ಹೊನ್ನಾಳಿ
ಹೊನ್ನಾಳಿ ತಾಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ ಸುಮಾರು 13,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಈ ಹಿಂದೆ ಮುಂಗಾರು ಹಂಗಾಮಿನಲ್ಲಿ ಸಹ ತುಂಗಾ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ಸಣ್ಣ ಭತ್ತದ ತಳಿಗಳಾದ ಜೆಜೆಎಲ್, ಬಿಪಿಟಿ, ಶ್ರೀರಾಮ್ ಸೋನಾ, ಆರ್‍ಎನ್‍ಆರ್ ಮುಂತಾದ ತಳಿಗಳನ್ನು ನಾಟಿ ಮಾಡಿದ್ದರು. ಅಲ್ಲದೇ, ಈ ವರ್ಷದ ಮುಂಗಾರು ಹಂಗಾಮಿನಲ್ಲಿ ತಡವಾಗಿ ಭದ್ರಾ ಡ್ಯಾಂ ತುಂಬಿದ್ದರಿಂದ ಅಲ್ಪಾವಧಿ ತಳಿಗಳಾದ ಆರ್‍ಎನ್‍ಆರ್ ಸೋನಾ ಭತ್ತದ ತಳಿಯನ್ನು ಶೇ.80ರಷ್ಟು ರೈತರು ನಾಟಿ ಮಾಡಿದ್ದರು.
ಈಗ ಬೇಸಿಗೆ ಹಂಗಾಮಿನಲ್ಲಿ ಬಿಪಿಟಿ 5204 ತಳಿಯ ಬಿತ್ತನೆ ಕೈಗೊಳ್ಳಲು ರೈತರು ಉತ್ಸುಕರಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಖಾಸಗಿ ಮಾರಾಟಗಾರರಲ್ಲಿ ಬೀಜ ಖರೀದಿಸಿ, ಸಸಿ ಮಡಿ ತಯಾರಿಸುವ ಹಂತದಲ್ಲಿದ್ದಾರೆ.
ಈ ಹಂತದಲ್ಲಿ ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಮುಂಗಾರು ಹಂಗಾಮಿನಲ್ಲಿ ಭತ್ತದ ಗದ್ದೆಗಳಲ್ಲಿ ಹಾರ್ವೆಸ್ಟರ್‍ಗಳ ಮೂಲಕ ಕೊಯ್ಲು ನಡೆಸುವಾಗ ಹಾಗೂ ಹುಲ್ಲನ್ನು ಸಂಗ್ರಹಿಸುವಾಗ ಸಾಕಷ್ಟು ಪ್ರಮಾಣದಲ್ಲಿ ಆರ್‍ಎನ್‍ಆರ್ ಸೋನಾ ತಳಿಯ ಭತ್ತದ ಬೀಜಗಳು ಉದುರಿ ಗದ್ದೆಯಲ್ಲಿ ಬಿದ್ದಿರುವುದು ಸಾಮಾನ್ಯವಾಗಿದೆ.
ಸರಿಯಾದ ರೀತಿಯಲ್ಲಿ ಗದ್ದೆ ಹಸನು ಮಾಡದಿದ್ದಲ್ಲಿ ಈ ತಳಿಯ ಭತ್ತದ ಬೀಜಗಳು ಬೇಸಿಗೆ ಹಂಗಾಮಿನಲ್ಲಿ ಬಿಪಿಟಿ 5204 ತಳಿಯೊಂದಿಗೆ ಮಿಶ್ರಣವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸಂಬವಿಸುವ ನಷ್ಟಕ್ಕೆ ಕಲಬೆರಕೆ ಭತ್ತದ ಬೀಜ ಪೂರೈಸಲಾಗಿದೆ ಎಂಬುದಾಗಿ ರೈತರು ಕೃಷಿ ಇಲಾಖೆ ಮತ್ತು ಖಾಸಗಿ ಮಾರಾಟಗಾರರಲ್ಲಿ ದೂರುತ್ತಾರೆ.
ಆದ್ದರಿಂದ, ಭತ್ತದ ಬೀಜಗಳ ಮಿಶ್ರಣವನ್ನು ತಡೆಯಲು ರೈತರು ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೊಯ್ಲು ಮಾಡಿರುವ ಹೊಲಗಳಲ್ಲಿ ನೀರನ್ನು ಬಿಟ್ಟು, ಎಂಟರಿಂದ ಹತ್ತು ದಿನಗಳವರೆಗೆ ಕಾಯಬೇಕು. ಈ ವೇಳೆ ಹಳೆಯ ಮುಂಗಾರಿನ ಹಂಗಾಮಿನ ಬೀಜಗಳು ಮೊಳಕೆಯೊಡೆದು ಸಸಿಗಳಾದಾಗ ಮತ್ತೊಮ್ಮೆ ಸಂಪೂರ್ಣವಾಗಿ ರೊಳ್ಳೆ ಹೊಡೆಯುವ ಮೂಲಕ ಹತೋಟಿ ಮಾಡಬಹುದು. ತದನಂತರ ಮಾತ್ರ ಬೇಸಿಗೆ ಹಂಗಾಮಿನ ಭತ್ತ ನಾಟಿ ಮಾಡಬಹುದು. ರೈತರು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ