ದೇವರ ಹೆಸರಲ್ಲಿ ಹಾಲು-ತುಪ್ಪ ಚೆಲ್ಲಬೇಡಿ.!

ದಾವಣಗೆರೆ:

    ದೇವರ ಹೆಸರಲ್ಲಿ ಹಾಲು-ತುಪ್ಪ ಮಣ್ಣು ಪಾಲು ಮಾಡಬಾರದು ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕಿವಿಮಾತು ಹೇಳಿದರು.ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಸೋಮವಾರ ಬಸವಕೇಂದ್ರ, ಶ್ರೀಮುರುಘಾರಾಜೇಂದ್ರ ವಿರಕ್ತಮಠ ಹಾಗೂ ಶ್ರೀಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಾಗರ ಪಂಚಮಿ ಪ್ರಯುಕ್ತ ಏರ್ಪಡಿಸಿದ್ದ ‘ಹಾಲು ಕುಡಿಸುವ ಹಬ್ಬ-ಬಸವ ಪಂಚಮಿ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

     ಪಂಚಮಿ ಹಬ್ಬದಲ್ಲಿ ಕಲ್ಲು ಮತ್ತು ಮಣ್ಣಿನ ನಾಗರಕ್ಕೆ ಹಾಲು ಎರೆಯುವ ಮೂಲಕ ಮಣ್ಣು ಪಾಲು ಮಾಡುವುದು ಸರಿಯಲ್ಲ. ಅಮೃತಕ್ಕೆ ಸಮಾನವಾದ ಹಾಲನ್ನು ಮಕ್ಕಳಿಗೆ ಕುಡಿಸಿ, ವೈಚಾರಿಕವಾಗಿ ಹಬ್ಬ ಆಚರಿಸಬೇಕೆಂದು ಸಲಹೆ ನೀಡಿದರು.ನಾಗರ ಪಂಚಮಿಯ ದಿನದಂದೇ ಬಸವಣ್ಣನವರು ಲಿಂಗೈಕ್ಯರಾದ ಕಾರಣ ಈ ಹಬ್ಬವನ್ನು ಬಸವ ಪಂಚಮಿ ಎಂಬುದಾಗಿಯೇ ಕರೆಯಲಾಗುತ್ತದೆ ಎಂದ ಶ್ರೀಗಳು ಮನುಷ್ಯನಲ್ಲಿಯೇ ದೇವರಿದ್ದಾನೆ. ಹೀಗಾಗಿ ದೇವರ ಹೆಸರಿನಲ್ಲಿ ಆಹಾರವನ್ನು ಚೆಲ್ಲದೇ, ಹಸಿದು ನಿಮ್ಮ ಮನೆಗೆ ಬರುವ ನೀಡಬೇಕು ಎಂದರು.

     ಎಷ್ಟೋ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆದರೆ, ಪಂಚಮಿಯ ದಿನ ಒಂದರಲ್ಲೇ ಸುಮಾರು 20 ದಶ ಲಕ್ಷ ಲೀಟರ್ ಹಾಲು ವ್ಯರ್ಥ ಮಾಡಲಾಗುತ್ತಿದೆ. ಅಲ್ಲದೇ, ಗುಜರಾತ್‍ನ ದೇವಸ್ಥಾನದ ವೊಂದರಲ್ಲಿ 16 ಕೋಟಿ ರೂ. ಮೌಲ್ಯದ 5.50 ಲಕ್ಷ ಲೀಟರ್ ತುಪ್ಪದಲ್ಲಿ ದೇವರಿಗೆ ಅಭಿಷೇಕ ಮಾಡಿ ವ್ಯರ್ಥ ಮಾಡಲಾಗಿದೆ. ಹೀಗಾಗಿ ಇಂದು ಭಕ್ತಿ ಎನ್ನುವುದು ಮಣ್ಣಿನ ಹೆಂಟೆಯನ್ನು ಕಲ್ಲಿನ ಬಂಡೆಗೆ ಒಡೆದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಹಾಲು ಮತ್ತು ತುಪ್ಪದಲ್ಲಿರುವ ಶಕ್ತಿ ಇನ್ಯಾವ ಆಹಾರದಲ್ಲೂ ಇಲ್ಲ. ಇವೆರಡನ್ನೂ ಸೇವಿಸುವುದರಿಂದ ಮಕ್ಕಳ ನೆನಪಿನ ಶಕ್ತಿ ವೃದ್ಧಿಯಾಗಲಿದೆ ಹಾಗೂ ಬುದ್ದಿ ಚುರುಕಾಗಲಿದೆ. ಆದ್ದರಿಂದ ಮೌಢ್ಯಕ್ಕೆ ಒಳಗಾಗಿ ದೇವರ ಹೆಸರಿನಲ್ಲಿ ಹಾಲು ಮತ್ತು ತುಪ್ಪವನ್ನು ಮಣ್ಣು ಪಾಲು ಮಾಡದೆ, ವೈಚಾರಿಕವಾಗಿ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಹಬ್ಬ ಆಚರಿಸಬೇಕೆಂದು ಹೇಳಿದರು.

      ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೂರ್ವ ವಲಯ ಐಜಿಪಿ ಅಮೃತ್‍ಪಾಲ್, 12 ಮತ್ತು 13ನೇ ಶತಮಾನದಲ್ಲಿ ನಮ್ಮ ದೇಶದಲ್ಲಿ ಸಾಮಾಜಿಕ ಕ್ರಾಂತಿ ನಡೆಯಿತು. ಏಕೆಂದರೆ, ಆ ಕಾಲ ಘಟ್ಟದಲ್ಲಿ ಕೆಟ್ಟ ಸಂಪ್ರದಾಯಗಳು ಸಮಾಜದಲ್ಲಿ ಮನೆ ಮಾಡಿದ್ದವು. ಅಲ್ಲದೇ, ವೈದಿಕ ಸಂಪ್ರದಾಯದಿಂದ ಸಮಾಜ ಜಡಗೊಂಡಿತ್ತು. ಆಗ ಜನ್ಮ ತಳೆದ ಬಸವಣ್ಣ, ಕಬೀರ್, ಮೀರಾ ಬಾಯಿ, ಗುರುನಾನಕ್ ಅವರಂತಹ ಅನೇಕ ವಿಚಾರವಾದಿಗಳು ಕೆಟ್ಟ ಸಂಪ್ರದಾಯವನ್ನು ಸಾಮಾಜಿಕ ಕ್ರಾಂತಿಯ ಮೂಲಕ ಬದಲಿಸಲು ಪ್ರಯತ್ನಿಸಿದ್ದರು ಎಂದು ಸ್ಮರಿಸಿದರು.

      ನಮ್ಮ ದೇಶದಲ್ಲಿ ಸಾಮಾಜಿಕ ಕ್ರಾಂತಿ ನಡೆದು 800 ವರ್ಷಗಳೇ ಗತಿಸಿವೆ. ಆದರೂ ಇಂದಿಗೂ ಸಹ ಅದೇ ಕೆಟ್ಟ ಸಂಪ್ರದಾಯಗಳು, ಮೌಢ್ಯ ಮುಂದು ವರೆದಿವೆ ಎಂದ ಅವರು, ನಿಸರ್ಗದ ಪ್ರಕಾರ ನೋಡುವುದದಾರೆ, ಹಾವು ಹಾಲು ಕುಡಿಯುವುದೇ ಇಲ್ಲ. ಆದರೆ, ನಾವು ಮೌಢ್ಯಕ್ಕೆ ಒಳಗಾಗಿ ಒತ್ತಾಯ ಪೂರ್ವಕವಾಗಿ ಹಾಲು ಕುಡಿಸುತ್ತಿದ್ದೇವೆ. ಇದು ಒಳ್ಳೆಯದಲ್ಲ. ಆದ್ದರಿಂದ ದೇವರ ಹೆಸರಲ್ಲಿ ಹಾಲು ಎರೆಯುವ ಬದಲು ಮಕ್ಕಳಿಗೆ ಕುಡಿಸಿ ಎಂದು ಸಲಹೆ ನೀಡಿದರು.

     ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಚನ್ನಬಸವ ಗುರೂಜಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನ ಶಿವನಕೆರೆ ಬಸವಲಿಂಗಪ್ಪ, ಮಠದ ಭಕ್ತರಾದ ಮಹಾದೇವಮ್ಮ, ಎಸ್.ಜಿ.ಸಂಗಪ್ಪ, ಶರಣ ಬಸವ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು, ಫಾರೂಕ್‍ವುಲ್ಲಾ ಸ್ವಾಗತಿಸಿದರು, ಪುಷ್ಪಾ ಬಿ.ಜಿ. ನಿರೂಪಿಸಿದರು. ಅನುರಾಧ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap