಾಂಕ್ಷಿಗಳು ಸಭೆಯಲ್ಲಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರನ್ನು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಾಧಾನಪಡಿಸಿ, ನಿಗದಿಯಂತೆ ಸಂಪುಟ ವಿಸ್ತರಣೆ ನಡೆಯಲಿದೆ, ಅರ್ಹತೆ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಆಧಾರದಲ್ಲಿ ಸಂಪುಟ ಹಾಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಹೈಕಮಾಂಡ್ ಒಪ್ಪಿಗೆ ಸಿಕ್ಕಿದ ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಭೆಯಲ್ಲಿ ಕೆಲ ಶಾಸಕರು ಕ್ಷೇತ್ರಗಳ ಸಮಸ್ಯೆ ಹಾಗೂ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಈ ಸಂಗತಿಯನ್ನು ಮುಖ್ಯಮಂತ್ರಿ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ. ಡಿ.22ಕ್ಕೆ ಸಂಪುಟ ವಿಸ್ತರಣೆಯಾಗಲಿದೆ, ಈ ಸಂಬಂಧ ಹೈಕಮಾಂಡ್ ಜತೆಗೆ ಚರ್ಚಿಸಲು ದೆಹಲಿಗೆ ಹೋಗುತ್ತೇವೆ ಎಂದರು.
ಸಚಿವಾಕಾಂಕ್ಷಿಗಳಾದ ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್, ರೋಷನ್ ಬೇಗ್ ಇನ್ನೂ ಕೆಲವು ಹಿರಿಯ ಶಾಸಕರು ಸಭೆಯಿಂದ ದೂರ ಉಳಿದಿದ್ದರು.
ಸಭೆಯಲ್ಲಿ ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರದ ಆಡಳಿತ ನಿರ್ವಹಣೆ, ಅನುದಾನ ಹಂಚಿಕೆ, ಕಾಂಗ್ರೆಸ್ ಶಾಸಕರ ಅವಗಣನೆ ಮತ್ತಿತರ ಅಂಶಗಳ ಬಗ್ಗೆ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಗಮನ ಸೆಳೆದಿದ್ದಾರೆ. ಮೊದಲ ಹಂತದಲ್ಲಿ 20 ನಿಗಮ ಮಂಡಳಿಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ಇನ್ನೂ ನೇಮಕಾತಿ ನಡೆಯುತ್ತಿಲ್ಲ. ನಿಗಮ ಮಂಡಳಿಗಳಿಗೆ ವಿಧಾನ ಪರಿಷತ್ ಸದಸ್ಯರನ್ನು ಸಹ ಪರಿಗಣಿಸಬೇಕು ಎಂದು ಕೆಲ ಪರಿಷತ್ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ಈ ಬೇಡಿಕೆಗೆ ಸಿದ್ದರಾಮಯ್ಯ ಎರಡನೇ ಹಂತದ ರಾಜಕೀಯ ನೇಮಕಾತಿ ಸಂದರ್ಭದಲ್ಲಿ ಪರಿಷತ್ ಸದಸ್ಯರನ್ನು ಸಹ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಅನುದಾನ ಹಂಚಿಕೆಯಲ್ಲಿ ತಾರತಮ್ಯವೆಸಗಲಾಗುತ್ತಿದೆ. ಜೆಡಿಎಸ್ ಗೆ ಮನ್ನಣೆ ನೀಡಿ, ಕಾಂಗ್ರೆಸ್ ಶಾಸಕರನ್ನು ಮುಖ್ಯಮಂತ್ರಿಗಳು ತಾರತಮ್ಯದಿಂದ ನೋಡುತ್ತಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಬೇಕು ಎಂದು ಬೆಂಗಳೂರಿನ ಕೆಲ ಶಾಸಕರು ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ದೂರು ನೀಡಿದರು ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ