ಬೆಂಗಳೂರು
ವಿಶ್ವ ವಿಖ್ಯಾತ ದಸರಾ ಉದ್ಘಾಟನೆಯ ಭಾಗ್ಯ ವಿಶ್ವ ಪ್ರಸಿದ್ಧ ಹೃದಯ ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರಿಗೆ ದೊರೆತಿದೆ .ಲಕ್ಷಾಂತರ ಬಡ ಹೃದ್ರೋಗಿಗಳ ಜೀವ ಹಾಗೂ ಸಂಸಾರಗಳನ್ನು ಉಳಿಸಿ ಬದುಕು ಕೊಟ್ಟು ಸಾವಿರಾರು ಜನಕ್ಕೆ ಉದ್ಯೋಗ ಕೊಟ್ಟು ಜೀವನ ರೂಪಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಅವರಿಂದ ಈ ಬಾರಿಯ ದಸರಾವನ್ನು ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದೆ.
ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಿ ಬಡ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಆಸ್ಪತ್ರೆಗೆ ವಿಶ್ವಮನ್ನಣೆ ಗಳಿಸಿದ ಕೀರ್ತಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಸಂದಿದೆ.ಲಕ್ಷಾಂತರ ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಎಂದಿನಂತೆ ಬದುಕು ಸಾಗಿಸುತ್ತಿದ್ದಾರೆ. ಅವರ ಸೇವಾ ಕೈಂಕರ್ಯ ನಾಡಿಗೆ ಇನ್ನಷ್ಟು, ಮತ್ತಷ್ಟು ದೊರೆಯಲಿ ಎಂಬುದು ಸರ್ಕಾರದ ಮತ್ತು ನಾಡಿನ ಜನರ ಆಶಯವಾಗಿದೆ. ಈ ನಿಟ್ಟಿನಲ್ಲಿ ಅ.16ರಂದು ನಡೆಯಲಿರುವ ದಸರಾ ಉದ್ಘಾಟನೆ ಕಾರ್ಯ ಅವರ ಅಮೃತ ಹಸ್ತದಿಂದ ನೆರವೇರಲಿರುವುದು ಔಚಿತ್ಯ ಮತ್ತು ಅರ್ಥಪೂರ್ಣವಾಗಿದೆ.
ಡಾ.ಸಿ.ಎನ್.ಮಂಜುನಾಥ್ ಅವರು ಹೃದ್ರೋಗ ತಜ್ಞರಷ್ಟೇ ಅಲ್ಲ; ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವತೆಯ ೀಮಂತ. ಕೊರೋನಾ ಸಂಕೀರ್ಣದ ಕಾಲದಲ್ಲಿ ಟಾಸ್ಕ್ ಫೋರ್ಸ್ ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದವರು.
ಈ ಬಾರಿ ಕೊರೋನಾ ವಾರಿಯರ್ಸ್ ಅವರಿಂದ ದಸರಾ ಉದ್ಘಾಟನೆ ಮಾಡಿಸಬೇಕೆಂಬ ಮೈಸೂರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿತು. ಆಗ ಕೊರೋನಾ ವಾರಿಯರ್ಸ್ ಆಗಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಲ್ಲಿ ಮೊದಲಿಗರಾಗಿ ಕಂಡು ಬಂದವರು ಡಾ.ಸಿ.ಎನ್.ಮಂಜುನಾಥ್ ಅವರು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸದಸ್ಯರು ದಸರಾ ಉದ್ಘಾಟನೆಗೆ ಮಂಜುನಾಥ್ ಅವರ ಬಗ್ಗೆ ಒಲವು ವ್ಯಕ್ತಪಡಿಸಿದರು.ನಿರ್ವಿವಾದ, ಅಜಾತಶತ್ರುವೂ ಆದ ಡಾ.ಸಿ.ಎನ್.ಮಂಜುನಾಥ್ ಅವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ನಾಡಿನ ಹೆಮ್ಮೆ ಎಂದೇ ಹೇಳಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ