ತುಮಕೂರು
“ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಗೂ ಸಂವಿಧಾನವನ್ನು ರಕ್ಷಿಸಬೇಕೆಂದರೆ, ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು. ಈ ಲೋಕಸಭಾ ಚುನಾವಣೆಯಲ್ಲಿ ಅದಕ್ಕೊಂದು ಅವಕಾಶ ಇದೆ. ಎಲ್ಲ ನಾಗರಿಕರೂ ಈ ಅವಕಾಶ ಬಳಸಿಕೊಂಡು ಮೋದಿಯನ್ನು ವಿರೋಧಿಸಬೇಕು” ಎಂದು ಹೈಕೋರ್ಟ್‍ನ ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ಪ್ರೊ. ರವಿವರ್ಮ ಕುಮಾರ್ ಜನತೆಗೆ ಮನವಿ ಮಾಡಿಕೊಂಡರು.
ಅವರು ಶನಿವಾರ ಮಧ್ಯಾಹ್ನ ತುಮಕೂರು ನಗರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಚೇರಿಯಲ್ಲಿ ಜಾತ್ಯತೀತ ಯುವ ವೇದಿಕೆ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯು ಪ್ರಕಟಿಸಿರುವ “ಮತದಾರರಿಗೆ ಮನವಿ ಪತ್ರ”ವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
“ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಬಿಜೆಪಿಯ ಘೋಷಣೆಯೇ ಪ್ರಜಾಪ್ರಭುತ್ವವಾದಿಗಳಲ್ಲಿ ಭಯ ತರಿಸುತ್ತದೆ”ಎನ್ನುತ್ತಲೇ ಮಾತು ಆರಂಭಿಸಿದ ಅವರು, “ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ದೇಶದ ಸೈನ್ಯವನ್ನು ಮೋದಿ ಸೈನ್ಯ ಎಂದರೂ ಕೇಂದ್ರ ಸರ್ಕಾರ ಚಕಾರವೆತ್ತಲಿಲ್ಲ. ಸೇನೆಯ ಮುಖ್ಯಸ್ಥರುಗಳು ಮೌನವಾದರು. ಸರ್ಕಾರದ ವಿರುದ್ಧ ದನಿಯೆತ್ತುವ ವಾತಾವರಣವೇ ಇಲ್ಲದಂತಾಗಿದೆ. ಒಂದು ರೀತಿಯ ಭಯ ಆವರಿಸಿದೆ. ಕಳೆದ ವರ್ಷ ಸುಪ್ರಿಂ ಕೋರ್ಟ್‍ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದ ನಿದರ್ಶನ ನಮ್ಮ ಮುಂದಿದೆ. ರಿಸರ್ವ್ ಬ್ಯಾಂಕ್ ಸ್ವಾಯತ್ತತೆ ಕಳೆದುಕೊಂಡಿದೆ. ಚುನಾವಣಾ ಆಯೋಗವು ಪಕ್ಷಪಾತಿಯಂತಾಗುತ್ತಿದೆ.
ಆದಾಯ ತೆರಿಗೆ ಇಲಾಖೆಯು ಪ್ರತಿಪಕ್ಷಗಳವರ ವಿರುದ್ಧ ಎದ್ದುನಿಂತಿದೆ. ಆಪರೇಷನ್ ಕಮಲ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳುತ್ತಿದ್ದರೂ, ಆದಾಯ ತೆರಿಗೆ ಇಲಾಖೆ ತೆಪ್ಪಗಿದೆ. ದೇಶದ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ನಾಶ ಮಾಡಲಾಗಿದೆ” ಎಂದು ರವಿವರ್ಮ ಕುಮಾರ್ ಗಂಭೀರ ಆರೋಪ ಮಾಡಿದರು.
“ಆದ್ದರಿಂದ ದೇಶದ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕು. ಸರ್ವಾಧಿಕಾರದ ಧೋರಣೆ ನಿವಾರಣೆಯಾಗಿ, ದೇಶದಲ್ಲಿ ಕಾನೂನಿನ ಆಡಳಿತ ಬರುವಂತೆ ಮಾಡಲು ಮುಂದಾಗಬೇಕು. ಮೋದಿ ಸರ್ಕಾರವನ್ನು ಹೊಡೆದೋಡಿಸಿ, ಪ್ರಜಾತಂತ್ರವನ್ನು ಪುನರ್ ಸ್ಥಾಪಿಸಬೇಕು. ಇಲ್ಲದಿದ್ದರೆ ದೇಶದ ಸಂವಿಧಾನ ಎಂಬುದು, ಪ್ರಜಾತಂತ್ರವೆಂಬುದು ಇತಿಹಾಸ ಸೇರಲಿದೆ. ಸರ್ವಾಧಿಕಾರ ಮರಳಲಿದೆ” ಎಂದು ಪುನರುಚ್ಛರಿಸಿದರು.
ಸಾಹಿತಿ ಕೆ.ಪಿ. ನಟರಾಜ್ ಮಾತನಾಡಿ, “ಕೋಮುವಾದಿ ಶಕ್ತಿಗಳನ್ನು ಮಣಿಸಲು ಇದೀಗ ಕರ್ನಾಟಕದಲ್ಲಿ ಅದೃಷ್ಟವಶಾತ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಉಂಟಾಗಿದೆ. ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಬೆಂಬಲಿಸುತ್ತಿದ್ದೇವೆ” ಎಂದರು. ವೇದಿಕೆ ಗೌರವಾಧ್ಯಕ್ಷ ಎಚ್.ಮಾರುತಿ ಪ್ರಸಾದ್, ಅಧ್ಯಕ್ಷ ವಿರೂಪಾಕ್ಷ ಮಾತನಾಡಿದರು. ವೇದಿಕೆಯ ಪ್ರಮುಖರಾದ ಡಿ.ಟಿ. ರವಿಪ್ರಕಾಶ್, ರಾಮಕೃಷ್ಣ, ಶಫಿಉಲ್ಲ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
