ದಾವಣಗೆರೆ :
ಅಖಿಲ ಕರ್ನಾಟಕ ಡಾ.ಶಿವರಾಜ ಕುಮಾರ್ ಹಾಗೂ ರಾಜರತ್ನ ಪುನಿತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ಸಮರ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಅವರ 57ನೆ ಹುಟ್ಟುಹಬ್ಬವನ್ನು ಆಚರಿಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಜನ್ಮದಿನ ಆಚರಿಸಿ, ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸಮರ ಸೇನೆ ರಾಜ್ಯ ಗೌರವಾಧ್ಯಕ್ಷ ಡಿ.ಬಸವರಾಜ್, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಮೊದಲಿನಿಂದಲೂ ಕನ್ನಡ ಭಾಷೆ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಅನ್ಯ ಭಾಷೆ ಚಿತ್ರಗಳಲ್ಲಿ ನಟಿಸದಿರುವುದರಿಂದ ಅವರ ಭಾಷಾಭಿಮಾನಕ್ಕೆ ಅಭಿನಂದಿಸಬೇಕು. ಚಿತ್ರ ರಂಗದಲ್ಲಿ ಸೌಜನ್ಯ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಎಲ್ಲರನ್ನೂ ಒಟ್ಟಾಗಿ ನಡೆಸಿಕೊಳ್ಳುವ ಬಾಂಧವ್ಯದ ವ್ಯಕ್ತಿಯಾಗಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಭುಜ ನೋವು ನಿವಾರಣೆ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದು ಅವರ ಆರೋಗ್ಯ ಸುಧಾರಿಸಲಿ ಆಯುರಾರೋಗ್ಯ ಸಂಪತ್ತು ವೃದ್ಧಿಸಲಿ ಎಂದು ಆಶಿಸಿದರು.
ಕನ್ನಡ ಚಲನ ಚಿತ್ರ ರಂಗದಲ್ಲಿ ಸೌಹಾರ್ದತೆ ಬೆಳೆಯಲು ಶಿವರಾಜ್ ಕುಮಾರ್ ಮುಂಚೂಣಿಯಲ್ಲಿದ್ದು, ಉನ್ನತಮಟ್ಟಕ್ಕೆ ರಂಗವನ್ನು ಬೆಳೆಸುತ್ತಿದ್ದಾರೆ.
ಕಲೆ ಸಂಸ್ಕೃತಿ ಬೆಳೆಸಲು ಶಿವರಾಜ್‍ಕುಮಾರ್ ಅವರು ಕಲಾವಿದರನ್ನು ಬೆಳೆಸಲು ಹೆಚ್ಚು ಆಸಕ್ತರು. ಕಿರಿಯ ಕಲಾವಿದರನ್ನು ಗೌರವಿಸುವ ಸೌಜನ್ಯದ ಸ್ವಭಾವದ ಅವರು ನಟನೆ, ನೃತ್ಯ ಸಾಹಸ ಚಟುವಟಿಕೆಗಳಲ್ಲೂ ಹೆಚ್ಚು ಲವಲವಿಕೆಯಿಂದಿರುತ್ತಾರೆ. ಇನ್ನೂ ಉತ್ತಮವಾಗಿ ಕಲಾ ರಂಗದಲ್ಲಿ ಬೆಳೆಯಲಿ ಎಂದು ಕರ್ನಾಟಕ ಸಮರಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಿ.ವಾಸುದೇವ್ ಹಾರೈಸಿದರು.
ಅಖಿಲ ಕರ್ನಾಟಕ ಡಾ.ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಯೋಗೀಶ್ ಮಾತನಾಡಿ, ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಶಿವರಾಜ್‍ಕುಮಾರ್ ಅವರ 57ನೆ ಜನ್ಮದಿನ ಆಚರಿಸಿದ್ದು, ಅವರನ್ನು ಪ್ರೋತ್ಸಾಹಿಸಲಾಗುತ್ತಿದ್ದೇವೆ. ಅವರು ಇನ್ನು ಮುಂದೆಯೂ ಉತ್ತಮ ಚಿತ್ರಗಳನ್ನು ಮಾಡುತ್ತಾ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಬೆಳೆಸಲಿ ಎಂದರು.
ಕಾರ್ಯಕ್ರಮದಲ್ಲಿ ಸಮರಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಂದೂರು ಪರಮೇಶ್, ರಾಜ್ಯವಕ್ತಾರ ವಿಜಯ್‍ಜಾಧವ್, ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮುಜೀದ್, ರಾಜ್ಯ ಕಾರ್ಯದರ್ಶಿ ಉಮೇಶ್ ಪಾಟೀಲ್, ಕೋಟೆಹಾಳ್ ಸಿದ್ದೇಶ್, ರಾಜ್ಯ ಮಹಿಳಾ ಉಪಾಧ್ಯಕ್ಷೆ ವೈ.ಭಾಗ್ಯದೇವಿ, ಮಧುಮತಿ, ಕವಿತಾಕುಬಸದ್, ಜಿ.ಪಿ.ಪ್ರಕಾಶ್, ಲಕ್ಷ್ಮಿದೇವಿ, ವಿದ್ಯಾಮಂಜುನಾಥ್, ಸಾವಿತ್ರಮ್ಮ ತನ್ವೀರ್, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಮನು, ತಿಪ್ಪೇಸ್ವಾಮಿ ಹಿಂಡಸಘಟ್ಟ, ಅಂಜಿನಿ, ಪರಶುರಾಮ, ಶಶಿನಾಯಕ, ಶಿವಕುಮಾರ್, ನವೀನ್‍ಕುಮಾರ್ ಮುಂತಾದವರಿದ್ದರು.