ಹುಳಿಯಾರು
ರೈತರು ಖರೀದಿಸಿದ ಬಿತ್ತನೆ ಬೀಜವನ್ನು ಕೇವಲ ಬಿತ್ತನೆಗೆ ಮಾತ್ರ ಉಪಯೋಗಿಸತಕ್ಕದ್ದು. ಸದರಿ ಬಿತ್ತನೆ ಬೀಜಗಳಿಗೆ ಥೈರಾಮ್ ಶಿಲೀಂದ್ರನಾಶಕವನ್ನು ಮಿಶ್ರಣ ಮಾಡಲಾಗಿರುವುದರಿಂದ ಯಾವುದೇ ಕಾರಣಕ್ಕೂ ಆಹಾರವಾಗಿ ಬಳಸಬೇಡಿ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ವರ್ಷದ ಪೂರ್ವ ಮುಂಗಾರು ಈಗಾಗಲೇ ಪ್ರಾರಂಭವಾಗಿದೆ. ರೈತರು ಭೂಮಿ ಉಳುಮೆ ಕಾರ್ಯದಲ್ಲಿ ನಿರತರಾಗಿದ್ದು, ಬಿತ್ತನೆಗೆ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ತೊಗರಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರಿಗೆ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದ್ದು, ತಾಲ್ಲೂಕಿನ ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಕೊರೊನಾ ವೈರಾಣು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು ರೈತ ಸಂಪರ್ಕ ಕೇಂದ್ರಗಳಿಗೆ ಆಗಮಿಸುವ ರೈತರುಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೇಂದ್ರಗಳ ಮುಂದೆ ಸೋಪ್ ನೀರಿನಲ್ಲಿ ಕೈ ತೊಳೆದು ಸ್ಯಾನಿಟೈಸರ್‍ನ್ನು ಉಪಯೋಗಿಸಬೇಕು. ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವೈರಾಣು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.
ಈಗಾಗಲೆ ಹುಳಿಯಾರು ರೈತ ಸಂಪರ್ಕ ಕೇಂದ್ರದಲ್ಲಿ 40 ಕ್ವಿಂಟಾಲ್ ಹೆಸರು ಕಾಳು ರೈತರಿಗೆ ವಿತರಣೆ ಮಾಡಲಾಗಿದ್ದು, ರೈತರ ಬೇಡಿಕೆಗನುಗುಣವಾಗಿ ಹೆಸರುಕಾಳು ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ