ಬೆಂಗಳೂರು
ದೇಶಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ಯಾವ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿದೆ.
ಮೊದಲನೆಯದಾಗಿ,ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದರೆ ಲೋಕಸಭಾ ಚುನಾವಣೆಯ ಮುನ್ನವೇ ಬಿಜೆಪಿಯ ಅಧಿಕಾರ ದಾಹ ಹೆಚ್ಚಿದೆ ಎಂದು ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂಬಿತರಾಗುವ ಅಪಾಯವಿದೆ ಅಂತ ಅದು ಹೇಳಿದೆ.
ಬಿಜೆಪಿ ಹೈಕಮಾಂಡ್ ನೀಡಿದ ಈ ಸೂಚನೆಯ ಹಿನ್ನೆಲೆಯಲ್ಲಿ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ,ಮೇ ಇಪ್ಪತ್ಮೂರರವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಯಾವ ಶಾಸಕರ ಜತೆಗೂ ಕರ್ನಾಟಕದ ನಾಯಕರು ಮಾತನಾಡಕೂಡದು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಹೀಗಾಗಿ ಸಧ್ಯಕ್ಕೆ ಬಂಡಾಯದ ಮಾತನಾಡುತ್ತಿರುವ ಮಾಜಿ ಸಚಿವ,ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸಕೂಡದು ಎಂದು ಕೋರ್ ಕಮಿಟಿ ಸಭೆ ನಿರ್ಧರಿಸಿದೆ.
ಉನ್ನತ ಮೂಲಗಳ ಪ್ರಕಾರ,ಮೇ ಇಪ್ಪತ್ಮೂರರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ಹೈಕಮಾಂಡ್ ಅತೀವ ನಿರೀಕ್ಷೆ ಇರಿಸಿಕೊಂಡಿದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತೇವೆ.ಇಲ್ಲದಿದ್ದರೂ ಎನ್.ಡಿ.ಎ ಮಿತ್ರ ಪಕ್ಷಗಳ ಜತೆಗೂಡಿ ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸವಿಟ್ಟುಕೊಂಡಿದೆ.ಹೀಗೆ ಅಧಿಕಾರ ಹಿಡಿಯುವವರೆಗೆ ಯಾರೂ ರಾಜ್ಯ ಮಟ್ಟಗಳಲ್ಲಿ ಸರ್ಕಾರ ರಚಿಸಲು ಅಥವಾ ಇರುವ ಸರ್ಕಾರವನ್ನು ಕೆಡವಲು ಉತ್ಸುಕತೆ ತೋರಬಾರದು ಎಂಬುದು ಹೈಕಮಾಂಡ್ ಸೂಚನೆ.
ಕರ್ನಾಟಕ ಮಾತ್ರವಲ್ಲ,ರಾಜಸ್ತಾನ,ಮಧ್ಯಪ್ರದೇಶದಲ್ಲೂ ಅಸ್ತಿತ್ವದಲ್ಲಿರುವ ಬಿಜೆಪಿಯೇತರ ಸರ್ಕಾರಗಳನ್ನು ಕೆಡವಿ ಕಮಲ ಪಾಳೆಯದ ಬಾವುಟ ಹಾರಾಡುವಂತೆ ಮಾಡುವುದು ಹೈಕಮಾಂಡ್ ಉದ್ದೇಶ.
ಈ ಉದ್ದೇಶ ನೆರವೇರಬೇಕೆಂದರೆ ರಾಜ್ಯ ಘಟಕಗಳು ಯಾವ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕಬಾರದು.ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಕಾರ್ಯಾಚರಣೆ ನಡೆಸಲು ಅಗತ್ಯವಾದ ವೇದಿಕೆಯನ್ನು ನಾವು ಸಜ್ಜು ಮಾಡುತ್ತೇವೆ.
ಕರ್ನಾಟಕದಲ್ಲಿ ಈಗಾಗಲೇ ಆಪರೇಷನ್ ಕಮಲ ಕಾರ್ಯಾಚರಣೆ ಹಲವು ಹಂತಗಳಲ್ಲಿ ವಿಫಲವಾಗಿದೆ.ಹಾಗೆಯೇ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ.ಹೀಗಾಗಿ ಈಗ ಕರ್ನಾಟಕದಲ್ಲಿ ಚುನಾವಣೆ ಮುಗಿಯಿತು ಎಂಬ ಕಾರಣಕ್ಕಾಗಿ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಮಾಡಬೇಡಿ.ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕೂಡಲೇ ಕರ್ನಾಟಕದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳೆಯದ ಇಪ್ಪತ್ತಕ್ಕೂ ಹೆಚ್ಚು ಶಾಸಕರು ನಮ್ಮ ಕಡೆ ಬರಲಿದ್ದಾರೆ.
ಈ ವಿಷಯದಲ್ಲಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ.ಹೀಗಾಗಿ ಮೇ ಇಪ್ಪತ್ಮೂರರವರೆಗೆ ಎಲ್ಲರೂ ಮೌನವಾಗಿರಿ .ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ವರಿಷ್ಟರು ರಾಜ್ಯ ಘಟಕದ ನಾಯಕರಿಗೆ ಹೇಳಿದ್ದಾರೆ.
ಸರ್ಕಾರ ರಚಿಸಲು ನೆರವು ನೀಡಲು ಮುಂದಾಗಿರುವ ಶಾಸಕರು ಮೇ ಇಪ್ಪತ್ಮೂರರವರೆಗೆ ಗೌಪ್ಯತೆ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.ಹೀಗಾಗಿ ನಾವು ಅವರ ಬಾವನೆಯನ್ನು ಗೌರವಿಸಬೇಕು.ಮೌನವಾಗಿರಬೇಕು ಎಂದು ಹೈಕಮಾಂಡ್ ರಾಜ್ಯ ಘಟಕದ ನಾಯಕರಿಗೆ ಸೂಚಿಸಿದ್ದು,ವರಿಷ್ಟರ ಸೂಚನೆಯನ್ನು ಪಾಲಿಸಲು ಇಂದು ನಡೆದ ಕೋರ್ ಕಮಿಟಿ ಸಭೆ ನಿರ್ಧರಿಸಿದೆ.
ಈ ಮಧ್ಯೆ ಕರ್ನಾಟಕದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 21 ಹಾಗೂ ಗರಿಷ್ಟ 22 ಕ್ಷೇತ್ರಗಳಲ್ಲಿ ಗೆಲುವು ಲಭ್ಯವಾಗಲಿದೆ ಎಂಬ ಕುರಿತು ವಿವಿಧ ನಾಯಕರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಈ ಮಧ್ಯೆ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾದ ಚಿಂಚೋಳಿ ಕ್ಷೇತ್ರದಿಂದ ಉಮೇಶ್ ಜಾಧವ್ ಅವರ ಸಹೋದರನನ್ನೇ ಕಣಕ್ಕಿಳಿಸಲು ಸಭೆ ತೀರ್ಮಾನಿಸಿತು.
ಹಾಗೆಯೇ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಅಭ್ಯರ್ಥಿಗೇ ಟಿಕೆಟ್ ನೀಡಬೇಕು ಎಂದು ಸಭೆ ತೀರ್ಮಾನಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ