ಗ್ರಂಥಾಲಯ ಸ್ಥಳಾಂತರಕ್ಕೆ ವಿರೋಧ

ಚಿಕ್ಕನಾಯಕನಹಳ್ಳಿ

       ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಖಾಲಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ಗ್ರಂಥಾಲಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ಓದುಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

          ತಾಲ್ಲೂಕಿನ 23 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. 7 ಪಂಚಾಯಿತಿಗಳಲ್ಲಿ ಮಾತ್ರ ಶಾಲಾ ಕೊಠಡಿಗಳ ಲಭ್ಯತೆ ಇಲ್ಲದೆ ಇರುವುದರಿಂದ ಗ್ರಂಥಾಲಯಗಳನ್ನು ಇರುವ ಕಚೇರಿಯಲ್ಲೇ ಮುಂದುವರೆಸಲು ತೀರ್ಮಾನಿಸಲಾಗಿದೆ.

          ಇಲಾಖೆಯ ಆದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಯಾವುದೇ ಊರುಗಳಲ್ಲಿ ಖಾಲಿ ಶಾಲಾ ಕೊಠಡಿ ಗುರುತಿಸಿ ಗ್ರಂಥಾಲಯ ಸ್ಥಳಾಂತರಿಸುವ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಈಗಾಗಲೇ ಗ್ರಂಥಾಲಯ ಹೊಂದಿರುವ ಕೆಲವು ಪಂಚಾಯ್ತಿ ಕಚೇರಿಗಳು ಗ್ರಂಥಾಲಯವನ್ನು ಕಳೆದುಕೊಳ್ಳುವಂತಾಗಿದೆ. ಅಲ್ಲದೆ ಜನಸಾಂದ್ರತೆ ಇಲ್ಲದ ಕುಗ್ರಾಮಗಳಿಗೆ ಗ್ರಂಥಾಲಯವನ್ನು ಸ್ಥಳಾಂತರಿಸಲಾಗಿದ್ದು ಇದರಿಂದ ಪುಸ್ತಕ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ.

        ಬರಕನಾಳು ಪಂಚಾಯ್ತಿಯ ಗ್ರಂಥಾಲಯವನ್ನು ಸಂಗೇನಹಳ್ಳಿಗೆ, ಹೊಯ್ಸಳಕಟ್ಟೆ ಪಂಚಾಯ್ತಿ ಗ್ರಂಥಾಲಯವನ್ನು ತಿಮ್ಮಪ್ಪನಹಟ್ಟಿಗೆ, ಮಲ್ಲಿಗೆರೆ ಪಂಚಾಯ್ತಿಯ ಗ್ರಂಥಾಲಯವನ್ನು ಕಾನ್ಕೆರೆಗೆ, ಬರಗೂರು ಗ್ರಂಥಾಲಯವನ್ನು ಟಿ.ತಾಂಡ್ಯಕ್ಕೆ, ಚೌಳಕಟ್ಟೆ ಗ್ರಂಥಾಲಯವನ್ನು ಸಬ್ಬೇನಹಳ್ಳಿಗೆ, ಹೊನ್ನೆಬಾಗಿ ಗ್ರಂಥಾಲಯವನ್ನು ಮೇಲನಹಳ್ಳಿಗೆ, ಕುಪ್ಪೂರು ಗ್ರಂಥಾಲಯವನ್ನು ದಿಬ್ಬದಹಳ್ಳಿಗೆ, ಕೋರಗೆರೆ ಗ್ರಂಥಾಲಯವನ್ನು ಬರಗೀಹಳ್ಳಿಗೆ, ಮತಿಘಟ್ಟ ಗ್ರಂಥಾಲಯವನ್ನು ಯಳ್ಳೇನಹಳ್ಳಿಗೆ, ತಿಮ್ಲಾಪುರ ಗ್ರಂಥಾಲಯವನ್ನು ನಂದಿಹಳ್ಳಿಗೆ ಸ್ಥಳಾಂತರಿಸಲಾಗಿದೆ.

           ಮತಿಘಟ್ಟ ಗ್ರಾಮ ಪಂಚಾಯಿತಿಯ ಗ್ರಂಥಾಲಯವನ್ನು 8 ಕಿ.ಮೀ. ದೂರದಲ್ಲಿರುವ ಯಳ್ಳೇನಹಳ್ಳಿಗೆ ಸ್ಥಳಾಂತರಿಸಲಾಗಿದ್ದು ಇದರ ವಿರುದ್ಧ ಮತಿಘಟ್ಟ ಸುತ್ತಮುತ್ತಲಿನ ಏಳೆಂಟು ಗ್ರಾಮಗಳಾದ ಗಾಂಧಿನಗರ, ಚಟ್ಟಸಂದ್ರ, ಮದಾಪುರ, ಬಿಳಗಿಹಳ್ಳಿ, ಮಲ್ಲೇನಹಳ್ಳಿ, ದೊಡ್ಡಪಾಳ್ಯ, ಸೋರಲಮಾವು, ಬಂದ್ರೆಹಳ್ಳಿ ಗ್ರಾಮದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಗ್ರಂಥಾಲಯವನ್ನು ಮತಿಘಟ್ಟದಲ್ಲೇ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

         ಮತಿಘಟ್ಟ ಗ್ರಾಮದಲ್ಲಿ 400 ಮನೆಗಳಿದ್ದು 1500 ಸಾವಿರ ಜನಸಂಖ್ಯೆ ಇದೆ, ಅಲ್ಲದೆ ಕೋಡಿಪಾಳ್ಯ, ಬಿಳಿಗೆಹಳ್ಳಿ, ಸೋರಲಮಾವು ಸೇರಿದಂತೆ ಏಳೆಂಟು ಗ್ರಾಮದ ಜನರು ಗ್ರಂಥಾಲಯಕ್ಕೆ ಬಂದು ಹೋಗುತ್ತಿದ್ದಾರೆ. ಅಲ್ಲದೆ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಗ್ರಂಥಾಲಯದ ಸೌಲಭ್ಯ ಪಡೆಯುತ್ತಿದ್ದರು. ಪಶು ಆಸ್ಪತ್ರೆ, ಪೊಲೀಸ್ ಉಪಠಾಣೆ, ರೈತಸಂಪರ್ಕ ಕೇಂದ್ರ, ರಾಷ್ಟ್ರೀಕೃತ ಬ್ಯಾಂಕ್‍ಗಳು ಇದ್ದು ಸಾವಿರಾರು ಜನ ದಿನನಿತ್ಯ ಗ್ರಾಮಕ್ಕೆ ಬಂದು ಹೋಗುತ್ತಿದ್ದಾರೆ, ಸಾರ್ವಜನಿಕರು ಗ್ರಂಥಾಲಯಕ್ಕೆ ಬಂದು ಕುಳಿತು ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಆದರೆ, ಗ್ರಂಥಾಲಯವನ್ನು ಯಾವುದೇ ಜನಸಂಪರ್ಕವಿಲ್ಲದ ಕುಗ್ರಾಮವಾದ ಯಳ್ಳೇನಹಳ್ಳಿಗೆ ವರ್ಗಾಯಿಸಿದ್ದು ಓದುಗರಿಗೆ ತೊಂದರೆಯಾಗಿದೆ ಎಂದು ಓದುಗರಾದ ದೊಡ್ಡಪಾಳ್ಯದ ಉಮೇಶ್, ಕರಿಯಪ್ಪ, ಧರಣೀಶ್, ಮಂಜುನಾಥ್, ಭಾನುಪ್ರಕಾಶ್ ಮುಂತಾದವರು ದೂರಿದ್ದಾರೆ.

           ಗ್ರಂಥಾಲಯಗಳನ್ನು ಶಾಲಾ ಆವರಣಕ್ಕೆ ಸ್ಥಳಾಂತರಿಸಿರುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಗ್ರಾಮಸ್ಥರು ಬಂದು ಗ್ರಂಥಾಲಯದಲ್ಲಿ ಕುಳಿತು ಚರ್ಚೆಯಲ್ಲಿ ತೊಡಗುವುದರಿಂದ ಪಾಠ-ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ ಆದ್ದರಿಂದ ಗ್ರಂಥಾಲಯ ಇಲಾಖೆಯ ಈ ಕ್ರಮ ಅವೈಜ್ಞಾನಿಕವಾಗಿ ಎಂದು ಹಲವು ಶಿಕ್ಷಕರು ದೂರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link