ಡಾ.ರಾಜ್ ಕುಮಾರ್ ಹೆಬ್ಬಾಗಿಲು ಲೋಕಾರ್ಪಣೆ

ಹುಳಿಯಾರು:

      ಪಟ್ಟಣದ ಟೀ ಅಂಗಡಿ ಪರಪ್ಪನ ರಾಜ್ಯೋತ್ಸವಕ್ಕೆ ಈಗ ಭರ್ತಿ 14 ವರ್ಷವಾಯಿತು. ಹುಳಿಯಾರಿನಲ್ಲಿ ನಡೆಯುವ ರಾಜ್ಯೋತ್ಸವಗಳಲ್ಲಿ ಈತನದು ಒಂದು ವಿಶೇಷ.

         ಇತ್ತೀಚಿನ ದಿನಗಳಲ್ಲಿ ರಾಜ್ಯೋತ್ಸವ ತಿಂಗಳ ಪೂರ್ತಿ ಯಾವತ್ತಾದರೂ ಆಚರಣೆ ಮಾಡಿಕೊಳ್ಳುವ ಪರಿಪಾಠ ಬೆಳೆದಿರುವ ಹಿನ್ನೆಲೆಯಲ್ಲಿ ನವಂಬರ್ 1ರಂದು ಕಡ್ಡಾಯವಾಗಿ ಹತ್ತಾರು ವರ್ಷದಿಂದ ಆಚರಿಸಿಕೊಂಡು ಬಂದಿರುವುದು ವಿಶೇಷ.ಈತ ಇಟ್ಟುಕೊಂಡಿರುವುದು ಸಣ್ಣ ಟೀ ಅಂಗಡಿಯಾಗಿದ್ದು ಅದರಲ್ಲಿನ ವ್ಯಾಪಾರ ಅವತ್ತಿನ ಹೊತ್ತಿನ ಊಟಕ್ಕೆ ಸಾಕಾಗುವಂತಿದೆ.ಅದರಲ್ಲೇ ಅಲ್ಪಸ್ವಲ್ಪ ಉಳಿಸಿ ರಾಜ್ಯೋತ್ಸವ ಆಚರಣೆಯ ಮುಂದಾಗುವ ಈತನ ರಾಜ್ಯೋತ್ಸವ ಆಚರಣೆಯಲ್ಲಿ ಸಂಘಸಂಸ್ಥೆಗಳ ಮುಖಂಡರುಗಳೆಲ್ಲ ಪಾಲ್ಗೊಳ್ಳುವ ಮಟ್ಟಕ್ಕೆ ವಿಜೃಂಭಣೆಯಿಂದ ನಡೆಸುತ್ತಾ ಬಂದಿದ್ದಾನೆ.

        ನವಂಬರ್ 1 ಬಂತೆಂದರೆ ಈತನ ಪುಟ್ಟ ಟೀ ಅಂಗಡಿಯಲ್ಲಿ ಹಬ್ಬದ ಸಡಗರ. ಅಂದು ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು, ಇನ್ನಿತರ ಸಂಸ್ಥೆಗಳು ರಾಜ್ಯೋತ್ಸವ ಆಚರಿಸಲಿ ಬಿಡಲಿ ಈತನ ಟೀ ಅಂಗಡಿಯ ಮುಂದೆ ಧ್ವಜಾರೋಹಣ ಮಾತ್ರ ಕಡ್ಡಾಯವಾಗಿ ನಡೆದಿರುತ್ತದೆ. ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅಭಿಮಾನಿಯಾದ ಈತ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿ ಚಿತ್ರದೊಂದಿಗೆ ಕನ್ನಡದ ಪ್ರಸಿದ್ಧ ಕವಿಗಳು,ಕನ್ನಡಕ್ಕಾಗಿ ಹೋರಾಡಿದ ಕಟ್ಟಾಳುಗಳ ಚಿತ್ರವನ್ನು ಇಟ್ಟು ಪೂಜಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾನೆ.

       ಡಾ.ರಾಜ್ ಮೇಲಿನ ಅಭಿಮಾನದಿಂದಾಗಿ ಇಂದು ಆತನ ಅಂಗಡಿಯ ಮುಂದೆ ಡಾ.ರಾಜ್ ದ್ವಾರಬಾಗಿಲು ಮಾಡಿಸುವ ಮೂಲಕ ಅಭಿಮಾನ ಮೆರೆದಿದ್ದಾನೆ.ಅವರು ಅಭಿನಯಿಸಿದ ಪೌರಾಣಿಕ ಪಾತ್ರಗಳ ಚಿತ್ರಗಳನ್ನು ಅಂಗಡಿ ತುಂಬ ಪ್ರದರ್ಶಿಸಿ, ಅಂಗಡಿಯ ಇಕ್ಕೆಲದಲ್ಲಿ ಕರ್ನಾಟಕ ಭೂಪಟದ ದೊಡ್ಡ ಕಟೌಟರ್ ಗಳನ್ನು ನಿಲ್ಲಿಸಿ, ಕನ್ನಡ ನಾಡುನುಡಿಗೆ ಸಂಬಂಧಿಸಿದ ಹಾಡುಗಳನ್ನು ಹಾಕಿ, ಅಂಗಡಿಯ ಮುಂಭಾಗದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ನಂತರ ಸಾರ್ವಜನಿಕರಿಗೆ ಸಿಹಿ ಮತ್ತು ಲಘು ಉಪಹಾರ ಹಂಚುವ ಮೂಲಕ ರಾಜ್ಯೋತ್ಸವವನ್ನು ಸಂಭ್ರಮಿಸಿದನು.

      ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಜಯಕುಮಾರ್ ಮೂಲಕ ಧ್ವಜಾರೋಹಣ ನೆರವೇರಿಸಿ, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅವರ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಹಿತವಚನ ಮಾತನಾಡಿಸಿ, ತಾಲ್ಲೂಕ್ ಪಂಚಾಯಿತಿ ಸದಸ್ಯ ಹೆಚ್.ಎನ್.ಕುಮಾರ್ ಮೂಲಕ ತಾಯಿ ಭುವನೇಶ್ವರಿಯ ಭಾವಚಿತ್ರ ಅನಾವರಣಗೊಳಿಸಿ,ಡಾ.ರಾಜ್ ಅಭಿಮಾನಿಗಳ ಬಳಗದಿಂದ ಡಾ.ರಾಜ್ ದ್ವಾರ ಲೋಕಾರ್ಪಣೆಗೊಳಿಸಿ,ಎಲ್ಲರಿಗೂ ಸಿಹಿ ವಿತರಿಸುವ ಮೂಲಕ ತನ್ನ ಕನ್ನಡದ ಸೇವೆಯನ್ನು ಸಾರ್ಥಕಗೊಳಿಸಿದನು.

       ಒಟ್ಟಾರೆ ಸಣ್ಣ ಟೀ ಅಂಗಡಿಯಾತನ ರಾಜ್ಯೋತ್ಸವ ಆಚರಿಸುವ ಮೂಲಕ ತನ್ನ ಭಾಷಾಭಿಮಾನ ಮೆರೆಯುತ್ತಿರುವುದು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಈತ ತನ್ನ ಅಂಗಡಿಗೆ ಮಾಡಿದ್ದ ಅಲಂಕಾರ, ನಡೆಸಿದ ಧ್ವಜಾರೋಹಣ, ಹಾಕಿದ್ದ ಕನ್ನಡದ ಹಾಡುಗಳಿಂದಾಗಿ ರಸ್ತೆಯಲ್ಲಿ ಹೋಗುವರೆಲ್ಲಾ ಒಮ್ಮೆ ಇಲ್ಲಿನಿಂತು ನೋಡಿ ಮುಂದೆ ಹೋಗುವಂತೆ ಮಾಡಿದ್ದವು.

      ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ.ರಾಜಕುಮಾರ್ ಅಭಿಮಾನಿ ಬಳಗದ ಉಪಾಧ್ಯಕ್ಷ ಈರುಳ್ಳಿ ಹೊನ್ನಪ್ಪ,ಪರಮೇಶ್,ಕಂಪನಹಳ್ಳಿ ರಂಗಸ್ವಾಮಿ,ಅರ್ಚಕ ರಾಜಣ್ಣ,ಬಾಳೆಕಾಯಿ ಕಿಟ್ಟಪ್ಪ,ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಕುಮಾರ್,ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ,ವೆಂಕಟೇಶ್,ಟಿಪ್ಪು ಯುವಕ ಸಂಘದ ಮಹಮ್ಮದ್ ಅಪ್ಸರ್,ಬಿ.ವಿ.ಶ್ರೀನಿವಾಸ್,ಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ,ಏಜೆಂಟ್ ಚನ್ನಕೇಶವ,ಜಯ ಕರ್ನಾಟಕ ಸಂಘಟನೆಯ ಮೋಹನ್ ಕುಮಾರ್,ಶಿಕ್ಷಕ ನಂದಾವಡಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link