ಸಂಪುಟ ವಿಸ್ತರಣೆ : ಊಹಾಪೋಹಗಳಿಗೆ ಕಿವಿಗೊಡಬೇಡಿ: ಸಿಎಂ

ಬೆಂಗಳೂರು

    ಸಂಪುಟ ವಿಸ್ತರಣೆಯ ಕುರಿತು ಕೇಳಿ ಬರುತ್ತಿರುವ ಊಹಾ-ಪೋಹಗಳು ಸರಿಯಲ್ಲ, ಇವೆಲ್ಲ ನಿರಾಧಾರ ಸಾಧ್ಯವಾದರೆ ನಾಳೆಯೇ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

   ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರು ದೆಹಲಿಗೆ ಬಂದು ಭೇಟಿ ಮಾಡುವಂತೆ ಸಮಯಾವಕಾಶ ಕೊಟ್ಟಿದ್ದರು. ಆದರೆ, ಇಂದು ರಾಯಚೂರಿನಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಇದುದ್ದರಿಂದ ನಾನು ದೆಹಲಿಗೆ ಹೋಗಿ ಅಮಿತ್ ಶಾರವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದರು.

   ನಾಳೆ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ಸಾಧ್ಯವಾದರೆ ದೆಹಲಿಗೆ ತೆರಳಿ ಅಮಿತ್ ಶಾರವರ ಜತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ದಿನಾಂಕವನ್ನು ನಿಗದಿ ಮಾಡಿಕೊಂಡು ಬರುತ್ತೇನೆ ಎಂದು ಅವರು ಹೇಳಿದರು. ನಾಳೆ ದೆಹಲಿಯಲ್ಲಿ ಅಮಿತ್ ಶಾರವರ ಭೇಟಿ ಸಾಧ್ಯವಾಗದಿದ್ದರೆ ಈ ತಿಂಗಳ 17 ರಂದು ರಾಜ್ಯಕ್ಕೆ ಆಗಮಿಸುವ ಸಂದರ್ಭದಲ್ಲಿ ಅವರೊಡನೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇನೆ ಎಂದರು.

   ಸಚಿವ ಸಂಪುಟ ವಿಸ್ತರಣೆ ಕುರಿತು ಮಾದ್ಯಮಗಳಲ್ಲಿ ಏನೇನೋ ಊಹಾ-ಪೋಹ ಸುದ್ದಿಗಳು ಬರುತ್ತಿವೆ. ಅವುಗಳಲ್ಲಿ ಸತ್ಯಾಂಶವಿಲ್ಲ, ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರುಗಳೂ ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಅವರಿಗೆ ಕೊಟ್ಟಿರುವ ಭರವಸೆಯಂತೆ ನಡೆದುಕೊಳ್ಳುತ್ತೇನೆ. ಅವರನ್ನೆಲ್ಲ ಸಚಿವರನ್ನಾಗಿ ಮಾಡೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

   ದೆಹಲಿ ಚುನಾವಣೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ, ವರಿಷ್ಠರೊಡನೆ ಚರ್ಚಿಸಿ, ಸಂಪುಟ ವಿಸ್ತರಿಸುತ್ತೇನೆ ಎಂದರು.

ವಿದೇಶ ಪ್ರವಾಸಕ್ಕೆ ಸಿಎಂ

    ಸ್ವಿಡ್ಜರ್‍ಲ್ಯಾಂಡ್‍ನ ದಾವೂಸ್‍ನಲ್ಲಿ ಈ ತಿಂಗಳ 21 ರಿಂದ 24ರವರಗೂ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಪಾಲ್ಗೊಳ್ಳುವಂತೆ ಒತ್ತಡಗಳು ಬಂದಿದ್ದು, ದಾವೂಸ್ ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೇನೆ ಎಂದರು.

ರಾಯಚೂರು ವರದಿ

    ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಸಂಪುಟಕ್ಕೆ ಎಷ್ಟು ಜನರನ್ನು ಸೇರಿಸಿಕೊಳ್ಳಬೇಕು. ಉಪಚುನಾವಣೆಯಲ್ಲಿ ಗೆದ್ದಿರುವ ಎಲ್ಲರನ್ನೂ ಸಚಿವರನ್ನಾಗಿಸಬೇಕೇ? ಸೋತವರಿಗೂ ಸಚಿವ ಸ್ಥಾನ ನೀಡಬೇಕೇ? ಎಂಬುದನ್ನೆಲ್ಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರೇ ತೀರ್ಮಾನಿಸುತ್ತಾರೆ ಎಂದರು. ಯಾರೋ ಹೇಳಿದ, ಕೇಳಿದ ಮಾತ್ರಕ್ಕೆ ಎಲ್ಲರಿಗೂ ಮಂತ್ರಿಮಂಡಲದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ. ಯಾರಿಗೆ ಯಾವ ಹುದ್ದೆ ಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಸೇರಿಸಿಕೊಳ್ಳಬಾರದು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ವಿಶ್ವನಾಥ್ ಹೇಳಿದ ಮಾತ್ರಕ್ಕೆ ಎಲ್ಲರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾರವರು ಸಮಯಾವಕಾಶ ನೀಡಿದರೆ ಇಂದು ಸಂಜೆಯೇ ದೆಹಲಿಗೆ ತೆರಳಿ ನಾಳೆಯೇ ಈ ಬಗ್ಗೆ ಚರ್ಚೆ ನಡೆಸಿ, ಸಂಕ್ರಾಂತಿ ನಂತರ ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಸಂಪುಟ ವಿಸ್ತರಿಸುವ ಅಪೇಕ್ಷೆ ಹೊಂದಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ