ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಭೂಕುಸಿತದಿಂದಾಗಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ನೈಸರ್ಗಿಕ ದುರಂತ ಸಂಭವಿಸುವುದಕ್ಕೂ ಮುನ್ನ 20 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಆದರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಮತ್ತು ಭೂಕುಸಿತದ ನಂತರ ಪ್ರಮುಖ ಪ್ರವಾಸಿ ತಾಣಗಳಾದ ದುಬಾರೆ ಆನೆ ಶಿಬಿರ, ಅಬ್ಬೆ ಜಲಪಾತ, ಮಡಿಕೇರಿಯ ರಾಜಾಸೀಟ್, ಹಾರಂಗಿ ಜಲಾಶಯ ಪ್ರದೇಶಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಕೊಡಗು ಜಿಲ್ಲೆ ಹೋಮ್‍ಸ್ಟೇಗೆ ಪ್ರಸಿದ್ಧವಾಗಿದೆ. ಬಹುತೇಕ ಕುಟುಂಬಗಳು ಇದನ್ನೇ ಪ್ರಮುಖ ಆದಾಯವನ್ನಾಗಿ ನಂಬಿಕೊಂಡಿವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬಾರದೇ ಇರುವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ಸಹ ಕಂಗಾಲಾಗಿದ್ದಾರೆ. ಭೂಕುಸಿತ ಭಯದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚಾರಣ ಸಾಹಸ ಕೈಗೊಳ್ಳುವವರ ಸಂಖ್ಯೆಯು ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.