ನನ್ನ ಕಷ್ಟ ಅರಿಯಿರಿ, ಸಂಕಷ್ಟಕ್ಕೆ ಸಿಲುಕಿಸಬೇಡಿ

ಹರಿಹರ:

    ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ ವಚನಾನಂದ ಸ್ವಾಮೀಜಿಯವರೇ, ನಾನು ನಿಮ್ಮೆಲ್ಲರ ಸಹಕಾರದಿಂದ ಮುಖ್ಯಮಂತ್ರಿ ಆಗಿದ್ದೇನೆ. ಎಲ್ಲಾ ಮಠಾಧೀಶರನ್ನು ಒಂದೆಡೆ ಸೇರಿಸಿ ನನ್ನ ಕಷ್ಟ ಹೇಳಿಕೊಳ್ಳುತ್ತೇನೆ. ನೀವು ನನಗೆ ಸಲಹೆ ನೀಡಿ. ಆದರೆ, ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

   ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರ ಜಾತ್ರೆ, ಬೆಳ್ಳಿ ಬೆಡಗು ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ 17 ಜನ ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿದ್ದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ಅವರಿಗೂ ನಾನು ಸಚಿವ ಸ್ಥಾನ ನೀಡಿ ಋಣ ತೀರಿಸಬೇಕಿದೆ. ನನ್ನ ಕಷ್ಟವನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ, ಪಂಚಮಸಾಲಿ ಸಮಾಜಕ್ಕೆ ಸೌಲಭ್ಯ ಕಲ್ಪಿಸಲು ನಾನು ಸಿದ್ಧನಿದ್ದೇನೆ ಎಂದರು.

     ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಸಂಭವಿಸಿದ ಅತಿವೃಷ್ಠಿ, ಅನಾವೃಷ್ಠಿಯಿಂದ ಕೋಟ್ಯಾಂತರ ರೂ.ಗಳು ನಷ್ಟವಾಗಿದೆ. ಆದ್ದರಿಂದ ನಾವು ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಅನುದಾನ ತಂದಿದ್ದೇನೆ. ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ನಾವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಹಾಗಾಗಿ ನನಗೆ ಸಹಕಾರ ನೀಡಿ ಎಂದು ಹೇಳಿದರು.

     ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಪೀಠ ಪ್ರಾರಂಭಾವಗಿ 12 ವರ್ಷಗಳು ಕಳೆದಿವೆ. ಕೆಲವೇ ವರ್ಷಗಳಲ್ಲಿ ವಚನಾನಂದ ಶ್ರೀಗಳು ಮಹತ್ತರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಹೇಳುವ ರೀತಿಯಲ್ಲಿ ಸಮಾಜದ ಭಕ್ತರು ನಡೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

    ಅಂದು ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರು ತಾಯಿ-ಮಗನ ಸಂಬಂಧ ಇಟ್ಟುಕೊಂಡಂತೆ, ಇಂದು ನಾವು ಮತ್ತು ವಚನಾನಂದ ಶ್ರೀಗಳು ಅಣ್ಣ-ತಮ್ಮಂದಿರರಂತೆ ಇದ್ದೀವಿ, ಮುಂದೆಯೂ ಇದೇ ರೀತಿ ಇರುತ್ತೇವೆ ಎಂದರು.ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಸಂತರು ಇರುವುದರಿಂದ ಭಕ್ತರು ಸರಿದಾರಿಯಲ್ಲಿ ನಡೆಯುತ್ತಿದ್ದಾರೆ. ಅದೇರೀತಿ ಸತ್ಯದ ಜಾತ್ರೆ ಎಲ್ಲಿ ನಡೆಯುತ್ತದೆ ಎಂದರೆ ಅದು ಹರಿಹರದ ಹರ ಜಾತ್ರೆ. ಪ್ರತಿ ವರ್ಷ ಸಂಕ್ರಾಂತಿಯ ದಿನದಂದು ಇದೇ ರೀತಿ ಮಠದ ಆವರಣದಲ್ಲಿ ಸಡಗರ ಸಂಭ್ರದ ಹಬ್ಬದ ವಾತಾವರಣ ನಡೆಯಲಿ ಎಂದು ಶುಭ ಹಾರೈಸಿದರು.

    ಸಿದ್ಧಿಸಂಸ್ಥಾನ ಮಠದ ಶ್ರೀಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಒಬ್ಬ ಸ್ವಾಮಿ ಸಂಘಟನೆಗಾಗಿ ಎದ್ದು ನಿಂತು ಹೊರಟರೆ ಅವರ ಹಿಂದೆ ಭಕ್ತರ ಸಮೂಹವೇ ಬರುತ್ತದೆ ಎನ್ನುವುದಕ್ಕೆ ಈ ಹರ ಜಾತ್ರೆ ಸಾಕ್ಷಿಯಾಗಿದೆ. ಇವರ ಈ ಪ್ರಯತ್ನ ಸಾದಾ ಕಾಲ ಇದೇ ರೀತಿ ಇರಲಿ. ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಮುಖ್ಯಮಂತ್ರಿಗಳು ಕಲ್ಪಿಸಬೇಕೆಂದು ಹೇಳಿದರು.

   ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಶಾಸಕ ಆದ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ವಚನಾನಂದ ಶ್ರೀಗಳು ಇಲ್ಲಿ ಪೀಠಾಧಿಪತಿಯಾದ ನಂತರ ರಾಜ್ಯವೇ ಇತ್ತ ತಿರುಗಿ ನೋಡುತ್ತಿದೆ. ಹರಿಹರ ತಾಲೂಕಿನಲ್ಲಿ ಮೂರು ಸಮಾಜದ ಮಠಗಳಿವೆ. ಇದು ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆಯುತ್ತಿದೆ. ಸಮಾಜಕ್ಕೆ ಸಿಗಬೇಕಾದ ಶೇಖಡ 16 ಮೀಸಲಾತಿಯನ್ನು ಶೀಘ್ರದಲ್ಲಿ ಸಿಗಲಿ. ನಾಡಿನ ಎಲ್ಲಾ ಲಿಂಗಾತÀರು ಒಂದಾದರೆ, ರಾಜ್ಯದಲ್ಲಿ ನಮ್ಮನ್ನು ಹಿಡಿಯುವವರು ಯಾರೂ ಇರುವುದಿಲ್ಲ. ನಾವೆಲ್ಲಾ ಒಂದಾಗಲು ವಚನಾನಂದ ಶ್ರೀಗಳೇ ಮುಂದಾಳತ್ವ ತೆಗೆದುಕೊಳ್ಳಲಿ ಎಂದರು.

     ಪ್ರವಾಸೋಧ್ಯಮ ಸಚಿವ ಸಿ.ಟಿ ರವಿ ಮಾತನಾಡಿ, ನೇಗಿಲು ಹಿಡಿದು ಜಮೀನಿನಲ್ಲಿ ದುಡಿಯುವವರು, ಖಡ್ಗ ಹಿಡಿದು ಶತೃಗಳನ್ನು ಮಟ್ಟಹಾಕಿದ ಕಿತ್ತೂರರಾಣಿ ಚನ್ನಮ್ಮ ಹುಟ್ಟಿದ ಸಮಾಜ ಇದು. ಇನ್ನೂ ಅನೇಕ ಮಹನೀಯರು ಈ ಸಮಾಜದಲ್ಲಿ ಹುಟ್ಟಿ ದೇಶ ಸೇವೆಯನ್ನು ಮಾಡಿದ್ದಾರೆ. ದೇಶದಲ್ಲಿ ಅನೇಕ ಸಮಸ್ಯೆಗಳು ಇವೆ. ಕಾಶ್ಮೀರದಲ್ಲಿ ಸಮಸ್ಯೆಯಾದರೆ ದಾವಣಗೆರೆಗೆ ಸಮಸ್ಯೆ ಇಲ್ಲ ಎಂದು ಸುಮ್ಮನಿರುವುದು ಸರಿಯಲ್ಲ. ದೇಶದ ಯಾವ ಭಾಗದಲ್ಲೇ ಸಮಸ್ಯೆ ಬಂದರೆ ಎಲ್ಲರೂ ಒಗ್ಗಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

    ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸಮಾಜ ಸಂಘಟಿತವಾದಾಗ ಮಾತ್ರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಲಿದೆ. ಸಮಾಜದಲ್ಲಿ ರಾಣಿ ಚನ್ನಮ್ಮ ಅವರು ದೇಶ ಭಕ್ತೆಯಾಗಿ ಹೆಸರು ಪಡೆದಿದ್ದಾರೆ. ಅದೇ ರೀತಿ ಅಕ್ಕ ಮಹಾದೇವಿ ವಚನಗಳಿಂದ ದೇಶದಲ್ಲಿ ಪ್ರಖ್ಯಾತಿಯಾದರು. 7 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಖ್ಯಾತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಈ ಭಾಗದ ನೀರಾವರಿ ಅಭಿವೃದ್ಧಿಗಾಗಿ ಮುಂಬರುವ ಅನುದಾನ ಮೀಸಲಿಡಲಿದ್ದಾರೆ. ವಚನಾನಂದ ಶ್ರೀಗಳು ಸಣ್ಣ ವಯಸ್ಸಿನಲ್ಲಿ ಮಹಾತ್ತರ ಸಾಧನೆಯನ್ನು ಮಾಡುತ್ತಿದ್ದಾರೆ. ಅವರ ಜೊತೆಯಲ್ಲಿ ನಾವಿದ್ದು, ಮಠ ಹಾಗೂ ಸಮಾಜಕ್ಕೆ ಬೇಕಾದ ಸೌಲಭ್ಯವನ್ನು ನೀಡಲು ನಮ್ಮ ಸರ್ಕಾರ ಸಿದ್ದವಿದೆ ಎಂದರು.

    ಸಂಸದ ಜಿ.ಎಂಸಿದ್ದೇಶ್ವರ ಮಾತನಾಡಿ, ಪಂಚಮಸಾಲಿ ಪೀಠಕ್ಕೆ ವಚನಾನಂದ ಸ್ವಾಮೀಜಿ ಅವರನ್ನು ನೇಮಿಸಿದಾಗಿನಿಂದ ಪೀಠವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅವರ ಸಾಧನೆ ಇದೇರೀತಿ ಮುಂದುವರೆಯಲಿ. ರಾಜ್ಯದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಘೋಷಿಸಿದ ಏಕೈಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ನೀರಾವರಿ ಹೊಂದಿದೆ, ಇದನ್ನು ಮತ್ತೊಷ್ಟು ಎತ್ತರಕ್ಕೆ ಬೆಳೆಸಬೇಕು. ಕೇವಲ ಪಂಚಮಸಾಲಿ ಸಮಾಜಕ್ಕೆ ಶೇ.16 ಮೀಸಲಾತಿ ನೀಡುವುದು ಬೇಡ, ಸಂಪೂರ್ಣ ಲಿಂಗಾಯಿತ ಸಮುದಾಯಕ್ಕೆ ನೀಡಿ ಎಂದು ಸಲಹೆ ನೀಡಿದರು.

     ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀವಚನಾನಂದ ಸ್ವಾಮೀಜಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ, ಕೆಳದಿ ರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮ, ಅಕ್ಕಮಹಾದೇವಿ ಇವರು ನಮ್ಮ ಪಂಚಮಸಾಲಿ ಸಮಾಜದವರು. ಇವರು ಕೇವಲ ನಮ್ಮ ಸಮಾಜಕ್ಕಾಗಿ ಹೋರಾಟ ನಡೆಸಲಿಲ್ಲ. ಅವರು ಅಖಂಡ ಭಾರತದ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರು. ಇವರು ನಮ್ಮ ಸಮಾಜದ ನಾಲ್ಕು ಆಧಾರ ಸ್ತಂಭಗಳಾಗಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಂಸದ ಶಿವಕುಮಾರ್ ಉದಾಸಿ, ಸಂಗಣ್ಣ ಕರಡಿ, ಶಾಸಕರುಗಳಾದ ಎಂ.ಪಿ ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬಿ.ಸಿ ಪಾಟೀಲ್, ಅರವಿಂದ್ ಬೆಲ್ಲದ್, ಶಂಕರ್ ಗೌಡ, ವೀರಣ್ಣ, ಎಸ್.ವಿ ರಾಮಚಂದ್ರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ಅರುಣ್ ಕುಮಾರ್ ಪೂಜಾರಿ, ಸಮಾಜದ ಮುಖಂಡರಾದ ಬಿ.ಸಿ.ಉಮಾಪತಿ, ನವೀನ್, ಚನ್ನಪ್ಪ, ಬಿ. ನಾಗನಗೌಡ, ಬಸವರಾಜ್ ದಿಂಡೂರು, ಚಂದ್ರ ಶೇಖರ್ ಪೂಜಾರ್, ಕರಿಬಸಪ್ಪ ಗುತ್ತೂರು ಮತ್ತಿತರರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link